ತರಗತಿ (ಸಾಂದರ್ಭಿಕ ಚಿತ್ರ)
– ಎ.ಐ ಚಿತ್ರ
ಮೈಸೂರು: ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು– ಶಿಕ್ಷಕರ ಅನುಪಾತವನ್ನೇ (ಪಿಟಿಆರ್) ಪರಿಷ್ಕರಿಸಿರುವ ಶಿಕ್ಷಣ ಇಲಾಖೆಯು ಈಗ ‘ಹೆಚ್ಚುವರಿ’ ಶಿಕ್ಷಕರ ಪಟ್ಟಿ ಸಿದ್ಧಪಡಿಸಿದೆ. ಇದು ದಾಖಲಾತಿ ಮತ್ತು ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆಗುಣಮಟ್ಟದ ಶಿಕ್ಷಣ ಸಿಗಬೇಕು. ಪೂರಕವಾಗಿ ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸಲು ಒತ್ತು ನೀಡಬೇಕು ಎಂಬ ಬೇಡಿಕೆ ಇರುವಾಗಲೇ, ಮರುಹೊಂದಾಣಿಕೆ ಕಸರತ್ತಿನ ಮೂಲಕ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಸದ್ದಿಲ್ಲದೆ ಮಾಡಿದೆ.
ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಶಿಕ್ಷಕರ ಮರು ಹೊಂದಾಣಿಕೆ ಹೆಸರಿನಲ್ಲಿ ಮುಚ್ಚುವ ಹುನ್ನಾರ ನಡೆಸಬಾರದು. ಮೊದಲು ಖಾಲಿ ಹುದ್ದೆ ತುಂಬಲಿಶಶಿಧರ ಕೋಸಂಬೆ, ಸದಸ್ಯ ಮಕ್ಕಳ ರಕ್ಷಣಾ ಹಕ್ಕುಗಳ ಆಯೋಗ
60 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದೆ ಎಂದು ಸರ್ಕಾರವೇ ಹೇಳುತ್ತಿದೆ. 2024ರ ಡಿಸೆಂಬರ್ ಅಂಕಿ–ಅಂಶ ಆಧರಿಸಿ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ಧಪಡಿಸಿರುವುದು ಸರಿಯಲ್ಲನಿರಂಜನಾರಾಧ್ಯ ವಿ.ಪಿ., ಶಿಕ್ಷಣ ತಜ್ಞ
ಕಿರಿಯ ಪ್ರಾಥಮಿಕ ಶಾಲೆ (1ರಿಂದ 5ನೇ ತರಗತಿ) ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ (6ರಿಂದ 8ನೇ ತಗರತಿ) ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆಯ ಕೋಷ್ಟಕ ಸಿದ್ಧಪಡಿಸಿ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಈಚೆಗೆ ಸುತ್ತೋಲೆಯನ್ನು ಹೊರಡಿಸಿದೆ.
‘ಸುಮಾರು 10 ಸಾವಿರ ಹೆಚ್ಚುವರಿ ಶಿಕ್ಷಕರ ಪಟ್ಟಿ ರಚಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಿಗೆ ಇವರನ್ನು ವರ್ಗಾವಣೆ ಮಾಡಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರ ಇದಾಗಿದೆ’ ಎಂದು ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ್‌ಚಂದ್ರ ಪ್ರತಿಕ್ರಿಯಿಸಿದ್ದಾರೆ.
