ADVERTISEMENT

ರಾಜ್ಯ ಸರ್ಕಾರದಿಂದ ‘ಐಟಿ ನೀತಿ 2020-–2025’ ಬಿಡುಗಡೆ

2ನೇ ಹಂತದ ನಗರಗಳಿಗೆ ಐಟಿ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 20:18 IST
Last Updated 12 ನವೆಂಬರ್ 2020, 20:18 IST
ಡಾ.ಸಿ.ಎನ್. ಅಶ್ವತ್ಥನಾರಾಯಣ
ಡಾ.ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ಎರಡನೇ ಹಂತದ ನಗರಗಳಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು(ಐಟಿ) ವಿಸ್ತರಿಸುವ ಗುರಿ ಮತ್ತು ಅದಕ್ಕೆ ಪೂರಕವಾದ ಹೊಸ ‘ಐಟಿ ನೀತಿ 2020-25’ ಅನ್ನು ರಾಜ್ಯ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ.

ನೀತಿ ಬಿಡುಗಡೆ ಮಾಡಿ ಮಾತನಾಡಿದ ಐಟಿ –ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ರಾಜ್ಯದ ವಿವಿಧ ನಗರಗಳಲ್ಲಿ ಐಟಿ ಕಂಪನಿಗಳ ಸ್ಥಾಪನೆ, ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಮಾನವ ಸಂಪನ್ಮೂಲ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಅಂಶಗಳನ್ನು ನೀತಿ ಒಳಗೊಂಡಿದೆ’ ಎಂದರು.

ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ, ‘ಬೆಂಗಳೂರಿನ ಹೊರಗೂ ಐಟಿ ಕ್ಷೇತ್ರಕ್ಕೆ ಅತ್ಯುತ್ತಮ ಅವಕಾಶಗಳಿವೆ. ಶ್ರೇಷ್ಠ ಮಾನವ ಸಂಪನ್ಮೂಲವೂ ಸಿಗುತ್ತಿದೆ. ಮೇಲಾಗಿ ಯಾವುದಾದರೂ ಸಮಸ್ಯೆ ಎದುರಾದರೂ ಸಕಾಲಕ್ಕೆ ಮಧ್ಯಪ್ರವೇಶಿಸಿ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳಲು ಸರ್ಕಾರ ಸದಾ ಸಿದ್ಧವಿದೆ’ ಎಂದರು.

ADVERTISEMENT

ನೀತಿಯಲ್ಲಿ ಏನಿದೆ?

* ಆವಿಷ್ಕಾರ ಮತ್ತು ತಂತ್ರಜ್ಞಾನ ಬಲಪಡಿಸಲು ಆದ್ಯತೆ

* ರಾಜ್ಯದೆಲ್ಲೆಡೆ ಹೂಡಿಕೆ ಉತ್ತೇಜಿಸಿ, ಆರ್ಥಿಕ ಬೆಳವಣಿಗೆ ಪ್ರೋತ್ಸಾಹಿಸಲು ಕಾರ್ಯತಂತ್ರ

* ಬೆಂಗಳೂರು ಹೊರತುಪಡಿಸಿ 2ನೇ ಹಂತದ ನಗರಗಳಲ್ಲಿ ಹೂಡಿಕೆ ಹೆಚ್ಚಿಸಿ ಐಟಿ, ಟೆಲಿಕಾಂ, ಎಲೆಕ್ಟ್ರಾನಿಕ್‌ ಸಿಸ್ಟಮ್‌ ವಿನ್ಯಾಸ ಹಾಗೂ ಅಭಿವೃದ್ಧಿ (ಇಎಸ್‌ಡಿಎಂ) ಕಂಪನಿ ಸ್ಥಾಪನೆ

* ಉದ್ಯೋಗಾವಕಾಶ ಸೃಷ್ಟಿಯ ಜೊತೆಗೆ, ಮೂಲಸೌಕರ್ಯ ಅಭಿವೃದ್ಧಿ, ಮಾರುಕಟ್ಟೆ ಅಭಿವೃದ್ಧಿ, ಪರಿಸರ ರಕ್ಷಣೆ, ಕೌಶಲಾಭಿವೃದ್ಧಿ,
ವ್ಯಾಪಾರ-ವಾಣಿಜ್ಯಾಭಿವೃದ್ಧಿ

* ಬೆಂಗಳೂರಿನ ಹೊರಗೆ ತಮ್ಮ ಚಟುವಟಿಕೆ ವಿಸ್ತರಿಸುವ ಕಂಪನಿಗಳಿಗೆ ಆರ್ಥಿಕ, ಮೂಲಸೌಲಭ್ಯ ಒದಗಿಸುವುದರ ಜೊತೆಗೆ ರಿಯಾಯಿತಿ.

ನೀತಿಯ ಗುರಿಗಳು

* ಟ್ರಿಲಿಯನ್ ಡಾಲರ್‌ಗೂ ಮೀರಿ ಡಿಜಿಟಲ್ ಆರ್ಥಿಕತೆಯಾಗಿ ಹೊರಹೊಮ್ಮುವ ಭಾರತದ ಗುರಿಗಾಗಿ ಶೇ 30ರಷ್ಟು ಕೊಡುಗೆ ನೀಡಲು ರಾಜ್ಯದ ಐಟಿ ಉದ್ಯಮವನ್ನು ಸಜ್ಜುಗೊಳಿಸುವುದು

* ರಾಜ್ಯದಲ್ಲಿ 2020-2025ರ ಅವಧಿಯಲ್ಲಿ 60 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗದ ಅವಕಾಶ ಕಲ್ಪಿಸುವುದು

* ಐಟಿ ಕ್ಷೇತ್ರವನ್ನು ಆದ್ಯತೆಯ ಮೇರೆಗೆ ವಿಸ್ತರಿಸಿ, ಎಲ್ಲ ಭಾಗಗಳ ಸಮಾನಾಂತರ ಅಭಿವೃದ್ಧಿ

* ಐಟಿ ಉದ್ಯಮಕ್ಕೆ ಪೂರಕವಾಗಿ ಬೆಂಗಳೂರಿನ ಹೊರಗೆ ಅತ್ಯುತ್ತಮ ಮಾನವ ಸಂಪನ್ಮೂಲ ಸಜ್ಜುಗೊಳಿಸುವುದು.

* ಅಗತ್ಯ ದತ್ತಾಂಶ ಸಂರಕ್ಷಣೆಗೆ ಬೇಕಾದ ಸೈಬರ್ ಭದ್ರತಾ ನೀತಿ ರೂಪಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.