
ಬೆಂಗಳೂರು: ‘ಸರ್ಕಾರದ ಸೇವೆಗಳನ್ನು ಜನರಿಗೆ ಯಾವುದೇ ವಿಳಂಬ ಮಾಡದೆ ತಲುಪಿಸುವ ಜೊತೆಗೆ, ಜಾತ್ಯತೀತವಾಗಿ, ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಕೆಲಸ ಮಾಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಹೊಸ ವರ್ಷದ ಪ್ರಯುಕ್ತ ಸರ್ಕಾರದ ಎಲ್ಲ ಹಿರಿಯ ಅಧಿಕಾರಿಗಳಿಗೆ ಶುಭಾಶಯ ಕೋರಿ ಮಾತನಾಡಿದ ಅವರು, ‘ಸಂವಿಧಾನದಲ್ಲಿ ಇರುವಂತೆ ಎಲ್ಲರಿಗೂ ಸಮಾನ ಅವಕಾಶ, ಅಧಿಕಾರ ವಿಕೇಂದ್ರೀಕರಣಗಳನ್ನು ಸಾಧಿಸುವುದು ನಮ್ಮ ಹೊಣೆಗಾರಿಕೆ’ ಎಂದರು.
‘ಸಮ ಸಮಾಜ ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಎಲ್ಲರಿಗೂ ನ್ಯಾಯ ಒದಗಿಸುವುದು ಅವಶ್ಯ. ಅಧಿಕಾರಿಗಳು 30-40 ವರ್ಷಗಳು ಅಧಿಕಾರದಲ್ಲಿದ್ದರೆ, ನಾವು ಐದು ವರ್ಷ ಅಧಿಕಾರದಲ್ಲಿರುತ್ತೇವೆ. ಜನರಿಗೆ ಅವಶ್ಯವಿರುವ ಸರ್ಕಾರದ ಸೇವೆಗಳನ್ನು ಒದಗಿಸುವಲ್ಲಿ ವಿಳಂಬ ನೀತಿ ಅನುಸರಿಸುವುದೂ ಅಪರಾಧವೇ’ ಎಂದರು.
‘ರೈತರ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು’ ಎಂದರು.
‘ವಿರೋಧ ಪಕ್ಷಗಳು ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಕಷ್ಟಸುಖಗಳಿಗೆ ಸ್ಪಂದಿಸಲು ಹೆಚ್ಚಿನ ಆದ್ಯತೆ ನೀಡಬೇಕು’ ಎಂದೂ ಸಲಹೆ ನೀಡಿದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.