1ರಿಂದ 11 ವಿದ್ಯಾರ್ಥಿ ಗಳಿಗೆ ಒಬ್ಬ ಶಿಕ್ಷಕ ಎಂಬ ಪಿಟಿಆರ್ ಹಾಗೇ ಉಳಿಸಲಾಗಿದೆ. 1ರಿಂದ 7ನೇ ತರಗತಿ ವರೆಗಿನ ಶಾಲೆ ಗಳಲ್ಲಿ ಹಿಂದೆ ಮುಖ್ಯೋಪಾಧ್ಯಾಯರು ಸೇರಿ ಐದು ಹುದ್ದೆಗಳನ್ನು ನಿಗದಿಪಡಿಸಲಾಗಿತ್ತು. ಈ ವರ್ಷ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 60 ಮೀರಿದರೆ ಮುಖ್ಯ ಶಿಕ್ಷಕರು ಸೇರಿದಂತೆ 4 ಹುದ್ದೆಗಳಿಗೆ ಸೀಮಿತಗೊಳಿಸಲಾಗಿದೆ.
ದಾಖಲಾತಿ ಕಡಿಮೆಯುಳ್ಳ ಶಾಲೆಗಳಲ್ಲಿ ಇದರಿಂದ ಶಿಕ್ಷಕರ ಸಂಖ್ಯೆ ಕಡಿತವಾಗಲಿವೆ. ಒಬ್ಬರೇ ಶಿಕ್ಷಕ ಎರಡು ತರಗತಿನಿರ್ವಹಿಸಬೇಕಾಗುತ್ತದೆ. ಇಬ್ಬರು ಶಿಕ್ಷಕರಿದ್ದಲ್ಲಿ ಆರು ವಿಷಯಗಳನ್ನು ಹಂಚಿಕೊಂಡು ಬೋಧಿಸಬೇಕಿದೆ ಎನ್ನುತ್ತಾರೆ ಕೊಡಗು ಜಿಲ್ಲೆ ಸರ್ಕಾರಿ ಶಾಲೆಯೊಂದರ ಇಂಗ್ಲಿಷ್ ವಿಷಯ ಶಿಕ್ಷಕ.
ಅಧಿಕಾರಿಗಳು ಹೇಳುವುದೇನು?: ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ,ಶಿಕ್ಷಕರಿಲ್ಲ ಎಂಬ ಕೊರತೆಯನ್ನು ಮರು ಹೊಂದಾಣಿಕೆ ವ್ಯವಸ್ಥೆನೀಗಿಸಲಿದೆ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು.
‘ಶಿಕ್ಷಕರ ಮರು ಹೊಂದಾಣಿಕೆ ಅವೈಜ್ಞಾನಿಕ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 60 ಮಕ್ಕಳಿದ್ದಲ್ಲಿ ಮುಖ್ಯ ಶಿಕ್ಷಕರು ಸೇರಿ ಐವರು ಶಿಕ್ಷಕರು ಇರಬೇಕು. ಮಕ್ಕಳ ದಾಖಲಾತಿಯು 90 ದಾಟಿದರೆ ಕನಿಷ್ಠ ಆರು ಶಿಕ್ಷಕರಿರಬೇಕು’ ಎಂಬುದು ಡಿಎಸ್‌ಇ ಆರ್‌ಟಿಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
50ಸಾವಿರದಿಂದ 60ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದೆ ಎಂದು ಸರ್ಕಾರವೇ ಅಂಕಿಅಂಶ ನೀಡುತ್ತಿದೆ. ಆದರೆ, ಈಗ ಶಿಕ್ಷಕರ ಮರು ಹೊಂದಾಣಿಕೆಯು ಸರ್ಕಾರಿ ಶಾಲೆಗಳನ್ನು ಆದಷ್ಟು ತ್ವರಿತವಾಗಿ ಮುಚ್ಚುವ ಹುನ್ನಾರ’ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಅಸಮಾಧಾನ ವ್ಯಕ್ತಪಡಿಸಿದರು.
ಈ ವರ್ಷದ ಮೇ–ಜೂನ್‌ನಲ್ಲಾದ ದಾಖಲಾತಿ ಪರಿಗಣಿದೆ, 2024ರ ಡಿಸೆಂಬರ್ ಅಂಕಿಅಂಶ ಆಧರಿಸಿ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ಧಪಡಿಸಿರುವುದು ಸರಿಯಲ್ಲ ಎನ್ನುವುದು ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.