ADVERTISEMENT

ನೇಮಕಾತಿ: ವಿವರ ಒದಗಿಸಲು ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 5:38 IST
Last Updated 14 ಅಕ್ಟೋಬರ್ 2025, 5:38 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಆರೋಗ್ಯ ಕವಚ-108 ಸೇವೆ‘ ಯೋಜನೆಯಡಿ ಹೊಸದಾಗಿ ಚಾಲಕರು (ಪೈಲಟ್) ಹಾಗೂ ತುರ್ತು ಚಿಕಿತ್ಸಾ ತಂತ್ರಜ್ಞರನ್ನು (ಇಎಂಟಿ) ನೇಮಕ ಮಾಡಿಕೊಳ್ಳುವ ತನಕ ಈವರೆಗೆ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನೇ ಮುಂದುವರಿಸಬಹುದಲ್ಲವೇ’ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಹೈಕೋರ್ಟ್, ‘ಯಾವ್ಯಾವ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದೆ ಎಂಬ ಬಗ್ಗೆ ಎರಡು ದಿನಗಳಲ್ಲಿ ಮಾಹಿತಿ ನೀಡಿ’ ಎಂದು ನಿರ್ದೇಶಿಸಿದೆ.

ಈ ಸಂಬಂಧ ‘ಅಖಿಲ ಕರ್ನಾಟಕ 108 ಆ್ಯಂಬುಲೆನ್ಸ್ ನೌಕರರ ಹಿತರಕ್ಷಣಾ ಸಂಘ’ದ ಪ್ರಧಾನ ಕಾರ್ಯದರ್ಶಿ ಮತ್ತಿತರರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಸೋಮವಾರ ವಿಚಾರಣೆ ನಡೆಸಿತು.

ADVERTISEMENT

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಆದಿತ್ಯ ಸೋಂಧಿ, ‘ಈ ಹಿಂದಿನ ಒಪ್ಪಂದ ರದ್ದುಪಡಿಸಿ ಹೊಸ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಸೇವಾ ಭದ್ರತೆ ಮತ್ತು ಮಾನವೀಯ ದೃಷ್ಟಿಯಿಂದ ಈ ಪ್ರಕರಣವನ್ನು ಪರಿಗಣಿಸಿ, ಬಾಕಿ ವಿಷಯಗಳು ಇತ್ಯರ್ಥವಾಗುವ ತನಕ ನೇಮಕಾತಿ ಅಧಿಸೂಚನೆಗೆ ತಡೆ ನೀಡಬೇಕು’ ಎಂದು ಕೋರಿದರು.

ಇದನ್ನು ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ‘ಜಿಲ್ಲಾವಾರು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅವರನ್ನೇ ಮುಂದುವರಿಸುವುದಾಗಿ ಸಾರಸಗಟು ಭರವಸೆ ನೀಡಲು ಬರುವುದಿಲ್ಲ. ಏಕೆಂದರೆ, ಈಗ ಸೇವೆಯಲ್ಲಿದ್ದವರೆಲ್ಲ, ಜಿವಿಕೆ-ಇಎಂಆರ್‌ಐ ಸಂಸ್ಥೆಯ ಸಿಬ್ಬಂದಿ’ ಎಂದು ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಈವರೆಗೆ ಯಾವ್ಯಾವ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಆಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.