
ಬೆಳಗಾವಿ (ಸುವರ್ಣ ವಿಧಾನಸೌಧ): ರಾಜ್ಯದಲ್ಲಿ ಕಳೆದ 15 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ 17 ಲಕ್ಷದಷ್ಟು (ಶೇ 30) ಕಡಿಮೆಯಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.
ವಿಧಾನಸಭೆಯಲ್ಲಿ ಬಿಜೆಪಿಯ ಎಸ್. ಸುರೇಶ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಉತ್ತರ ನೀಡಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕುಸಿತ ಸೇರಿದಂತೆ ಶಾಲಾ ಶಿಕ್ಷಣದ ಸಮಸ್ಯೆಗಳೂ ಗಂಭೀರವಾಗಿದ್ದು ಈ ಬಗ್ಗೆ ವಿಸ್ಕೃತವಾಗಿ ಚರ್ಚಿಸಲು ಒಂದು ದಿನ ವಿಶೇಷ ಚರ್ಚೆಗೆ ಕಾಲಾವಕಾಶ ನೀಡಬೇಕು ಎಂದು ಪಕ್ಷಾತೀತವಾಗಿ ಸದಸ್ಯರು ಮನವಿ ಮಾಡಿದರು. ಅದಕ್ಕೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸಹಮತ ವ್ಯಕ್ತಪಡಿಸಿದರು.
‘ಶಿಕ್ಷಣ ಇಲಾಖೆಯ 10–15 ವರ್ಷಗಳ ಶೈಕ್ಷಣಿಕ ಮಾಹಿತಿ ವಿಶ್ಲೇಷಣಾ ವರದಿಗಳನ್ನು ಅವಲೋಕಿಸಿದಾಗ 15 ವರ್ಷಗಳಲ್ಲಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ 17 ಲಕ್ಷ ಕುಸಿದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ’ ಎಂಬ ಸುರೇಶ್ ಕುಮಾರ್ ಅವರ ಪ್ರಶ್ನೆಗೆ, ಗಮನಕ್ಕೆ ಬಂದಿರುವುದಾಗಿ ಮಧು ಬಂಗಾರಪ್ಪ ಉತ್ತರ ನೀಡಿದ್ದಾರೆ.
‘ದಾಖಲಾತಿ ಕುಸಿತಕ್ಕೆ ಕಾರಣಗಳೇನು’ ಎಂಬ ಪ್ರಶ್ನೆಗೆ ಸಚಿವರು, ‘ಇಂಗ್ಲಿಷ್ ಮಾಧ್ಯಮ ಶಿಕ್ಷಣ, ಕೇಂದ್ರೀಯ ಪಠ್ಯಕ್ರಮದತ್ತ ಪೋಷಕರ ಒಲವು, ಪೋಷಕರ, ವಿದ್ಯಾರ್ಥಿಗಳ ವಲಸೆ ಮತ್ತು ರಾಜ್ಯದಲ್ಲಿ ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆ ಆಗುತ್ತಿರುವುದು ಕಾರಣ’ ಎಂದಿದ್ದಾರೆ.
‘ದಾಖಲಾತಿ ಹೆಚ್ಚಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು’ ಎಂಬ ಪ್ರಶ್ನೆಗೆ, ‘ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಬಿಸಿಯೂಟ, ಕ್ಷೀರಭಾಗ್ಯ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ವಿತರಣೆ ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಲಾಗಿದೆ. ಜೊತೆಗೆ, ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲೂ ಪ್ರತಿ ಮೂರು ತಿಂಗಳಿಗೊಮ್ಮೆ ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಚರ್ಚಿಸಲಾಗುತ್ತದೆ. ಗ್ರಾಮ ಪಂಚಾಯಿತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ, ಅಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಕಡೆ ಶಿಕ್ಷಣ ಒದಗಿಸುವ ಗುರಿ ಇದ್ದು, ಸದ್ಯ 900 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. 9,500ಕ್ಕೂ ಹೆಚ್ಚು ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜತೆಗೆ ಇಂಗ್ಲಿಷ್ ಮಾಧ್ಯಮವನ್ನೂ ಆರಂಭಿಸಲಾಗಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಕೈಗೊಂಡಿರುವ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
‘ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ ಅಗತ್ಯವಿರುವ ಕಡೆ ಹೊಸ ಕೊಠಡಿ, ಶೌಚಾಲಯಗಳ ನಿರ್ಮಾಣ, ದುರಸ್ತಿ ಸೇರಿದಂತೆ ಮೂಲಸೌಕರ್ಯಕ್ಕೆ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಬಿಜೆಪಿಯ ಮಹೇಶ್ ಟೆಂಗಿನಕಾಯಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಮೂರು ವಾರಗಳ ಹಿಂದೆಷ್ಟೇ ಸಂಪುಟ ಸಭೆಯಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಒಪ್ಪಿಗೆ ದೊರಕಿದೆ. ಹಣ ಬಿಡುಗಡೆ ಆದೇಶಕ್ಕೂ ಇತ್ತೀಚೆಗೆ ಸಹಿ ಹಾಕಲಾಗಿದೆ’ ಎಂದರು.
‘ಹೊಸ ತರಗತಿಗಳ ನಿರ್ಮಾಣಕ್ಕೆ ₹ 360 ಕೋಟಿ, ದುರಸ್ತಿಗೆ ₹100 ಕೋಟಿ, ಶೌಚಾಲಯಗಳಿಗೆ ₹ 90 ಕೋಟಿ ಬಿಡುಗಡೆ ಮಾಡಲಾಗುವುದು. ಪಿಯು ಕಾಲೇಜುಗಳಲ್ಲಿ ಮೂಲಸೌಕರ್ಯಕ್ಕೆ ಒಟ್ಟಾರೆ ₹ 97 ಕೋಟಿ ಒದಗಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.