ADVERTISEMENT

ಖನಿಜ ಸಂಪತ್ತು ಸಮೀಕ್ಷೆಗೆ ಜಾಗತಿಕ ಟೆಂಡರ್‌: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 23 ಮೇ 2021, 20:54 IST
Last Updated 23 ಮೇ 2021, 20:54 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಮೈಸೂರು: ‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಖನಿಜ ಸಂಪತ್ತಿನ ಸಮೀಕ್ಷೆಗೆ ಜಾಗತಿಕ ಟೆಂಡರ್ ಕರೆಯಲು ಚಿಂತನೆ ನಡೆಸಲಾಗಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

‘ಹೊಸ ತಂತ್ರಜ್ಞಾನ ಅಳವಡಿಸಿ ಕೊಂಡು ಖನಿಜ ಸಂಪತ್ತನ್ನು ಸಮೀಕ್ಷೆ ನಡೆಸಿ ಸಂರಕ್ಷಣೆ ಮಾಡುವ ಉದ್ದೇಶವಿದೆ. ನಮ್ಮಲ್ಲಿ ಲಭ್ಯವಿರುವ ಖನಿಜ ಸಂಪತ್ತಿನ ಪ್ರಮಾಣ, ಗುಣಮಟ್ಟದ ನಿಖರ ಮಾಹಿತಿ ತಿಳಿಯಬೇಕಿದೆ’ ಎಂದುಭಾನುವಾರ ಸುದ್ದಿಗೋಷ್ಠಿಯಲ್ಲಿಹೇಳಿದರು.

‘ರಾಜ್ಯದಲ್ಲಿರುವ ಖನಿಜ ಸಂಪತ್ತನ್ನು ಈ ಹಿಂದೆ ಹಳೆಯ ಪದ್ಧತಿಯಲ್ಲಿ ಸಮೀಕ್ಷೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಸಮೀಕ್ಷೆ ಮಾಡಿಸಲಿದ್ದೇವೆ. ಆಸ್ಟ್ರೇಲಿಯಾ, ಬ್ರೆಜಿಲ್‌ ಮುಂತಾದ ದೇಶಗಳಲ್ಲಿ ಸಮೀಕ್ಷೆಗೆ ಬಳಸುವ ತಂತ್ರಜ್ಞಾನ ನಮ್ಮಲ್ಲಿ ಲಭ್ಯವಿಲ್ಲ. ಜಾಗತಿಕ ಟೆಂಡರ್‌ ಕರೆದರೆ, ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಸಮೀಕ್ಷೆ ನಡೆಸಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

5 ಟನ್‌ ಚಿನ್ನ ತೆಗೆಯಲು ನಿರ್ಧಾರ: ನಿರಾಣಿ
ಮಂಡ್ಯ: ‘ರಾಯಚೂರು ಜಿಲ್ಲೆ ಹಟ್ಟಿ ಚಿನ್ನದ ಗಣಿಯಿಂದ ಪ್ರತಿವರ್ಷ 5 ಟನ್‌ ಚಿನ್ನ ತೆಗೆಯಲು ನಿರ್ಧಾರ ಮಾಡಲಾಗಿದೆ. ಅದಕ್ಕಾಗಿ ಡಿಪಿಆರ್‌ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಭಾನುವಾರ ಹೇಳಿದರು.

‘ಸದ್ಯ ಹಟ್ಟಿ ಚಿನ್ನದ ಗಣಿಯಲ್ಲಿ ವರ್ಷಕ್ಕೆ 1.5 ಟನ್‌ ಚಿನ್ನ ತೆಗೆಯಲಾಗುತ್ತಿದೆ. ಚಿನ್ನವನ್ನು ನೇರವಾಗಿ ಮಾರಾಟ ಮಾಡದೇ ಚಿನ್ನದ ನಾಣ್ಯ ತಯಾರಿಸಿ ಆಭರಣ ತಯಾರಿಕೆಗೆ ಆದ್ಯತೆ ನೀಡಲಾಗುವುದು. ಬೆಂಗಳೂರಿನ ಖನಿಜ ಭವನದಲ್ಲಿಯೇ ಆಭರಣ ಮಳಿಗೆ ಸ್ಥಾಪಿಸಲಾಗುವುದು. ಅದಕ್ಕಾಗಿ ಒಂದು ನಿಗಮ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.