ADVERTISEMENT

ಸರ್ಕಾರದ ನಿರ್ಲಕ್ಷ್ಯದಿಂದ ದುರಂತ: ಸಿದ್ದರಾಮಯ್ಯ

ಮುಖ್ಯಮಂತ್ರಿ, ಆರೋಗ್ಯ ಸಚಿವ, ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಮೇ 2021, 16:41 IST
Last Updated 3 ಮೇ 2021, 16:41 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಗಕದ ಕೊರತೆಯಿಂದ 24 ಮಂದಿ ಮೃತಪಟ್ಟಿರುವುದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ದುರಂತದ ಹೊಣೆ ಹೊತ್ತುಕೊಂಡು ಮುಖ್ಯಮಂತ್ರಿ, ಆರೋಗ್ಯ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದುರ್ಘಟನೆ ನಡೆದಿರುವ ಆಸ್ಪತ್ರೆಯಲ್ಲಿ ಶನಿವಾರದಿಂದಲೇ ಆಮ್ಲಜನಕದ ಕೊರತೆ ಉಂಟಾಗಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರಿಗೆ ಈ ಮಾಹಿತಿ ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ’ ಎಂದು ದೂರಿದರು.

ಚಾಮರಾಜನಗರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 180 ಹಾಸಿಗೆಗಳಿವೆ. ಅವುಗಳಲ್ಲಿ 120 ಸಾಮಾನ್ಯ ಆಮ್ಲಜನಕ ಪೂರೈಕೆಯ ಹಾಸಿಗೆಗಳು ಮತ್ತು 20 ವೆಂಟಿಲೇಟರ್‌ಗಳಿವೆ. ಆಸ್ಪತ್ರೆಗೆ ನಿತ್ಯವೂ 350 ಆಮ್ಲಜನಕದ ಸಿಲಿಂಡರ್‌ಗಳ ಅಗತ್ಯವಿದೆ. ಮೈಸೂರಿನ ಎರಡು ಕಂಪನಿಗಳಿಂದ ಆಮ್ಲಜನಕ ಪೂರೈಸಲಾಗುತ್ತಿತ್ತು. ಶನಿವಾರ 30 ಸಿಲಿಂಡರ್‌ ಮಾತ್ರ ಪೂರೈಸಿದ್ದು, ಆ ಬಳಿಕ ಆಮ್ಲಜನಕ ಪೂರೈಸದೇ ಇರುವುದು ದುರ್ಘಟನೆಗೆ ಕಾರಣ ಎಂದರು.

ADVERTISEMENT

ಮೂರು ದಿನಗಳಾದರೂ ಆಮ್ಲಜನಕ ಪೂರೈಕೆಯಾಗಲೇ ಇಲ್ಲ. ಇದೇ ಅನಾಹುತಕ್ಕೆ ಕಾರಣವಾಯಿತು. 24 ಜನರ ಸಾವನ್ನು ಸಹಜ ಎಂದು ಪರಿಗಣಿಸಲಾಗದು. ಇದು ಸರ್ಕಾರವೇ ನಡೆಸಿದ ಕೊಲೆ. ಮೃತರಾಗಿರುವ ಎಲ್ಲರ ಕುಟುಂಬಗಳಿಗೂ ತಲಾ ₹ 25 ಲಕ್ಷ ಪರಿಹಾರ ನೀಡಬೇಕು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ನ್ಯಾಯಾಂಗ ತನಿಖೆಗೆ ಆಗ್ರಹ: ಘಟನೆಯ ಕುರಿತು ತನಿಖೆ ನಡೆಸಲು ಐಎಎಸ್‌ ಅಧಿಕಾರಿ ಶಿವಯೋಗಿ ಕಳಸದ ಅವರನ್ನು ನೇಮಿಸಲಾಗಿದೆ. ಅಧಿಕಾರಿ ನಡೆಸುವ ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ. ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಘಟನೆಗೆ ಕಾರಣವಾಗಿರುವ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.