ADVERTISEMENT

‘ಆನ್‌ಲೈನ್‌ ಬೆಟ್ಟಿಂಗ್‌’ ಕಡಿವಾಣ

‘ಕರ್ನಾಟಕ ಪೊಲೀಸ್‌ ಕಾಯ್ದೆ–1963’ಗೆ ತಿದ್ದುಪಡಿಗೆ ಮುಂದಾದ ರಾಜ್ಯ ಸರ್ಕಾರ

ರಾಜೇಶ್ ರೈ ಚಟ್ಲ
Published 12 ಜನವರಿ 2021, 19:21 IST
Last Updated 12 ಜನವರಿ 2021, 19:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನೂರಾರು ಕೋಟಿ ಮೊತ್ತದ ಜೂಜಾಟಕ್ಕೆ ಕಾರಣವಾಗುವ ‘ಆನ್‌ಲೈನ್‌ ಬೆಟ್ಟಿಂಗ್‌’ (ಗೇಮಿಂಗ್) ದಂಧೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಇದಕ್ಕಾಗಿ ‘ಕರ್ನಾಟಕ ಪೊಲೀಸ್‌ ಕಾಯ್ದೆ–1963’ಗೆ ತಿದ್ದುಪಡಿ ತರಲು ಮುಂದಾಗಿದೆ.

ಗೃಹ ಸಚಿವಾಲಯ ಸಿದ್ಧಪಡಿಸಿದ ತಿದ್ದುಪಡಿ ಅಂಶಗಳನ್ನು ಪರಿಶೀಲಿಸಿ, ಕಾನೂನು ಮತ್ತು ಸಂಸದೀಯ ಇಲಾಖೆ ಅನುಮೋದನೆ ನೀಡಿದೆ. ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟದಲ್ಲಿ ಅಂಗೀಕಾರ ಪಡೆದ ಬಳಿಕ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಉದ್ದೇಶಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈಗಿರುವ ಕಾಯ್ದೆಯ ಏಳನೇ ಅಧ್ಯಾಯದಲ್ಲಿ ಮಟ್ಕಾ, ಇಸ್ಪೀಟ್‌ (ಜೂಜಾಟ) ಬಗ್ಗೆ ಪ್ರಸ್ತಾಪವಿದೆ. ಆದರೆ, ಆನ್‌ಲೈನ್‌ ಬೆಟ್ಟಿಂಗ್‌ ಬಗ್ಗೆ ಪ್ರಸ್ತಾಪ ಇಲ್ಲ. ಆನ್‌ಲೈನ್‌ ಬೆಟ್ಟಿಂಗ್‌ ದಂಧೆಯನ್ನೂ ಕಾನೂನಿನಡಿಗೆ ತಂದು ಸಂಜ್ಞೇಯ ಅಪರಾಧ (ದೂರು ನೀಡದಿದ್ದರೂ ಪೊಲೀಸರು ಆರೋಪಿಯನ್ನು ಬಂಧಿಸಬಹುದು) ಎಂದು ಪರಿಗಣಿಸಲು ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಆನ್‌ಲೈನ್‌ ಬೆಟ್ಟಿಂಗ್‌ ಗೇಮ್‌ಗಳನ್ನು ಕಾಯ್ದೆಯ ವ್ಯಾಪ್ತಿಗೆ ತರುವ ಜೊತೆಗೆ ಶಿಕ್ಷೆ ಮತ್ತು ದಂಡ ಪ್ರಮಾಣವನ್ನೂ ಹೆಚ್ಚಿಸುವ ಪ್ರಸ್ತಾವವೂ ಇದೆ. ಮೂರು ತಿಂಗಳ ಜೈಲು ಶಿಕ್ಷೆಯನ್ನು ಆರು ತಿಂಗಳಿಗೆ, 9 ತಿಂಗಳ ಶಿಕ್ಷೆಯನ್ನು 18 ತಿಂಗಳಿಗೆ ವಿಸ್ತರಿಸಲು, ₹ 500 ದಂಡವನ್ನು ₹ 5,000, ₹ 1,000 ಇರುವುದನ್ನು ₹ 10,000ಕ್ಕೆ ಹೆಚ್ಚಿಸಲು ಕೂಡ ಉದ್ದೇಶಿಸಲಾಗಿದೆ.

ಕಾಯ್ದೆ ಜಾರಿಗೆ ಬಂದ ಬಳಿಕ ಆನ್‌ಲೈನ್‌ ಬೆಟ್ಟಿಂಗ್‌ ಗೇಮ್‌ ಆಡಿಸುವುದೂ, ಆಡುವುದೂ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಆಗಲಿದೆ. ಅಷ್ಟೇ ಅಲ್ಲ, ದೂರು ದಾಖಲಾಗದೇ ಇದ್ದರೂ, ದಂಧೆ ನಡೆಯುತ್ತಿರುವ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರೇ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಬಹುದು ಮತ್ತು ಕಂಪ್ಯೂಟರ್‌ ಸೇರಿದಂತೆ ಆಟಕ್ಕೆ ಬಳಸಿದ ಎಲ್ಲ ವಸ್ತುಗಳನ್ನು ಜಪ್ತಿ ಮಾಡಬಹುದು ಎಂದೂ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಆನ್‌ಲೈನ್‌ ಗ್ಯಾಬ್ಲಿಂಗ್‌ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಯಾವುದೋ ಮೂಲೆಯಲ್ಲಿ ಕುಳಿತು ತಂತ್ರಜ್ಞಾನದ ಲಾಭ ಪಡೆದು, ಆಮಿಷ ಒಡ್ಡಿ ಆನ್‌ಲೈನ್‌ ಬೆಟ್ಟಿಂಗ್‌ಗೆ ಆಕರ್ಷಿಸಲಾಗುತ್ತದೆ. ಇದನ್ನೂ ಗಮನದಲ್ಲಿಟ್ಟು ಕಾಯ್ದೆ ತಿದ್ದುಪಡಿಗೆಪ್ರಸ್ತಾವಿಸಲಾಗಿದೆ.

ಇನ್ನು ‘ಸಂಜ್ಞೇಯ ಅಪರಾಧ’

‘ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಸೋತು ಅನೇಕರು ಲಕ್ಷಾಂತರ ಹಣ, ಜೀವ ಕಳೆದುಕೊಂಡಿರುವ ಘಟನೆಗಳು ರಾಜ್ಯ ಮತ್ತು ದೇಶದಲ್ಲಿ ನಡೆದಿದ್ದರೂ ಅದಕ್ಕೆ ಕಡಿವಾಣ ಹಾಕುವ ಕಾನೂನು ರಾಜ್ಯದಲ್ಲಿ ಇರಲಿಲ್ಲ. ಮಟ್ಕಾ, ಜೂಜಾಟದಲ್ಲಿ ತೊಡಗುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ, ಅದಕ್ಕಿಂತಲೂ ಆನ್‌ಲೈನ್‌ ಜೂಜಾಟದಲ್ಲಿ ತೊಡಗಿದವರಿಗೆ ಶಿಕ್ಷೆ ಇಲ್ಲ. ಕಾಯ್ದೆ ತಿದ್ದುಪಡಿಯಿಂದ ‘ಸಂಜ್ಞೇಯ ಅಪರಾಧ’ವೆಂದು ಪರಿಗಣಿಸಿ ಇಂಥ ಅಕ್ರಮ ಚಟುವಟಿಕೆಗೆ ಕಡಿವಾಣ ಸಾಧ್ಯವಾಗಲಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.