ADVERTISEMENT

ಗೋಶಾಲೆ ಮುಂದುವರಿಸಲು ಜಿಲ್ಲಾಧಿಕಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 17:44 IST
Last Updated 18 ಜೂನ್ 2019, 17:44 IST

ಚಿತ್ರದುರ್ಗ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿ ಅನ್ವಯ (ಎನ್‌ಡಿಆರ್‌ಎಫ್‌) 90 ದಿನ ಪೂರೈಸಿದ್ದ ಗೋಶಾಲೆಗಳನ್ನು ಸ್ಥಗಿತಗೊಳಿಸುವ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ, ಜಾನುವಾರಿಗೆ ಮೇವು ಲಭ್ಯವಾಗುವವರೆಗೂ ಮುಂದುವರಿಸಲು ಜಿಲ್ಲಾಧಿಕಾರಿಗೆ ಮೌಖಿಕ ಆದೇಶ ನೀಡಿದೆ.

ತೀವ್ರ ಬರ ಹಾಗೂ ಮೇವಿನ ಕೊರತೆ ಎದುರಾಗಿದ್ದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ 15 ಗೋಶಾಲೆಗಳನ್ನು ತೆರೆಯಲಾಗಿತ್ತು. 90 ದಿನ ಪೂರೈಸಿದ ಆರು ಗೋಶಾಲೆಗಳನ್ನು ಮುಚ್ಚಲು ಕಂದಾಯ ಇಲಾಖೆ ಮುಂದಾಗಿತ್ತು. ಈ ಕುರಿತು ‘ಪ್ರಜಾವಾಣಿ’ ಮಂಗಳವಾರ ವಿಶೇಷ ವರದಿ ಪ್ರಕಟಿಸಿತ್ತು.

‘ಗೋ ಶಾಲೆಗಳನ್ನು ಮುಂದುವರಿಸು ವಂತೆ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಮೌಖಿಕ ಆದೇಶ ನೀಡಿದ್ದಾರೆ. ಗೋಶಾಲೆಗಳು ಮುಂದುವರಿಯಲಿದ್ದು, ಜಾನುವಾರಿಗೆ ಅಗತ್ಯ ಮೇವು ಹಾಗೂ ನೀರಿನ ವ್ಯವಸ್ಥೆ ಎಂದಿನಂತೆ ಇರಲಿದೆ’ ಎಂದು ಜಿಲ್ಲಾಧಿಕಾರಿ ಆರ್‌. ವಿನೋತ್‌ ಪ್ರಿಯಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ADVERTISEMENT

ನಿರೀಕ್ಷೆಯಂತೆ ಪೂರ್ವ ಮುಂಗಾರು ಮಳೆ ಸುರಿಯದಿರುವುದರಿಂದ ಮೇವು ಸಿಗುತ್ತಿಲ್ಲ. ಅವಧಿ ಪೂರೈಸಿದ ಗೋಶಾಲೆಗಳನ್ನು ಮುಚ್ಚಬಾರದು ಎಂದು ಕೋರಿ ಶಾಸಕ ಟಿ. ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ವಾರದ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.