
ಬೆಂಗಳೂರು: ವೈದ್ಯಕೀಯ ಕಾಲೇಜುಗಳು ಇಲ್ಲದ ಜಿಲ್ಲೆಗಳಿಗೆ ಅವಕಾಶ ಕಲ್ಪಿಸುವ ವಿಚಾರದೊಂದಿಗೆ 2021–22ನೇ ಸಾಲಿಗೆ ಮೂರು ಹೊಸ ಸರ್ಕಾರಿ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ.
ಕಳೆದ ವರ್ಷವೇ ಘೋಷಿಸಿದ್ದ ನಾಲ್ಕು ಕಾಲೇಜುಗಳು ಆರಂಭವಾಗಲಿರುವ ಬಗ್ಗೆ ಸಂಶಯ ಇರುವಾಗಲೇ ಹೊಸ ಕಾಲೇಜು ಆರಂಭ ಚಿಂತನೆಯನ್ನೂ ಸರ್ಕಾರ ಹರಿಯಬಿಟ್ಟಿದೆ. ಉಡುಪಿ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇವುಗಳು ಸ್ಥಾಪನೆಯಾಗುವ ಸಾಧ್ಯತೆ ಇದ್ದು, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಹ ಇದನ್ನು ದೃಢಪಡಿಸಿದ್ದಾರೆ.
‘ಮೂರು ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಪ್ರಸ್ತಾವ ಸಲ್ಲಿಸಲು ನಾವು ಸಿದ್ಧತೆ ನಡೆಸಿದ್ದೇವೆ, 2021–22ನೇ ಸಾಲಿಗೆ ಇದಕ್ಕೆ ಅವಕಾಶ ದೊರಕುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.
ಎಂಸಿಐ ಅನುಮತಿಗಾಗಿ ಕಾತರ: ‘ಚಿಕ್ಕಮಗಳೂರು, ಚಿಕ್ಕ ಬಳ್ಳಾಪುರ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಈಗಾಗಲೇ ಸಮ್ಮತಿ ಸೂಚಿಸಲಾಗಿದ್ದು, ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಅನುಮತಿ ದೊರೆತರೆ 2020–21ರಿಂದಲೇ ಅವುಗಳು ಕಾರ್ಯಾರಂಭ ಮಾಡಲಿವೆ. ಹಾಗಿದ್ದರೆ ಹೆಚ್ಚುವರಿಯಾಗಿ 600 ವೈದ್ಯಕೀಯ ಸೀಟುಗಳು ಸಿಗಲಿವೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.