ADVERTISEMENT

ಶಿವಮೊಗ್ಗ, ಉತ್ತರ ಒಳನಾಡಿನಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 17:50 IST
Last Updated 7 ಸೆಪ್ಟೆಂಬರ್ 2020, 17:50 IST
ಶಿವಮೊಗ್ಗ ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಬೊಮ್ಮನಕಟ್ಟೆ ಕೆರೆ ಕೋಡಿ ಒಡೆದು ನೀರು ಹರಿಯಿತು
ಶಿವಮೊಗ್ಗ ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಬೊಮ್ಮನಕಟ್ಟೆ ಕೆರೆ ಕೋಡಿ ಒಡೆದು ನೀರು ಹರಿಯಿತು   

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಸೋಮವಾರ ಉತ್ತಮ ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ 1.2 ಸೆಂ.ಮೀ,ಆಗುಂಬೆಯಲ್ಲಿ 3.8 ಮಿ.ಮೀ ಮಳೆಯಾಗಿದೆ.

ಭಾನುವಾರ ತಡರಾತ್ರಿ ಜಿಲ್ಲೆಯ ಹಲವೆಡೆ ಜೋರು ಮಳೆಯಾಗಿದೆ. ಗಾಳಿ, ಮಳೆಗೆ ಸೊರಬದಲ್ಲಿ ಕೆಲ ಮನೆಗಳು ಹಾನಿಗೀಡಾಗಿವೆ. ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಶಿಕಾರಿಪುರ, ಸಾಗರ, ಹೊಸನಗರದಲ್ಲಿ 4 ಸೆಂ.ಮೀಗೂ ಅಧಿಕ ಮಳೆಯಾಗಿದೆ.

ಧಾರಾಕಾರ ಮಳೆ– ಸೇತುವೆ ಮುಳುಗಡೆ: ಭಾನುವಾರ ತಡ ರಾತ್ರಿ ಹಾಗೂ ಸೋಮವಾರ ಮುಂಜಾನೆ ಹುಬ್ಬಳ್ಳಿ, ವಿಜಯಪುರ, ಬೆಳಗಾವಿ ಜಿಲ್ಲೆಗಳ ವಿವಿಧೆಡೆ ಧಾರಾಕಾರ ಮಳೆಯಾಗಿದೆ.

ADVERTISEMENT

ಸವದತ್ತಿಯ ಇನಾಮಹೊಂಗಲ ಬಳಿ ತುಪ್ಪರಿಹಳ್ಳದ ಸೇತುವೆಯೊಂದು ಮುಳುಗಡೆಯಾಗಿದೆ. ಸವದತ್ತಿ-ಧಾರವಾಡ ಸಂಪರ್ಕ ಕಲ್ಪಿಸುವ ಈ ಮಾರ್ಗದ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿಗೃಹಗಳು ಜಲಾವೃತ ವಾಗಿದ್ದರಿಂದ ಅಲ್ಲಿನ ನಿವಾಸಿಗಳು ಪರದಾಡುವಂತಾಯಿತು. ಚನ್ನಮ್ಮನ ಕಿತ್ತೂರಿನ ಸರ್ವಿಸ್ ರಸ್ತೆಯ ಉಗರಕೋಡ್ ಕೆಳಸೇತುವೆ ಜಲಾವೃತವಾಗಿತ್ತು.

ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ‌ದಕ್ಷಿಣ ಕನ್ನಡ ಜಿಲ್ಲೆಯ ಮೂಡುಕೊಣಾಜೆ ಗ್ರಾಮದ ಏರೋಡಿಬೆಟ್ಟು ಎಣ್ಮಜೆಯಲ್ಲಿ ಮರಕ್ಕೆ ಸಿಡಿಲು ಬಡಿದು, ಅದರಲ್ಲಿ ವಾಸವಿದ್ದ ಮೂರು ನವಿಲು ಮೃತಪಟ್ಟಿವೆ.

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 3 ಸೆಂ.ಮೀ. ಮಳೆ ದಾಖಲಾಗಿದೆ.ಕಲಬುರ್ಗಿ ನಗರ ಮತ್ತು ಯಡ್ರಾಮಿ ತಾಲ್ಲೂಕಿನ ವಿವಿಧೆಡೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಳೆಯಾಗಿದೆ.ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಿದೆ.

ಸಿಡಿಲು ಬಡಿದು ಇಬ್ಬರು ಸಾವು

ದೇವದುರ್ಗ(ರಾಯಚೂರು ಜಿಲ್ಲೆ): ತಾಲ್ಲೂಕಿನ ಗಬ್ಬೂರು ಹೋಬಳಿಯ ಖಾನಾಪುರ ಗ್ರಾಮದ ಹೊರವಲಯದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ನಾಗಪ್ಪ ನೋನಿಕರ್ (40) ಮತ್ತು ವೆಂಕಟೇಶ (30) ಎಂಬುವರು ಮೃತಪಟ್ಟಿದ್ದಾರೆ. ರಮೇಶ ಮತ್ತು ಮಹಾಂತೇಶ ಎಂಬುವರಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಾವಳಿ: ಇಂದು ಧಾರಾಕಾರ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಸೆ. 8ರಿಂದ 11ರವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆಯಾಗುವ ನಿರೀಕ್ಷೆ ಇರುವುದರಿಂದ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಕರಾವಳಿಯಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗರಿಷ್ಠ 3.3. ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುತ್ತಿರುವುದರಿಂದ ಮೀನುಗಾ ರರು ಕಡಲಿಗೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.

ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ಬೀದರ್, ಕಲಬುರ್ಗಿ, ವಿಜಯಪುರ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ‘ಯೆಲ್ಲೊ ಅಲರ್ಟ್’ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.