ADVERTISEMENT

‘ರಂಗಭೂಮಿ ಗಾರುಡಿಗ ಡಾ.ಗಿರೀಶ’

ರವಿ ಕುಲಕರ್ಣಿ
Published 10 ಜೂನ್ 2019, 20:00 IST
Last Updated 10 ಜೂನ್ 2019, 20:00 IST
   

ಧಾರವಾಡ: ‘ನಾನು ಕವಿಯಾಗಬೇಕೆಂದಿದ್ದೆ, ಆದರೆ ಕಾವ್ಯ ಹಿಡಿತಕ್ಕೆ ಸಿಗಲಿಲ್ಲ. ಹೀಗಾಗಿ ನಾಟಕಕಾರನಾದೆ’ ಎಂದು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಗಿರೀಶ ಕಾರ್ನಾಡರು ಹೇಳಿದರೆ, ‘ನನಗೆ ನಾಟಕಕಾರನಾಗಬೇಕು ಎನ್ನುವ ಆಸೆ ಇತ್ತು. ಆಗಲಿಲ್ಲ. ಕಾವ್ಯ ಕೈ ಹಿಡಿಯಿತು’ ಎಂದು ಪ್ರಶಸ್ತಿ ನೀಡಿದ ಅಟಲ ಬಿಹಾರಿ ವಾಜಪೇಯಿ ಹೇಳಿದ್ದರಂತೆ.

ಹೀಗೆಂದು ನೆನಪಿಸಿಕೊಂಡವರು ಗಿರೀಶ ಕಾರ್ನಾಡರ ಒಡನಾಡಿ ಸುರೇಶ ಕುಲಕರ್ಣಿ. ಕಾರ್ನಾಡರೊಂದಿಗೆ ಹಲವು ದಶಕಗಳ ಕಾಲ ಜತೆಗಿದ್ದ, ಅವರ ಹಲವು ಸಿನಿಮಾಗಳಿಗೆ ಸಹಾಯಕರಾಗಿ ಸುರೇಶ ಕೆಲಸ ಮಾಡಿದ್ದರು.

ಕಾರ್ನಾಡರಿಗೆ ಬಾಲ್ಯದಿಂದಲೇ ನಾಟಕದ ಹುಚ್ಚಿತ್ತು. ಶಿರಸಿಯಲ್ಲಿ ನಡೆಯುತ್ತಿದ್ದ ಐತಿಹಾಸಿಕ, ಪೌರಾಣಿಕ ನಾಟಕಗಳನ್ನು ಆಸಕ್ತಿಯಿಂದ ನೋಡುತ್ತಿದ್ದ ಬಾಲಕನಿಗೆ ರಂಗಭೂಮಿಯ ಆರಂಭಿಕ ಪರಿಚಯವಾಗಿತ್ತು.ವರ್ಗಾವಣೆಗೊಂಡು ಧಾರವಾಡಕ್ಕೆ ಬಂದ ತಂದೆಯ ಜತೆ ಗಿರೀಶ ಕೂಡಾ ಬಂದರು.

ADVERTISEMENT

ಡಾ. ದ.ರಾ.ಬೇಂದ್ರೆ ಮತ್ತು ಗೋಪಾಲಕೃಷ್ಣ ಅಡಿಗರ ಕಾವ್ಯದ ಪ್ರಭಾವಕ್ಕೆ ಒಳಗಾದರು. ಕರ್ನಾಟಕ ಕಾಲೇಜಿನಲ್ಲಿ ಪದವಿ ಮುಗಿಸಿ ಎಂ.ಎ. ಮಾಡಲು ಮುಂಬೈಗೆ ತೆರಳಿದರು. ಆಗ ಪ್ರತಿಷ್ಠಿತ ರೋಡ್ಸ್‌ ಸ್ಕಾಲರ್ಶಿಪ್‌ ಪಡೆದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರು. ಈ ಸಮಯದಲ್ಲಿಯೇ ‘ಯಯಾತಿ’ ನಾಟಕ ಕೃತಿಯಾಗಿ ಹೊರಬಂದಿತ್ತು.

ಮದ್ರಾಸ್‌ನಲ್ಲಿ ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌ನ ಜನರಲ್‌ ಮ್ಯಾನೇಜರ್‌ ಆಗಿ ನೇಮಕವಾದರು. ಅಲ್ಲಿ ನಾಟಕಗಳನ್ನು ಆಡುತ್ತಿದ್ದ ‘ಮದ್ರಾಸ್‌ ಪ್ಲೇಯರ್ಸ್‌’ ತಂಡದ ಒಡನಾಟ ಬಂತು. ಅದರಿಂದಾಗಿ ಇಂಗ್ಲೀಷ್‌ ನಾಟಕಗಳಲ್ಲಿ ಅಭಿನಯಿಸಿದರು. ಅಲ್ಲಿಂದ ಪುಣೆ
ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಬಂದ ಮೇಲೆ ನಾಟಕ, ಸಿನಿಮಾ ಹೀಗೆ ಅವರ ಕಾರ್ಯ ವ್ಯಾಪ್ತಿ ವಿಸ್ತಾರವಾಯಿತು.

ಕಾರ್ನಾಡರ ನಾಟಕಗಳು ಕನ್ನಡದಲ್ಲಿ ಪ್ರಕಟವಾದ ಸ್ವಲ್ಪ ದಿನಗಳಲ್ಲೇ ಬೇರೆ ಭಾಷೆಗಳಲ್ಲಿ ಅನುವಾದಗೊಳ್ಳುತ್ತಿದ್ದವು ಮತ್ತು ಪ್ರದರ್ಶನಗೊಳ್ಳುತ್ತಿದ್ದವು. ಪುರಾಣ, ಇತಿಹಾಸದ ಅಂಗಳದಿಂದ ವಿಷಯ, ವಸ್ತು ಆಯ್ಕೆ ಮಾಡಿಕೊಂಡು ಅದಕ್ಕೊಂದು ಹೊಸ ಆಯಾಮ ನೀಡುತ್ತಿದ್ದುದು ಕಾರ್ನಾಡರ ವಿಶೇಷ. ಉತ್ತರ ಕರ್ನಾಟಕದ ಭಾಷೆ, ಇಲ್ಲಿನ ಅಪರೂಪದ ನುಡಿಗಟ್ಟುಗಳನ್ನು ತಮ್ಮ ನಾಟಕಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡವರು. ಮಾಡುವ ಕೆಲಸವನ್ನು ಅತ್ಯಂತ ಸೂಕ್ಷ್ಮವಾಗಿ, ಶಿಸ್ತಿನಿಂದ ಮಾಡುತ್ತಿದ್ದರು. ನೋಡಲು ಅತ್ಯಂತ ಗಂಭೀರ ಎನಿಸುತ್ತಿದ್ದರೂ ಅಪರೂಪದ ಸ್ನೇಹ ಜೀವ ಎಂದು ಗತಕಾಲದ ನೆನಪುಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.