ADVERTISEMENT

ದೇಶದಲ್ಲೇ ನಂಬರ್‌ ಒನ್‌ ರಾಜ್ಯ ಆಗುವತ್ತ ದೃಢ ಹೆಜ್ಜೆ ಇಡಬೇಕಿದೆ: ವಜುಭಾಯಿ ವಾಲಾ

‘ಕೋವಿಡ್–19‌ ಸದ್ಯವೇ ಕೊನೆಗೊಳ್ಳಲಿದೆ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 17:13 IST
Last Updated 28 ಜನವರಿ 2021, 17:13 IST
ರಾಜ್ಯಪಾಲ ವಜುಭಾಯಿ ವಾಲಾ
ರಾಜ್ಯಪಾಲ ವಜುಭಾಯಿ ವಾಲಾ   

ಬೆಂಗಳೂರು: ಕೋವಿಡ್–19 ಸಾಂಕ್ರಾಮಿಕ ಸದ್ಯದಲ್ಲೇ ಕೊನೆಗೊಳ್ಳಲಿದೆ. ಆರ್ಥಿಕ ಚೇತರಿಕೆಯೂ ಆಗುತ್ತಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ದಾಪುಗಾಲು ಇಟ್ಟು ದೇಶದಲ್ಲೇ ನಂಬರ್‌ ಒನ್‌ ರಾಜ್ಯ ಆಗುವತ್ತ ದೃಢ ಹೆಜ್ಜೆ ಇಡಬೇಕಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ಕಾಂಗ್ರೆಸ್‌ ಸದಸ್ಯರ ಪ್ರತಿರೋಧದ ನಡುವೆ ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ಬೆಳಗಾವಿಯಲ್ಲಿ ಸರ್ಕಾರ ಅಧಿವೇಶನ ನಡೆಸಲಿಲ್ಲ, ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಿಲ್ಲ ಎಂದು ವಿರೋಧಿಸಿ ಕಾಂಗ್ರೆಸ್‌ ಸದಸ್ಯರು ಘೋಷಣೆ ಕೂಗಿದರು.

ಕೋವಿಡ್‌ ಸಂಕಷ್ಟದ ನಡುವೆಯೂ ವಾಣಿಜ್ಯ ತೆರಿಗೆಗಳ ಇಲಾಖೆ ₹30,467 ಕೋಟಿ ತೆರಿಗೆ ಸಂಗ್ರಹಿಸಿದೆ. ಅಬಕಾರಿ ಇಲಾಖೆ ₹16,788 ಕೋಟಿ ರಾಜಸ್ವ ಸಂಗ್ರಹಿಸಿದೆ. ಇದರಿಂದಾಗಿ ರಾಜ್ಯದ ಅಭಿವೃದ್ಧಿ ಕಾಮಗಾರಿಗಳು ಸುಗಮವಾಗಿ ಮುಂದುವರೆಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ADVERTISEMENT

ರಾಜ್ಯದಲ್ಲಿ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದಂತೆ ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆ ಅಡಿಯಲ್ಲಿ ಈಗ ನಾಗರಿಕರು ಸರ್ಕಾರಕ್ಕೆ ಆನ್‌ಲೈನ್‌ ಮೂಲಕ ತೆರಿಗೆಗಳನ್ನು ಪಾವತಿಸಬಹುದು ಎಂದು ರಾಜ್ಯಪಾಲರು ವಿವರಿಸಿದರು.

1.36 ಲಕ್ಷ ಜನರಿಗೆ ಉಚಿತ ಚಿಕಿತ್ಸೆ:ಕೋವಿಡ್ ಬಿಕ್ಕಟ್ಟನ್ನು ಸರ್ಕಾರ ದಿಟ್ಟವಾಗಿ ಎದುರಿಸಿದ್ದೂ ಅಲ್ಲದೇ, ಈ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯವನ್ನೂ ಉತ್ತಮಪಡಿಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 80 ಲಕ್ಷಕ್ಕೂ ಹೆಚ್ಚು ಆರ್‌ಟಿಪಿಸಿಆರ್‌ ಕೋವಿಡ್‌ ಪರೀಕ್ಷೆ ನಡೆಸಿದ್ದು, ಅದು ಪ್ರತಿ ಲಕ್ಷ ಜನಸಂಖ್ಯೆ ಆಧಾರದ ಮೇಲೆ ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಪರೀಕ್ಷೆಯಾಗಿದೆ. ₹248 ಕೋಟಿ ವೆಚ್ಚ ಮಾಡಿ 1.36 ಲಕ್ಷ ಕೋವಿಡ್‌ ರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸಲಾಗಿದೆ ಎಂದು ವಜುಭಾಯಿ ವಾಲಾ ತಿಳಿಸಿದರು.

