ADVERTISEMENT

ಜನಶಕ್ತಿಗೆ ಹೆದರಿ ನಿಷೇಧಾಜ್ಞೆ ಜಾರಿ ಮಾಡಿದ ಪುಕ್ಕಲು ಸರ್ಕಾರ: ಸಿದ್ದರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 2:21 IST
Last Updated 19 ಡಿಸೆಂಬರ್ 2019, 2:21 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಇದೊಂದು ಪುಕ್ಕಲು ರಾಜ್ಯ ಸರ್ಕಾರ. ಜನಶಕ್ತಿಗೆ ಹೆದರಿ ನಿಷೇಧಾಜ್ಞೆ ಜಾರಿ ಮಾಡಿದೆ’ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೆಲವು ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿರುವ ಕಾರಣ ರಾಜ್ಯದ ಹಲೆವೆಡೆ ನಿಷೇಧಾಜ್ಞೆ ಜಾರಿ ಮಾಡಿದ್ದು, ಇದನ್ನು ವಿರೋಧಿಸಿ ಅವರು ಟ್ವೀಟ್‌ ಮಾಡಿದ್ದಾರೆ.

‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭುಗಿಲೆದ್ದಿರುವ ಪ್ರತಿರೋಧವನ್ನು ದಮನಿಸಲು ನಿಷೇಧಾಜ್ಞೆ ಅಸ್ತ್ರವನ್ನು ಬಳಸುತ್ತಿದ್ದಾರೆ. ದಮನಿಸಿದಷ್ಟು ಜನಾಕ್ರೋಶ ಪುಟಿದೆದ್ದು ಬರುತ್ತದೆ ಎನ್ನುವುದನ್ನು ಯಡಿಯೂರಪ್ಪ ಅವರು ತಿಳಿಯಲಿ’ ಎಂದು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸಂವಿಧಾನದ ಮೌಲ್ಯಗಳ ಕಗ್ಗೊಲೆ ಆಗುತ್ತಿದೆ. ಸೆಕ್ಷನ್‌ 144 ಜಾರಿ ಮಾಡುವ ಮೂಲಕ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ಇದನ್ನು ನಾನು ಎಂದೂ ನಿರೀಕ್ಷಿಸಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಯಡಿಯೂರಪ್ಪನವರು ಪ್ರಧಾನಿ ನರೇಂದ್ರ ಮೋದಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ನಿಮಗಿಂತ ಅವರೇ ಎಷ್ಟೋ ಉತ್ತಮ. ನಾಚಿಕೆಯಾಗಬೇಕು ನಿಮಗೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.