ADVERTISEMENT

ಶೀಘ್ರವೇ ‘ಪಾರಂಪರಿಕ ಗ್ರಾಮ’ವಾಗಿ ಗೋಕರ್ಣ?

ವಾರಾಣಸಿ ಮಾದರಿಯಲ್ಲೇ ಅಭಿವೃದ್ಧಿ ಪಡಿಸಲು ಹಲವು ಯೋಜನೆ

ರವಿ ಸೂರಿ
Published 4 ಡಿಸೆಂಬರ್ 2019, 1:29 IST
Last Updated 4 ಡಿಸೆಂಬರ್ 2019, 1:29 IST
ಗೋಕರ್ಣದ ಕೋಟಿತೀರ್ಥದ ಸುತ್ತಮುತ್ತಲಿನ ಪುರಾತನ ಕಟ್ಟಡಗಳು ಇಂದಿಗೂ ಜನಾಕರ್ಷಣೆಯಾಗಿವೆ
ಗೋಕರ್ಣದ ಕೋಟಿತೀರ್ಥದ ಸುತ್ತಮುತ್ತಲಿನ ಪುರಾತನ ಕಟ್ಟಡಗಳು ಇಂದಿಗೂ ಜನಾಕರ್ಷಣೆಯಾಗಿವೆ   

ಗೋಕರ್ಣ: ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣವನ್ನು ಸಾಂಪ್ರದಾಯಿಕ, ‘ಪಾರಂಪರಿಕಗ್ರಾಮ’ವನ್ನಾಗಿ(ಹೆರಿಟೇಜ್ ವಿಲೇಜ್)ಅಭಿವೃದ್ಧಿ ಪಡಿಸಲು ಗಂಭೀರ ಚಿಂತನೆ ನಡೆದಿದೆ. ಕ್ಷೇತ್ರವನ್ನುವಾರಾಣಸಿ ಮಾದರಿಯಲ್ಲೇಅಭಿವೃದ್ಧಿ ಪಡಿಸಲು ಹಲವು ಯೋಜನೆಗಳು ರೂಪುಗೊಳ್ಳುತ್ತಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ‘ಅನಿವಾಸಿ ಗೋಕರ್ಣ ನಿವಾಸಿಗಳ ಪರಿವಾರ’ದ (ಎನ್.ಆರ್.ಜಿ) ಅಧ್ಯಕ್ಷ ವಿಶ್ವನಾಥ ಗೋಕರ್ಣ ಮಾಹಿತಿ ನೀಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ರಾಜ್ಯದ ನಾಲ್ಕು ಕ್ಷೇತ್ರಗಳನ್ನು ಅವುಗಳ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆ ಬಾರದಂತೆ ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದೆ. ಧಾರ್ಮಿಕ ಕ್ಷೇತ್ರಗಳಾದ ಮೇಲುಕೋಟೆ, ಶೃಂಗೇರಿ ಹಾಗೂ ಉಡುಪಿಯೂ ಇದರಲ್ಲಿ ಸೇರಿವೆ. ಮೂಲತಃ ಗೋಕರ್ಣದವರಾದ, ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿತಿನ್ ಗೋಕರ್ಣ ಈ ಯೋಜನೆಗೆ ಕೈ ಜೋಡಿಸಲಿದ್ದಾರೆ. ವಾರಣಾಸಿಯನ್ನು ಅಭಿವೃದ್ಧಿ ಪಡಿಸುತ್ತಿರುವ ಯೋಜನೆಯಲ್ಲಿ ಅವರು ಮುಖ್ಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಇಲ್ಲಿಯ ಆಚಾರ, ವಿಚಾರ, ಸಾಂಪ್ರದಾಯಿಕ ಪದ್ಧತಿ, ಪರಂಪರೆ, ಧಾರ್ಮಿಕ ಅಧ್ಯಾತ್ಮಿಕ ಚಿಂತನೆ, ವೇದ, ಸಂಸ್ಕೃತ ಹಾಗೂ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶವೇ ‘ಹೆರಿಟೇಜ್ ವಿಲೇಜ್‌’ನಕಲ್ಪನೆಯಾಗಿದೆ. ಯೋಜನೆಯಡಿ ಈ ಕ್ಷೇತ್ರಕ್ಕೆ ಅವಶ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಮುಂದಿನ ಪೀಳಿಗೆಯವರಿಗೆ ಆದರ್ಶವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ’ ಎಂದು ಅವರು ಹೇಳಿದರು.

‘ಸುಮಾರು ಮೂರು ಶತಮಾನಗಳ ಹಿಂದಿನಿಂದಲೂಧಾರ್ಮಿಕಪ್ರವಾಸೋದ್ಯಮಕ್ಕೆ ಗೋಕರ್ಣ ಪ್ರಸಿದ್ಧವಾಗಿದೆ. ಇಲ್ಲಿ ಬ್ರಾಹ್ಮಣರು, ಒಕ್ಕಲಿಗರು, ಸಾರಸ್ವತರು, ದೀವರು, ನಾಡವರು ಸೇರಿದಂತೆಎಲ್ಲ ಮೂಲ ನಿವಾಸಿಗಳು ಇಂದಿಗೂ ಗುಂಪು ಗುಂಪಾಗಿ ವಾಸಿಸುತ್ತಿದ್ದಾರೆ. ಎಲ್ಲರೂ ತಮ್ಮ ಸಂಪ್ರದಾಯಗಳನ್ನುಉಳಿಸಿಕೊಂಡು ಬಂದಿದ್ದಾರೆ.ಈ ಎಲ್ಲ ಪರಂಪರೆಗಳನ್ನು ಮುಂದುವರಿಸಿಕೊಂಡು ಅಭಿವೃದ್ಧಿ ಪಡಿಸುವ ಸಲುವಾಗಿ ಈ ಯೋಜನೆ ರೂಪಿಸಲು ಚಿಂತಿಸಲಾಗಿದೆ’ ಎಂದುವಿಶ್ವನಾಥ ಗೋಕರ್ಣವಿವರಿಸಿದರು.

‘ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ’: ಗೋಕರ್ಣದಲ್ಲಿ ‘ಪಾರಂಪರಿಕ ಗ್ರಾಮ’ ಯೋಜನೆ ಜಾರಿಯಾದರೆ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ. ಯಾರೂ ಇದರ ಬಗ್ಗೆ ಭಯಪಡುವ ಅಗತ್ಯವಿಲ್ಲ’ ಎಂದು ಕೇಂದ್ರ ಸರ್ಕಾರದ ಪ್ರಮುಖರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಪುರಾತನ ಮನೆ, ದೇವಸ್ಥಾನ, ರಸ್ತೆಗಳನ್ನು ಈಗಿರುವ ಸ್ಥಿತಿಯಲ್ಲೇ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.