ADVERTISEMENT

ಬೆಂಗಳೂರಿನಲ್ಲಿ ಆರಂಭವಾಗಲಿದೆ ಜಿಐಐ ಕಚೇರಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 17:41 IST
Last Updated 18 ಅಕ್ಟೋಬರ್ 2021, 17:41 IST
ಮುರುಗೇಶ್ ಆರ್‌. ನಿರಾಣಿ
ಮುರುಗೇಶ್ ಆರ್‌. ನಿರಾಣಿ   

ಬೆಂಗಳೂರು: ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ಗಲ್ಫ್‌ ಇಸ್ಲಾಮಿಕ್‌ ಹೂಡಿಕೆ (ಜಿಐಐ) ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಕಚೇರಿ ತೆರೆಯಲು ನಿರ್ಧರಿಸಿದ್ದು, ಕರ್ನಾಟಕದಲ್ಲಿ ಮೂರು ವರ್ಷಗಳಲ್ಲಿ ₹ 3,500 ಕೋಟಿ ಹೂಡಿಕೆ ಮಾಡಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ಆರ್‌. ನಿರಾಣಿ ತಿಳಿಸಿದ್ದಾರೆ.

ದುಬೈ ವರ್ಲ್ಡ್‌ ಎಕ್ಸ್‌ಪೋದಲ್ಲಿ ಸೋಮವಾರ ಜಿಐಐ ಸಮೂಹದ ಉದ್ದಿಮೆಗಳೊಂದಿಗೆ ರಾಜ್ಯ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಆ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ‘ಯುಎಇಯ ಪ್ರಮುಖ ಷರಿಯಾ– ಕಂಪ್ಲೈಂಟ್‌ ಹಣಕಾಸು ಸಂಸ್ಥೆಯಾಗಿರುವ ಜಿಐಐ ಬೆಂಗಳೂರಿನಲ್ಲಿ ತನ್ನ ಕಚೇರಿ ತೆರೆಯುವ ನಿರ್ಧಾರ ಮಾಡಿದೆ. ಆ ಮೂಲಕ ಭಾರತೀಯ ನವೋದ್ಯಮಗಳಿಗೆ ಸಹಭಾಗಿತ್ವ ನೀಡಲಿದೆ’ ಎಂದು ಹೇಳಿದ್ದಾರೆ.

ಜಿಐಐ ನಿರ್ಧಾರದಿಂದ ಕರ್ನಾಟಕ ಮತ್ತು ಯುಎಇ ನಡುವಣ ಸಂಬಂಧ ಮತ್ತಷ್ಟು ವೃದ್ಧಿಯಾಗಲಿದೆ. ರಾಜ್ಯದಲ್ಲಿರುವ ಹೂಡಿಕೆಯ ಅವಕಾಶಗಳನ್ನು ಯುಎಇ ಬಳಸಿಕೊಳ್ಳಲು ಅವಕಾಶ ದೊರೆಯಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಒಪ್ಪಂದದ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಜಿಐಐ ಪಾಲುದಾರರಾದ ಮೊಹಮ್ಮದ್ ಅಲ್ಹಾಸನ್‌ ಮತ್ತು ಪಂಕಜ್‌ ಗುಪ್ತಾ, ‘ಭಾರತವು ಜಿಐಐಗೆ ಪ್ರಮುಖ ಹೂಡಿಕೆಯ ತಾಣವಾಗಿದೆ. ಆರಂಭಿಕ ಸುತ್ತಿನ ಮಾತುಕತೆಗಳಲ್ಲೇ ದೊಡ್ಡ ಯಶಸ್ಸು ದೊರಕಿದೆ. ₹ 1,000 ಕೋಟಿಗೂ ಹೆಚ್ಚು ವಹಿವಾಟು ನಡೆಸಲು ಜಿಐಐ ಉತ್ಸುಕವಾಗಿದೆ’ ಎಂದಿದ್ದಾರೆ.

ಭಾರತದ ಕಾನ್ಸಲ್‌ ಜನರಲ್‌ ಡಾ.ಅಮಾನ್‌ ಪುರಿ ಒಪ್ಪಂದದ ವೇಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.