ADVERTISEMENT

ಸರ್ಕಾರವೇ ಗೋಹತ್ಯೆ ಮಾಡುತ್ತಿದೆ: ಎಚ್‌ಡಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 16:13 IST
Last Updated 5 ಜೂನ್ 2021, 16:13 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ರಾಸುಗಳಿಗೆ ಕಾಲು–ಬಾಯಿ ರೋಗಕ್ಕೆ ಲಸಿಕೆ ನೀಡದೆ ಇರುವುದರಿಂದ ಅವು ನರಳಾಡಿ ಸಾಯುವ ಸನ್ನಿವೇಶ ನಿರ್ಮಾಣವಾಗಿದೆ. ಲಸಿಕೆ ಅಭಿಯಾನ ನಡೆಸದೆ ಸರ್ಕಾರವೇ ಗೋಹತ್ಯೆಗೆ ಕಾರಣವಾಗಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಶನಿವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಕಳೆದ ಅಕ್ಟೋಬರ್‌ನಲ್ಲಿ ಕಾಲು–ಬಾಯಿ ರೋಗಕ್ಕೆ ಲಸಿಕೆ ಅಭಿಯಾನ ನಡೆಯಬೇಕಿತ್ತು. ಕೆಂದ್ರ ಸರ್ಕಾರ ಅಭಿಯಾನ ನಡೆಸಿಲ್ಲ. ರಾಜ್ಯ ಸರ್ಕಾರವೂ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ’ ಎಂದು ದೂರಿದ್ದಾರೆ.

ಗೋ ರಕ್ಷಣೆ ಕುರಿತು ಹಾದಿ ಬೀದಿಯಲ್ಲಿ ಅರಚುವ ಬಿಜೆಪಿ ಗೋರಕ್ಷಣೆಗಾಗಿ ಕೆಲಸ ಮಾಡುವುದಿಲ್ಲ ಎಂಬುದಕ್ಕೆ ಇದು ತಾಜಾ ನಿದರ್ಶನ. ಹಿಂದೆಯೂ ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಲು–ಬಾಯಿ ರೋಗದಿಂದ ಹಸುಗಳು ಮೃತಪಟ್ಟಿದ್ದವು. ಆಗ, ತಮ್ಮ ಕಡೆಯಿಂದ ರೈತರಿಗೆ ವೈಯಕ್ತಿಕವಾಗಿ ಪರಿಹಾರ ನೀಡಿದ ಬಳಿಕ ಎಚ್ಚೆತ್ತ ಸರ್ಕಾರ ರೈತರ ನೆರವಿಗೆ ಬಂದಿತ್ತು. ಗೋವುಗಳ ಕುರಿತು ದೊಡ್ಡದಾಗಿ ಮಾತನಾಡುವ ಬಿಜೆಪಿ ಈಗ ಅವುಗಳ ರಕ್ಷಣೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

ADVERTISEMENT

ಕಾಲು–ಬಾಯಿ ಜ್ವರ ಭೀಕರವಾದ ಸಾಂಕ್ರಾಮಿಕ ರೋಗ. ಹಸುಗಳು ನರಳಾಡಿ ಸಾಯುವುದನ್ನು ನೋಡಿ ರೈತರೂ ಕುಗ್ಗಿ ಹೋಗುತ್ತಾರೆ. ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ರೋಗ ಹರಡದಂತೆ ತಡೆಯಬೇಕು. ಜೂನ್‌ನಲ್ಲಿ ನಡೆಯಬೇಕಿರುವ ಲಸಿಕಾ ಅಭಿಯಾನ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.