ADVERTISEMENT

ಚಿನ್ನ ಕಳ್ಳಸಾಗಣೆಗೆ ಸಹಕಾರ: ಡಿಆರ್‌ಐಗೆ ಸಿಕ್ಕಿಬಿದ್ದ 3 ಅಧಿಕಾರಿಗಳು!

ಮಧ್ಯಪ್ರಾಚ್ಯ ದೇಶಗಳಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆಗೆ ಸಹಕಾರದ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:00 IST
Last Updated 7 ಮೇ 2019, 20:00 IST
   

ಬೆಂಗಳೂರು: ಚಿನ್ನ ಪುಡಿ ಮಾಡಿ ಬೆಲ್ಟ್‌ಗೆ ಕಟ್ಟಿಕೊಂಡು ದೇಶದೊಳಕ್ಕೆ ಅಕ್ರಮ ಸಾಗಣೆ ಮಾಡಲು ಸಹಕರಿಸುತ್ತಿದ್ದ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೂಪರಿಂಟೆಂಡೆಂಟ್‌ ರಜನೀಶ್‌ ಕುಮಾರ್‌ ಸರೋಹ್‌ ಸೇರಿದಂತೆ ಮೂವರು ಅಧಿಕಾರಿಗಳು ರೆವಿನ್ಯೂ ಗುಪ್ತಚರ ನಿರ್ದೇಶನಾಲಯಕ್ಕೆ ಸಿಕ್ಕಿ ಬಿದ್ದಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂದಿನ ಕಸ್ಟಮ್ಸ್‌ ಇನ್ಸ್‌ಪೆಕ್ಟರ್‌ ಸುದರ್ಶನ ಕುಮಾರ್‌ ಹಾಗೂ ವೈಮಾನಿಕ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಕಸ್ಟಮ್ಸ್‌ ಇ‌ನ್ಸ್‌ಪೆಕ್ಟರ್‌ ಶಿವಕುಮಾರ್ ಮೀನ ಅವರು ಸೌದಿ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನ ಸಾಗಣೆ ಮಾಡಲು ಸಹಕರಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ.

ಮೂವರ ವಿರುದ್ಧ ಕ್ರಿಮಿನಲ್‌ ಸಂಚು, ವಂಚನೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೇಂದ್ರ ತನಿಖಾ ದಳದ ಭ್ರಷ್ಟಾಚಾರ ನಿಯಂತ್ರಣ ವಿಭಾಗ (ಸಿಬಿಐ– ಎಸಿಬಿ) ಪ್ರಕರಣ ದಾಖಲಿಸಿದೆ. ಕೆಐಎಎಲ್‌ನಲ್ಲಿ ಪತ್ತೆಯಾದ ಎರಡನೇ ಚಿನ್ನ ಕಳ್ಳಸಾಗಣೆ ಪ್ರಕರಣ ಇದಾಗಿದ್ದು, ಈ ಹಿಂದೆ ಕಸ್ಟಮ್ಸ್‌ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದರು.

ADVERTISEMENT

2018ರ ಅಕ್ಟೋಬರ್‌ 14ರಂದು ಬೆಳಗಿನ ಜಾವ ಎಮಿರೇಟ್ಸ್‌ ಫ್ಲೈಟ್‌ ಇಕೆ–568, ಏರ್ ಅರೇಬಿಯಾ ಫ್ಲೈಟ್‌ ಜಿ– 9497 ಹಾಗೂ ಗಲ್ಫ್‌ ಏರ್ ಫ್ಲೈಟ್‌ ಸಂಖ್ಯೆ– 282 ವಿಮಾನಗಳಲ್ಲಿ ಬೆಂಗಳೂರಿಗೆ ಬಂದಿಳಿದ ಹರಿಯಾಣ ಹಿಸ್ಸಾರ್‌ನ ಕಾಮ್ಯ ಶರ್ಮ, ಬೆಂಗಳೂರಿನ ಆಶಾ ಬದರಿನಾಥ್‌, ಕೊಯಿಕೋಡ್‌ನ ಹಕೀಂ, ಕಣ್ಣೂರಿನ ನೌಶಾದ್‌, ಎಜಿಯಾಜ್‌ ಖಾಲೀದ್‌ ಮತ್ತು ಮಲ್ಲಪುರಂನ ಶಬೀನ್ ಹಬೀದ್‌ ಎಂಬ ಆರು ಪ್ರಯಾಣಿಕರು ₹3.67 ಕೋಟಿ ಮೌಲ್ಯದ 11 ಕೆ.ಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುವಾಗ ರೆವಿನ್ಯೂ ಇಂಟಲಿಜೆನ್ಸ್‌ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಿಕ್ಕಿಬಿದ್ದರು.

