ADVERTISEMENT

ರಾಜ್ಯದ ಟ್ಯಾಕ್ಸಿಗಳಿಗೆ ತಾತ್ಕಾಲಿಕ ಪರ್ಮಿಟ್‌ ಚಿಂತನೆ: ಗೋವಾ ಸಿಎಂ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 14:55 IST
Last Updated 8 ಅಕ್ಟೋಬರ್ 2022, 14:55 IST
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಶನಿವಾರ ಭೇಟಿನೀಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಗೌರವಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಶನಿವಾರ ಭೇಟಿನೀಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಗೌರವಿಸಿದರು.   

ಉಡುಪಿ: ಗೋವಾ ಪ್ರವೇಶಿಸುವ ಕರ್ನಾಟಕದ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್‌ಗಳಿಗೆ ತಾತ್ಕಾಲಿಕ ಪರ್ಮಿಟ್‌ ನೀಡುವ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದರು.

ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಟ್ಯಾಕ್ಸಿಮನ್ಸ್‌ ಹಾಗೂ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಗೋವಾಗೆ ಬರುವ ಕರ್ನಾಟಕದ ಅಧಿಕೃತ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್‌ ಮಾಲೀಕರಿಗೆ ದುಬಾರಿ ತೆರಿಗೆಯ ಹೊರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಉಭಯ ರಾಜ್ಯಗಳ ಮೀನುಗಾರರ ನಡುವೆ ಸಮುದ್ರ ಗಡಿ ಉಲ್ಲಂಘನೆ, ಮೀನುಗಾರಿಕೆಗೆ ಅಡ್ಡಿ ಸೇರಿದಂತೆ ಕೆಲವು ಭಿನ್ನಾಭಿಪ್ರಾಯಗಳಿದ್ದು ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಿ ಸೌಹಾರ್ದದ ವಾತಾವರಣಕ್ಕೆ ಒತ್ತು ನೀಡಲಾಗುವುದು ಎಂದರು.

ADVERTISEMENT

ಗೋವಾ ಸರ್ಕಾರ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಉಡುಪಿ ಜಿಲ್ಲೆಯ ಜತೆ ಸಹಭಾಗಿತ್ವ ವಹಿಸಲು ಸಿದ್ಧವಿದೆ. ಉಡುಪಿಯ ಕರಾವಳಿಯ ತೀರಗಳಲ್ಲಿ ಕ್ರೂಜ್ ಟೂರಿಸಂ ಆರಂಭಿಸಲು ಯೋಜನೆ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಿದರೆ ಅನುಮೋದನೆ ನೀಡಲಾಗುವುದು. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದರೆ ಗೋವಾದಿಂದ ಉಡುಪಿಗೆ ನೇರ ವಿಮಾನ ಸಂಚಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್ 1947ರಲ್ಲಿ ಭಾರತ್ ಜೋಡೋ ಪಾದಯಾತ್ರೆ ಮಾಡಿದ್ದರೆ ಗೋವಾ ವಿಮೋಚನೆ ತಡವಾಗುತ್ತಿರಲಿಲ್ಲ. 1955ರಲ್ಲಿ ಪೋರ್ಚುಗೀಸರ ವಿರುದ್ಧ ಯುದ್ಧಮಾಡಿ ಹಲವು ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾಗಬೇಕಾದ ಅಗತ್ಯತೆ ಇರುತ್ತಿರಲಿಲ್ಲ. ಈಶಾನ್ಯ ಭಾರತ ಸಂಪೂರ್ಣ ನಮ್ಮ ಅವಿಭಾಜ್ಯ ಅಂಗವಾಗಿರುತ್ತಿತ್ತು. ಪೂರ್ಣ ಕಾಶ್ಮೀರ ಒಳಗೊಂಡ ಅಖಂಡ ಭಾರತ ಇರುತ್ತಿತ್ತು ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.