ADVERTISEMENT

ಗೋವಾ–ತಮ್ನಾರ್ ಮಾರ್ಗ: ವರ್ಷದಲ್ಲೇ ರಾಜ್ಯದ ನಿಲುವು ಬದಲು

ಮಂಜುನಾಥ್ ಹೆಬ್ಬಾರ್‌
Published 31 ಮಾರ್ಚ್ 2025, 10:31 IST
Last Updated 31 ಮಾರ್ಚ್ 2025, 10:31 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ನವದೆಹಲಿ: ಗೋವಾ– ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಕರ್ನಾಟಕದ 435 ಎಕರೆ ಅರಣ್ಯ ಒದಗಿಸುವ ಪ್ರಸ್ತಾವವನ್ನು ಕಳೆದ ವರ್ಷ ತಿರಸ್ಕರಿಸಿದ್ದ ಕರ್ನಾಟಕ ಅರಣ್ಯ ಇಲಾಖೆಯು ವರ್ಷದಲ್ಲೇ ಯೂ–ಟರ್ನ್‌ ಹೊಡೆದಿದೆ. 

ಈ ವಿದ್ಯುತ್‌ ವಿತರಣಾ ಜಾಲದ ಯೋಜನೆಯನ್ನು ಪ್ರಧಾನಿ ಕಾರ್ಯಾಲಯವೇ ಮೇಲ್ವಿಚಾರಣೆ ನಡೆಸುತ್ತಿದೆ. ರಾಜ್ಯದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಪ್ರಧಾನಿ ಹಾಗೂ ಕೇಂದ್ರ ಇಂಧನ ಸಚಿವರು ರಾಜ್ಯಕ್ಕೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರದ ನಿರಂತರ ಒತ್ತಡವೇ ರಾಜ್ಯವು ನಿಲುವು ಬದಲಿಸಲು ಕಾರಣ ಎಂದು ಮೂಲಗಳು ತಿಳಿಸಿವೆ. 

ಧಾರವಾಡ ಜಿಲ್ಲೆಯ ನರೇಂದ್ರದಿಂದ ಗೋವಾಕ್ಕೆ ವಿದ್ಯುತ್ ಮಾರ್ಗ ನಿರ್ಮಿಸಲು ಮುಂದಾಗಿರುವ ‘ಗೋವಾ– ತಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್’ ರಾಜ್ಯದ ಅರಣ್ಯವನ್ನು ಅರಣ್ಯೇತರ ಬಳಕೆಗೆ ಅವಕಾಶ ನೀಡುವಂತೆ ಕೋರಿದೆ. ಧಾರವಾಡ ಜಿಲ್ಲೆಯಲ್ಲಿ 4.70 ಹೆಕ್ಟೇರ್, ಬೆಳಗಾವಿ ಜಿಲ್ಲೆಯಲ್ಲಿ 101 ಹೆಕ್ಟೇರ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 70 ಹೆಕ್ಟೇರ್ ಅರಣ್ಯವನ್ನು ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಿದೆ. ಈ ಯೋಜನೆ ಜಾರಿಯಾದರೆ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ 177 ಹೆಕ್ಟೇರ್‌ ದಟ್ಟ ಕಾಡು ನಾಶವಾಗಲಿದೆ ಹಾಗೂ ಅಂದಾಜು 72 ಸಾವಿರ ಮರಗಳ ಹನನವಾಗಲಿದೆ. 

ಅರಣ್ಯ ಪಡೆಯ ಮುಖ್ಯಸ್ಥರ ಸಹಮತಿ ಮೇರೆಗೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರಿಗೆ ಇದೇ 25ರಂದು ಪ್ರಸ್ತಾವ ಸಲ್ಲಿಸಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ) ಬ್ರಿಜೇಶ್‌ ಕುಮಾರ್, ‘ಪರ್ಯಾಯ ಮಾರ್ಗದಲ್ಲಿ ಈ ಯೋಜನೆ ಅನುಷ್ಠಾನ ಮಾಡಬಹುದು ಅಥವಾ ಮರಗಳ ಹನನ ಕಡಿಮೆ ಮಾಡಲು ಆಧುನಿಕ ತಂತ್ರಜ್ಞಾನ ಬಳಸಲು ಯೋಜನಾ ಸಂಸ್ಥೆಯನ್ನು ನಿರ್ದೇಶಿಸಬಹುದು’ ಎಂದು ತಿಳಿಸಿದ್ದಾರೆ. 

ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ದೇಶನದ ಮೇರೆಗೆ 2024ರ ಮಾರ್ಚ್‌ 16ರಂದು ಅರಣ್ಯ ಪಡೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌, ‘ಈ ಅರಣ್ಯ ತೀರುವಳಿ ಪ್ರಸ್ತಾವ ತಿರಸ್ಕರಿಸಬೇಕು. ಅರಣ್ಯೇತರ ಪ್ರದೇಶದಲ್ಲಿ ಪ್ರಸ್ತಾಪಿತ ವಿದ್ಯುತ್ ವಿತರಣಾ ಜಾಲ ಕೈಗೆತ್ತಿಕೊಳ್ಳಬೇಕು ಎಂದು ನಿರ್ದೇಶನ ನೀಡಬೇಕು. ಭವಿಷ್ಯದಲ್ಲಿ ಇಂತಹ ಪ್ರಸ್ತಾವನೆಗಳ ಬಗ್ಗೆ ಪ್ರಾಥಮಿಕ ಹಂತದಲ್ಲೇ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಅಗಾಧ ಪ್ರಮಾಣದ ಅರಣ್ಯ ನಾಶವಾಗುತ್ತಿದ್ದರೂ, ಈ ಪ್ರಸ್ತಾವನೆಯ ಶಿಫಾರಸು ಮಾಡಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಬೇಕು’ ಎಂದು ತಾಕೀತು ಮಾಡಿದ್ದರು. 

ಸೆಪ್ಟೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ 79ನೇ ಸಭೆಯಲ್ಲಿ ಮಹದಾಯಿ ಯೋಜನೆಯ ಪ್ರಸ್ತಾವ ಮುಂದೂಡಲಾಗಿತ್ತು. ಗೋವಾ–ತಮ್ನಾರ್‌ ಯೋಜನೆಗೆ ಷರತ್ತುಬದ್ಧ ಅನುಮೋದನೆ ನೀಡಲಾಗಿತ್ತು. ವನ್ಯಜೀವಿ ಮಂಡಳಿಯ ಈ ತೀರ್ಮಾನಕ್ಕೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. 

ಮೊದಲು ಮಹದಾಯಿಗೆ ಒಪ್ಪಿಗೆ ಕೊಡಲಿ: ಖಂಡ್ರೆ

ಗೋವಾ–ತಮ್ನಾರ್ ಯೋಜನೆಯು ರಾಷ್ಟ್ರೀಯ ವಿತರಣಾ ಜಾಲದ ಯೋಜನೆಯಾಗಿದ್ದು, ಇದಕ್ಕೆ ಸಹಕಾರ ನೀಡಬೇಕು ಎಂದು ಪ್ರಧಾನಿಯವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಮಹದಾಯಿ ಯೋಜನೆಗೆ ಅನುಮೋದನೆ ಕೊಟ್ಟರೆ ಗೋವಾ–ತಮ್ನಾರ್‌ಗೆ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಯವರು ಪತ್ರ ಬರೆದು ಸ್ಪಷ್ಟಪಡಿಸಿದ್ದರು. ನಮ್ಮ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.
ಈಶ್ವರ ಖಂಡ್ರೆ, ಅರಣ್ಯ ಸಚಿವ

‘ಹುಲಿ ಸಂರಕ್ಷಣೆಗೆ ಪೆಟ್ಟು’ 