ಆರು ಪ್ರಯಾಣಿಕರು ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಲುಬೆಂಗಳೂರು ಪೂರ್ವ ವಲಯದ ಜಿಎಸ್‌ಟಿ (ಹಿಂದಿನ ಕೇಂದ್ರ ತೆರಿಗೆ) ಕಮಿಷನರ್‌ ಕಚೇರಿ ಸೂಪರಿಂಟೆಂಡೆಂಟ್‌ ರಜನೀಶ್‌ ಕುಮಾರ್‌ ಸರೋಹ್‌, ಸುದರ್ಶನ ಕುಮಾರ್‌ ಮತ್ತು ಶಿವಕುಮಾರ್‌ ಮೀನ ಅವರು ಸಹಕರಿಸಿದ್ದರು ಎಂದು ಸಿಬಿಐ– ಎಸಿಬಿ ದೂರಿದೆ.

ದುಬೈನ ಕೆಲವು ಕಳ್ಳಸಾಗಣೆದಾರರು ಎಚ್‌ಎಎಲ್‌ ಬಳಿಯ ಎಲ್‌ಬಿಎಸ್‌ ನಗರದಲ್ಲಿರುವ ‘ಬೆಸ್ಟ್‌ ವೇ ಸೂಪರ್‌ ಮಾರ್ಕೆಟ್‌’ನ ಮಾಲೀಕ ಎನ್‌.ಟಿ. ಜಮ್‌ಶೀರ್‌ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಜಮ್‌ಶೀರ್‌, ಜಿಎಸ್‌ಟಿ ಸೂಪರಿಂಟೆಂಡೆಂಟ್‌ ಅವರನ್ನು ದುರ್ಬಳಕೆ ಮಾಡಿಕೊಂಡು ‍ಅಕ್ರಮವಾಗಿ ಚಿನ್ನ ತರುತ್ತಿದ್ದ ಪ್ರಯಾಣಿಕರನ್ನು ಕಸ್ಟಮ್ಸ್‌ ಪ್ರದೇಶದಲ್ಲಿ ತಪಾಸಣೆಗೆ ಒಳಪಡಿಸದೆ ಕಳುಹಿಸುತ್ತಿದ್ದರು. ಈ ಪ್ರಯಾಣಿಕರು ಬಚ್ಚಿಟ್ಟುಕೊಂಡು ತಂದ ಚಿನ್ನವನ್ನು ಮೊದಲೇ ನಿಗದಿಪಡಿಸಿದ್ದ ಸ್ಥಳಗಳಲ್ಲಿ ಜಮ್‌ಶೀರ್‌ ಕಡೆಯವರಿಗೆ ಹಸ್ತಾಂತರಿಸುತ್ತಿದ್ದರು ಎನ್ನಲಾಗಿದೆ.

ಇದೊಂದು ಪ್ರಕರಣಕ್ಕೆ ರಜನೀಶ್‌ ಕುಮಾರ್‌ ₹75,000 ಹಣವನ್ನು ಜಮಶೀರ್‌ ಅವರಿಂದ ಪಡೆದಿದ್ದು, ಸುದರ್ಶನ್‌ ಕುಮಾರ್‌ ಮತ್ತು ಶಿವಕುಮಾರ್‌ ಅವರಿಗೆ ₹ 25 ಸಾವಿರ ನೀಡಿದ ಆರೋಪಕ್ಕೆ ಒಳಗಾಗಿದ್ದಾರೆ. 2017ರಿಂದ 18ರವರೆಗೆ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿರುವ ಹಲವು ಪ್ರಕರಣಗಳಲ್ಲೂ ಈ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.