ADVERTISEMENT

₹ 17 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಜಪ್ತಿ

ಮನೆಯ ಬೆಡ್‌ರೂಮ್‌ನಲ್ಲಿ ತೊಟ್ಟಿ ನಿರ್ಮಿಸಿ ಮದ್ಯದ ಬಾಟಲಿಯ ಬಾಕ್ಸ್ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:45 IST
Last Updated 21 ನವೆಂಬರ್ 2018, 20:45 IST

ಕಾರವಾರ/ ದಾಂಡೇಲಿ: ತಾಲ್ಲೂಕಿನ ರಾಮನಗರದ ಎರಡು ಮನೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ₹ 17 ಲಕ್ಷಕ್ಕೂ ಅಧಿಕ ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬುಧವಾರ ಜಪ್ತಿ ಮಾಡಿದ್ದಾರೆ.

ಬೆಂಗಳೂರಿನಿಂದ ಬಂದಿದ್ದ ಅಧಿಕಾರಿಗಳು ಬೆಳಗಿನ ಜಾವ 5ರ ಸುಮಾರಿಗೆ ದಾಳಿ ಮಾಡಿ ಅಕ್ರಮವನ್ನು ಪತ್ತೆ ಹಚ್ಚಿದ್ದಾರೆ.

ಗಣೇಶ ಗಲ್ಲಿಯ ಪರಶುರಾಮ ಗಾಂವ್ಕರ ಮತ್ತು ನಾಗನಾಥ ಗಲ್ಲಿಯ ಚಂದ್ರಕಾಂತ್ ಎಂಬುವವರ ಮನೆಗಳಲ್ಲಿ ಮದ್ಯ ಸಂಗ್ರಹಿಸಿ ಇಡಲಾಗಿತ್ತು. ಇಬ್ಬರೂ ಆರೋಪಿಗಳು ಪರಾರಿಯಾಗಿದ್ದಾರೆ. ದಾಳಿಯ ವೇಳೆ ವಿವಿಧ ಕಂಪನಿಗಳ 3,134 ಲೀಟರ್ ವಿಸ್ಕಿ, 228 ಲೀಟರ್ ಬಿಯರ್‌, ಒಂದು ಕಾರನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹ 17.41 ಲಕ್ಷ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ADVERTISEMENT

ಬೆಡ್‌ರೂಮಿನಲ್ಲಿತ್ತು ತೊಟ್ಟಿ!

ಆರೋಪಿಗಳು ತಮ್ಮ ಮನೆಗಳ ಬೆಡ್‌ ರೂಂನಲ್ಲಿ ತೊಟ್ಟಿ ನಿರ್ಮಾಣ ಮಾಡಿ ಅದರಲ್ಲಿ ಮದ್ಯದ ಬಾಟಲಿಗಳ ಬಾಕ್ಸ್ ತುಂಬಿಟ್ಟಿದ್ದರು. ತೊಟ್ಟಿಯನ್ನು ಮುಚ್ಚಿ ಅದರ ಮೇಲೆ ಮಂಚವನ್ನಿಡಲಾಗಿತ್ತು. ಪರಶುರಾಮ ಅವರ ಮನೆಯಲ್ಲಿ 283 ಬಾಕ್ಸ್ ಗೋವಾ ಮದ್ಯ, 19 ಬಿಯರ್ ಬಾಕ್ಸ್ ಸಿಕ್ಕಿವೆ. ಚಂದ್ರಕಾಂತ ಅವರ ಮನೆಯಲ್ಲಿ 70 ಬಾಕ್ಸ್ ಮದ್ಯ, ಒಂದು ಸ್ಯಾಂಟ್ರೋ ಕಾರನ್ನು ಜಪ್ತಿ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ರಾಜ್ಯ ಅಬಕಾರಿ ವಿಚಕ್ಷಣ ದಳದ ಅಧಿಕಾರಿಗಳಾದ ಅಶೋಕ್, ರವಿಕುಮಾರ್, ಪ್ರಕಾಶ್, ಉಪ ವಿಭಾಗದ ಎಸ್‌ಪಿ ಇನಾಂದಾರ್, ದಾಂಡೇಲಿ ಇನ್‌ಸ್ಪೆಕ್ಟರ್ ಶಂಕರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.