ತಿರಸ್ಕೃತಗೊಂಡಿರುವ ಪ್ರಸ್ತಾವನೆಯು ಪರಿಶೀಲನೆ ಹೆಸರಿನಲ್ಲಿ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿರುವುದು ಕಳವಳಕಾರಿ. ಈಗಿರುವ ಪ್ರಸ್ತಾವನೆ ಪ್ರಕಾರ ಉದ್ದೇಶಿತ ಮಾರ್ಗವು ಹುಲಿ ಕಾರಿಡಾರ್, ಕಾಳಿ ಹುಲಿ ಮೀಸಲಿನ ಪರಿಸರ ಸೂಕ್ಷ್ಮ ಪ್ರದೇಶ, ದಾಂಡೇಲಿ ಅಭಯಾರಣ್ಯ ಹಾಗೂ ದಾಂಡೇಲಿ ಆನೆಧಾಮದ ಮೂಲಕ ಹಾದುಹೋಗಲಿದ್ದು 72000 ಕ್ಕೂ ಹೆಚ್ಚಿನ ಮರಗಳನ್ನು ಕಡಿಯಬೇಕಾಗುತ್ತದೆ. ಯೋಜನೆಯಿಂದ ಪಶ್ಚಿಮ ಘಟ್ಟದ ಜೀವಸಂಕುಲಕ್ಕೆ ಭಾರಿ ಹಾನಿಯಾಗಲಿದೆ. ಅರಣ್ಯ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ರಾಜ್ಯದಲ್ಲಿ ಕಾಳಿ ಸೇರಿದಂತೆ ವಿವಿಧ ಹುಲಿ ಮೀಸಲು ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಕುಸಿತವಾಗಿದೆ. ಇಂತಹ ಸನ್ನಿವೇಶದಲ್ಲಿ ಯೋಜನೆಗೆ ಅನುಮತಿ ನೀಡಿದಲ್ಲಿ ಹುಲಿಗಳಿಗೆ ಅತ್ತ್ಯುತ್ತಮ ಆವಾಸಸ್ಥಾನಗಳಾಗಲು ಎಲ್ಲ ಅವಕಾಶ ಇರುವ ಬೆಳಗಾವಿ ಹಾಗೂ ಹಳಿಯಾಳ ವಿಭಾಗದ ಅರಣ್ಯ ಪ್ರದೇಶಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಯೋಜನೆಯನ್ನು ಈ ಕೂಡಲೇ ತಿರಸ್ಕರಿಸಬೇಕು.
ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ
ತಲೆಮಾರುಗಳಿಂದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ವನವಾಸಿಗಳಿಗೆ ಅನುಕೂಲವಾಗುವ ಮೊಬೈಲ್ ಟವರ್, ರಸ್ತೆ ಬದಿ ಭೂಗರ್ಭದಲ್ಲಿ ಒಎಫ್‌ಸಿ ಕೇಬಲ್ ಅಳವಡಿಕೆ, ರಸ್ತೆ, ಕುಡಿಯುವ ನೀರಿನ ಚಿಕ್ಕ ಪುಟ್ಟ ಯೋಜನೆಗಳಿಗೆ ಸಲ್ಲಿಸುವ ಪ್ರಸ್ತಾವನೆಗಳನ್ನು ಅರಣ್ಯ ನಾಶದ ನೆಪ ಹೇಳಿ ಅರಣ್ಯ ಇಲಾಖೆ ತಿರಸ್ಕಾರ ಮಾಡುತ್ತದೆ. ವನವಾಸಿಗಳನ್ನು ಪುನರ್ವಸತಿ ನೆಪದಲ್ಲಿ ಸ್ಥಳಾಂತರ ಮಾಡಲಾಗುತ್ತದೆ. ನಂತರ ಇದನ್ನೇ ದೊಡ್ಡ ಸಾಧನೆ ಎಂಬಂತೆ ಅರಣ್ಯ ಇಲಾಖೆ ಬಿಂಬಿಸಿಕೊಳ್ಳುತ್ತದೆ. ಆದರೆ, ಅರಣ್ಯ ಪ್ರದೇಶಗಳಿಗೆ ಶಾಶ್ವತ ಹಾನಿ ಮಾಡುವ ಗಣಿಗಾರಿಕೆ, ಹೆದ್ದಾರಿ, ಜಲ ವಿದ್ಯುತ್ ಅಂತಹ ದೊಡ್ಡ ದೊಡ್ಡ ಯೋಜನೆಗಳಿಗೆ ಇದೇ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತದೆ. ಕರ್ನಾಟಕದಲ್ಲಂತೂ ಇತ್ತೀಚೆಗೆ ಇದು ಮಿತಿ ಮೀರಿದೆ. ಮುಖ್ಯಮಂತ್ರಿಗಳು ಈ ಕೂಡಲೇ ಮಧ್ಯಪ್ರವೇಶ ಮಾಡಿ ವನವಾಸಿಗಳ ಸ್ಥಳಾಂತರ ಪ್ರಕ್ರಿಯೆಯನ್ನು ಕೈಬಿಡಲು ಸೂಚಿಸಬೇಕು ಹಾಗೂ ಅರಣ್ಯಕ್ಕೆ ಹಾನಿ ಉಂಟು ಮಾಡುವ ಯೋಜನೆಗಳನ್ನು ತಿರಸ್ಕರಿಸಲು ಕ್ರಮ ವಹಿಸಬೇಕು. ವನವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಅರಣ್ಯ ಇಲಾಖೆಗೆ ಸೂಚನೆ ನೀಡಬೇಕು.
ರಾಘವೇಂದ್ರ, ಆರ್‌ಟಿಐ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.