ಹಸಿವು–ರಕ್ತ ಹೀನತೆ ಮುಕ್ತ:ಸರ್ಕಾರವು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿನ ಲಕ್ಷ್ಯಗಳನ್ನು ಸಾಧಿಸುವ ಮೂಲಕ ರಾಜ್ಯವನ್ನು ಹಸಿವು ಮತ್ತು ರಕ್ತಹೀನತೆ ಮುಕ್ತವನ್ನಾಗಿ ಹಾಗೂ ಲಿಂಗ ಸ್ನೇಹಿಯನ್ನಾಗಿ ಮಾಡಲು ನವೀನ ರೀತಿಯ ಕಾರ್ಯತಂತ್ರಗಳು ಮತ್ತು ಉಪಕ್ರಮಗಳನ್ನು ಒಳಗೊಂಡ ಮುನ್ನೋಟ–2023 ಅನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

80 ಲಕ್ಷ ಹೆಕ್ಟೇರ್ ಜಮೀನು ಮಾಹಿತಿ ಅಪ್‌ಲೋಡ್‌:ಕಳೆದ ಮುಂಗಾರಿನಲ್ಲಿ ಒಟ್ಟು 2.10 ಕೋಟಿ ಜಮೀನುಗಳ ಬೆಳೆ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ 80 ಲಕ್ಷ ಜಮೀನಿನ ಮಾಹಿತಿಯನ್ನು ಖುದ್ದು ರೈತರೇ ಸಮೀಕ್ಷೆ ನಡೆಸಿ ಮಾಹಿತಿ ಅಪ್‌ಲೋಡ್‌ ಮಾಡಿದ್ದಾರೆ. ಬೆಳೆ ಸಮೀಕ್ಷೆಯ ಡಿಜಿಟಲೀಕರಣವನ್ನು ಭಾರತ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ವಜುಭಾಯಿ ವಾಲಾ ಹೇಳಿದರು.

ಭಾಷಣದ ಪ್ರಮುಖ ಅಂಶಗಳು
* ವಿಶ್ವಬ್ಯಾಂಕ್‌ ಸಹಾಯದಿಂದ 200–21 ರಿಂದ 2026–27 ಸಾಲಿಗೆ ರಾಜ್ಯದ 21 ಜಿಲ್ಲೆಗಳಲ್ಲಿ ಮಳೆ ನೀರು ಕೊಯ್ಲು ನಿರ್ಮಿತಿಗಳ ನಿರ್ಮಾಣಕ್ಕೆ ಮತ್ತು ಜಲಾನಯನ ಪ್ರದೇಶಗಳ ಪುನರುಜ್ಜೀವ ಯೋಜನೆಯ ಜಾರಿಗೆ ₹600 ಕೋಟಿ ಅನುಮೋದನೆ

* ದೀನ ದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನಾ ಮತ್ತು ಸೌಭಾಗ್ಯ ಎಂಬ ಕೇಂದ್ರ ಪುರಸ್ಕೃತ ಯೋಜನೆಯಡಿ 14,320 ಕುಟುಂಬಗಳಿಗೆ ವಿದ್ಯುಚ್ಛಕ್ತಿ ಸಂಪರ್ಕ

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರವರ್ಗದಡಿ ಬರುವ ರೈತರಿಗೆ ಹಾಗೂ 10 ಎಚ್‌ಪಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ಐಪಿ ಸೆಟ್‌ಗಳನ್ನು ಹೊಂದಿರುವ ಎಲ್ಲ ರೈತರಿಗೆ ಉಚಿತ ವಿದ್ಯುತ್‌ ಪೂರೈಕೆಗೆ ₹11,250 ಕೋಟಿ ಸಹಾಯಧನ

ಭಾಷಣದ ವೇಳೆ ಕಾಂಗ್ರೆಸ್‌ ಪ್ರತಿಭಟನೆ

ರಾಜ್ಯಪಾಲ ವಜುಭಾಯಿ ವಾಲಾ ಅವರು ಭಾಷಣ ಆರಂಭಿಸುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಭಿತ್ತಿ ಪತ್ರ ಹಿಡಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಬೆಳಗಾವಿಯಲ್ಲಿ ಅಧಿವೇಶವನ್ನು ಒಂದೂವರೆ ವರ್ಷಗಳಿಂದ ನಡೆಸಿಲ್ಲ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್‌ ಜಿಲ್ಲೆಗಳಲ್ಲಿ ಪ್ರವಾಹದಿಂದ ಜನತೆ ಸಂಕಷ್ಟದಲ್ಲಿದ್ದರೂ ಪರಿಹಾರ ನೀಡಿಲ್ಲ. ಬೆಳಗಾವಿ ನಮ್ಮದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಯವರ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಯಿತು. ಒಂದು ನಿಮಿಷ ಪ್ರತಿಭಟನೆ ನಡೆಸಿದ ಬಳಿಕ ಎಲ್ಲರೂ ನಿಃಶಬ್ದರಾಗಿ ಭಾಷಣ ಆಲಿಸಿದರು. ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.