ADVERTISEMENT

ಸರ್ಕಾರದ ನಿರ್ಲಕ್ಷ್ಯ: 78.54 ಎಕರೆ ಕಾಡಿನಲ್ಲಿ ಎಂಬೆಸಿಯಿಂದ ಐ.ಟಿ ಪಾರ್ಕ್‌

ಚಿರಂಜೀವಿ ಕುಲಕರ್ಣಿ
Published 16 ಜನವರಿ 2026, 1:07 IST
Last Updated 16 ಜನವರಿ 2026, 1:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

- ಎ.ಐ ಚಿತ್ರ

ಬೆಂಗಳೂರು: ಕಾಡುಗೋಡಿಯ 449 ಎಕರೆ ಅರಣ್ಯ ಭೂಮಿಯನ್ನು ರಕ್ಷಿಸಲು ಸು‍ಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದ್ದು, ಅದೇ ಭೂಮಿಯ 78.54 ಎಕರೆ ಪ್ರದೇಶದಲ್ಲಿ ಎಂಬೆಸಿ ಗ್ರೂಪ್‌ಗೆ ಸೇರಿದ ಕಂಪನಿಯೊಂದು ಮಾಹಿತಿ ತಂತ್ರಜ್ಞಾನ (ಐಟಿ) ಪಾರ್ಕ್ ನಿರ್ಮಾಣ ಕಾರ್ಯ ಆರಂಭಿಸಿದೆ.

ADVERTISEMENT

ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಅರಣ್ಯ ಇಲಾಖೆ ಸರ್ಕಾರಕ್ಕೆ ಮನವಿ ಸಲ್ಲಿಸಿ ನಾಲ್ಕು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ನಿರಾಸಕ್ತಿ ತೋರಿದೆ.

ಲಭ್ಯವಿರುವ ದಾಖಲೆಗಳ ಪ್ರಕಾರ, ಕಾಡುಗೋಡಿ ನೆಡುತೋಪು ಸರ್ವೇ ನಂ 1ರಲ್ಲಿ ಒಟ್ಟು 711 ಎಕರೆ ಭೂಮಿಯನ್ನು ಮೈಸೂರು ಸರ್ಕಾರ 1901ರಲ್ಲಿ ‘ರಾಜ್ಯ ಮೀಸಲು ಅರಣ್ಯ’ವೆಂದು ಘೋಷಿಸಿತ್ತು. ಆದರೆ, 120 ಎಕರೆ ಹೊರತುಪಡಿಸಿ ಉಳಿದ ಭೂಮಿಯನ್ನು ವಶಕ್ಕೆ ಪಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಈ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು ₹22,000 ಕೋಟಿ ಎಂದು ಅಂದಾಜಿಸಲಾಗಿದೆ.

‘2024ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ 120 ಎಕರೆ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರು ₹6,000 ಕೋಟಿ ಎಂದು ಅಂದಾಜಿಸಿದ್ದು, ಪ್ರತಿ ಎಕರೆಗೆ ಸರಾಸರಿ ₹50 ಕೋಟಿ ಮೌಲ್ಯವಿದೆ. ಸಂಪೂರ್ಣ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಕರಣವನ್ನು ಪುನರ್ ತೆರೆದು ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದರು. ಅವರ ಹೇಳಿಕೆಯ ಬೆನ್ನಲ್ಲೇ ‘ಅರಣ್ಯ ಭೂಮಿ ರಕ್ಷಿಸಲು ತಕ್ಷಣ ಮೇಲ್ಮನವಿ ಸಲ್ಲಿಸುವ ಅಗತ್ಯವಿದೆ’ ಎಂದು ಬೆಂಗಳೂರು ವಿಭಾಗದ ಅರಣ್ಯ ಕಚೇರಿಯು ಅರಣ್ಯ ಸಂರಕ್ಷಕರಿಗೆ ಪತ್ರ ಬರೆದಿತ್ತು. ನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೇಲ್ಮನವಿ ಸಲ್ಲಿಸುವಂತೆ ಸರ್ಕಾರವನ್ನು ಕೋರಿದ್ದರು.

ಏನಿದು ವಿವಾದ?:

ಎರಡನೇ ಮಹಾಯುದ್ಧದ ಸಮಯದಲ್ಲಿ ಸೇನೆ 141 ಎಕರೆ ಭೂಮಿಯನ್ನು ಬಳಸಿಕೊಂಡಿತ್ತು. ಉಳಿದ 572 ಎಕರೆ ಭೂಮಿಯನ್ನು ಕೃಷಿ ಚಟುವಟಿಕೆಗಳಿಗಾಗಿ ಸಹಕಾರ ಸಂಘಕ್ಕೆ ಲೀಸ್‌ಗೆ ನೀಡಲಾಗಿತ್ತು. 1985ರಲ್ಲಿ ಕೆಐಎಡಿಬಿ ಸಹಕಾರ ಸಂಘದಿಂದ ಪ್ರತಿ ಎಕರೆಗೆ ₹30,000 ಪರಿಹಾರ ನೀಡಿ, 300 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಆ ಸಹಕಾರ ಸಂಘಕ್ಕೆ ಭೂಮಿಯನ್ನು ಮಾರಾಟ ಮಾಡುವ ಯಾವುದೇ ಹಕ್ಕು ಇರಲಿಲ್ಲ. ಜೊತೆಗೆ, ಈ ಸ್ವಾಧೀನವು ಅರಣ್ಯ ಸಂರಕ್ಷಣಾ ಕಾಯ್ದೆ–1980ರ ಉಲ್ಲಂಘನೆಯಾಗಿತ್ತು. ಕಾಡುಗೋಡಿ ಭೂಮಿಯನ್ನು ಮರುಸ್ವಾಧೀನಪಡಿಸಿಕೊಳ್ಳಲು ಅರಣ್ಯ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌, ನಂತರ ಸುಪ್ರೀಂ ಕೋರ್ಟ್‌ ವಜಾಗೊಳಿಸಿದ್ದವು.

ಈ ಪ್ರದೇಶದ ಸ್ಥಿತಿಗತಿಯ ಬಗ್ಗೆ ಪ್ರಶ್ನೆ ಎತ್ತಿದ್ದ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ, ‘ಸದರಿ ಪ್ರದೇಶ ಅರಣ್ಯದಂತೆ ಭಾಸವಾಗುತ್ತಿದ್ದು, ಭೂಮಿಯ ದಾಖಲೆಗಳು ಹಾಗೂ ಹೆಸರಿನ ಬದಲಾವಣೆ ಪ್ರಕ್ರಿಯೆಯ ಮಾಹಿತಿ  ಸಲ್ಲಿಸಬೇಕು’ ಎಂದು ಸೂಚಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.