ADVERTISEMENT

ನೇಕಾರರಿಗೆ ನೆರವು: ಸರ್ಕಾರಕ್ಕೆ ಉಮಾಶ್ರೀ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 16:05 IST
Last Updated 10 ಜೂನ್ 2020, 16:05 IST
ಮಾಜಿ ಸಚಿವೆ ಉಮಾಶ್ರೀ
ಮಾಜಿ ಸಚಿವೆ ಉಮಾಶ್ರೀ    

ಬೆಳಗಾವಿ: ‘ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಸಂಕಷ್ಟದ ಸುಳಿಗೆ ಸಿಲುಕಿರುವ ನೇಕಾರರಿಗೆ ಸರ್ಕಾರ ಕೂಡಲೇ ನೆರವಾಗಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ನೇಕಾರರ ಕುಟುಂಬದವರಿಗೆ ಪರಿಹಾರ ನೀಡಬೇಕು’ ಎಂದು ಕಾಂಗ್ರೆಸ್‌ ನಾಯಕಿ ಉಮಾಶ್ರೀ ಒತ್ತಾಯಿಸಿದರು.

ಇಲ್ಲಿನ ವಡಗಾವಿಯ ಲಕ್ಷ್ಮಿನಗರದಲ್ಲಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ನೇಕಾರ ಸುಜಿತ ಉಪರಿ ಅವರ ಕುಟುಂಬದವರಿಗೆ ಬುಧವಾರ ಸಾಂತ್ವನ ಹೇಳಿ ಅವರು ಮಾತನಾಡಿದರು.

‘ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ್ದು ಹಾಗೂ ಜಿಎಸ್‌ಟಿ ವಿಧಿಸಿದ್ದರಿಂದ ನೇಕಾರರು ಸಂಕಷ್ಟಕ್ಕೆ ಒಳಗಾಗಿದ್ದರು. ಬಳಿಕ ನೆರೆ ಮತ್ತು ಅತಿವೃಷ್ಟಿ ಅವರನ್ನು ಬಾಧಿಸಿತ್ತು. ಈಗ, ಲಾಕ್‌ಡೌನ್‌ನಿಂದ ಮತ್ತಷ್ಟು ನೋವುಂಡಿದ್ದಾರೆ. ಸಾಲ ತೀರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಪೂರ್ವ ಸಿದ್ಧತೆ ಇಲ್ಲದೆ ಘೋಷಣೆಯಾದ ಲಾಕ್‌ಡೌನ್‌ ಪರಿಸ್ಥಿತಿ ಎದುರಿಸಬೇಕಾಯಿತು. ಈ ವೇಳೆ, ನೆರವಿಗೆ ಧಾವಿಸಬೇಕಾಗಿದ್ದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೇಕಾರರು ಮತ್ತು ರೈತರ ಮೂಗಿಗೆ ತುಪ್ಪ ಸವರುವ ಕೆಲಸವನ್ನಷ್ಟೇ ಮಾಡುತ್ತಿವೆ’ ಎಂದು ದೂರಿದರು.

ADVERTISEMENT

‘ರೈತರು ಆತ್ಮಹತ್ಯೆ ಮಾಡಿಕೊಂಡರೆ ಕುಟುಂಬದವರಿಗೆ ನೀಡುವ ಪರಿಹಾರವನ್ನು ನಮ್ಮ ಸರ್ಕಾರ ₹ 5 ಲಕ್ಷಕ್ಕೆ ಏರಿಸಿತ್ತು. ನೇಕಾರರಿಗೂ ಇದನ್ನು ವಿಸ್ತರಿಸಬೇಕು. ಜಿಲ್ಲಾಧಿಕಾರಿಯು ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿ, ನೇಕಾರರಿಂದ ಸಾಲ ವಸೂಲಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.

‘ನೇಕಾರರು ಆರ್ಥಿಕವಾಗಿ ಸಬಲರಾಗುವವರೆಗೂ ಸರ್ಕಾರ ಪ್ಯಾಕೇಜ್ ಘೋಷಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.