ADVERTISEMENT

ಧರ್ಮಸ್ಥಳ| ಅತ್ಯಾಚಾರ, ಹತ್ಯೆ ಆರೋಪ; SITರಚನೆಗೆ ನಿವೃತ್ತ ನ್ಯಾ.ಗೋಪಾಲಗೌಡ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 7:44 IST
Last Updated 17 ಜುಲೈ 2025, 7:44 IST
<div class="paragraphs"><p>ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ</p></div>

ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ

   

ಬೆಂಗಳೂರು: ‘ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಅಪಾರ ಸಂಖ್ಯೆಯ ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಹೂಳಿರುವ ಪ್ರಕರಣದಲ್ಲಿ ಸಾಕ್ಷಿ ಫಿರ್ಯಾದಿಗೆ ರಾಜ್ಯ ಸರ್ಕಾರವು ತಕ್ಷಣವೇ ಭದ್ರತೆ ಒದಗಿಸಬೇಕು. ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಒತ್ತಾಯಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರವ, ತನಿಖೆ ಸರಿಯಾಗಿ ಆಗುತ್ತಿಲ್ಲ. ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ಕಾಲಿ ಹಾಳೆಯಲ್ಲಿ ಗುರುತು ಮಾಡಿಕೊಡು ಎಂದು ಪೊಲೀಸರು ಸಾಕ್ಷಿ ಫಿರ್ಯಾದಿಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಆತ ನೀಡಿರುವ ಹೇಳಿಕೆಗಳು ಸೋರಿಕೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಸಾಕ್ಷಿ ಫಿರ್ಯಾದಿಯು ತನ್ನ ವಕೀಲರೊಂದಿಗೆ ಒಂದು ಸ್ಥಳಕ್ಕೆ ತೆರಳಿ, ಕಳೇಬರವನ್ನು ತೆಗೆಯುವುದಾಗಿ ನ್ಯಾಯಾಲಯ ಮತ್ತು ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ. ಹೀಗಿದ್ದೂ ಪೊಲೀಸರು ಸ್ಥಳಕ್ಕೆ ತೆರಳಿಲ್ಲ. ಆತನ ಹೇಳಿಕೆ ದಾಖಲಿಸುವ ತನಿಖಾಧಿಕಾರಿಯು ಯಾರಿಗೋ ಕರೆ ಮಾಡಿ, ಅವರ ಸೂಚಿಸಿದ್ದಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹೀಗಾಗಿ ತಕ್ಷಣವೇ ತನಿಖಾ ತಂಡವನ್ನು ಬದಲಿಸಬೇಕು. ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ರಚಿಸಬೇಕು’ ಎಂದು ಒತ್ತಾಯಿಸಿದರು.

‘ಸಾಕ್ಷಿ ಫಿರ್ಯಾದುದಾರ ಮತ್ತು ಆತನ ವಕೀಲರಿಗೆ ಬೆದರಿಕೆ ಇದೆ. ಅವರಿಗೆ ತಕ್ಷಣವೇ ಭದ್ರತೆ ಒದಗಿಸಬೇಕು. ಅವರಿಗೆ ಏನಾದರೂ ಆದರೆ ಗೃಹ ಸಚಿವ, ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಹೊಣೆಗಾರರಾಗುತ್ತಾರೆ’ ಎಂದರು.

ವಕೀಲ ಸಿ.ಎಸ್‌.ದ್ವಾರಕನಾಥ್, ‘ಬಿಎನ್‌ಎಸ್‌ 183ನೇ ಸೆಕ್ಷನ್‌ ಅಡಿಯಲ್ಲಿ ಸಾಕ್ಷಿ ಫಿರ್ಯಾದಿ ನೀಡಿದ ಹೇಳಿಕೆ ಸಾಕ್ಷ್ಯವಾಗುತ್ತದೆ. ಈ ಹೇಳಿಕೆಗಳು ಖಾಸಗಿ ವ್ಯಕ್ತಿಗಳಿಗೆ ಸೋರಿಕೆಯಾಗುತ್ತಿದೆ. ಇದನ್ನು ತಪ್ಪಿಸಿ ಎಂದು ವಕೀಲರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.