ಮಂಡ್ಯ: ‘ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ತನ್ನ ಕಿಸೆಯಿಂದೇನೂ ಪರಿಹಾರ ನೀಡುವುದಿಲ್ಲ. ಜನರು ತೆರಿಗೆ ರೂಪದಲ್ಲಿ ನೀಡುವ ಹಣವನ್ನಷ್ಟೇ ನೀಡುತ್ತದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಹೇಳಿದರು.
ಸುದ್ದಿಗಾರರ ಜೊತೆ ಮಾನತಾಡಿದ ಅವರು ‘ಜನರು ದುಡಿಮೆ ಇಲ್ಲದೇ ಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲಾ ವರ್ಗದ ಜನರಿಗೂ ಪರಿಹಾರ ನೀಡಬೇಕು. ಸರ್ಕಾರದ ಪರಿಹಾರ ಕೇವಲ ಜಾಹೀರಾತಿಗಷ್ಟೇ ಸೀಮಿತವಾಗಬಾರದು. ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿರುವ ಕುಟುಂಬಸ್ಥರು ನೆಮ್ಮದಿಯಿಂದ ಜೀವನ ನಡೆಸಲು ಸರ್ಕಾರ ಅವರ ಜೊತೆಗೆ ನಿಲ್ಲಬೇಕು’ ಎಂದರು.
‘ಕಷ್ಟ ಕಾಲದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ ಕಿಸೆಗೆ ಕೈಹಾಕಿವೆ. ಲೀಟರ್ ಪೆಟ್ರೋಲ್ ಬೆಲೆಯಲ್ಲಿ ₹ 60–68ರಷ್ಟು ಬಾಬ್ತು ತೆರಿಗೆಯದ್ದೇ ಪಾಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ಬಡವರ ಮೇಲೆ ತೆರಿಗೆ ಹಾಕಿ ಖಜಾನೆ ತುಂಬಿಸಿಕೊಳ್ಳುತ್ತಿವೆ. ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದ್ದು ಪ್ರಚಾರಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ’ ಎಂದರು.
‘ರಾಜ್ಯದಲ್ಲಿ ನಡೆಯುತ್ತಿರುವ ಸಿ.ಎಂ ಬದಲಾವಣೆ ದೊಂಬರಾಟದಲ್ಲಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ಎಳೆದು ತರಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ದೇವೇಗೌಡರ ಹೆಸರನ್ನು ದುರುಪಯೋಗ ಮಾಡಿಕೊಂಡಿರುವುದನ್ನು ಕಂಡಿದ್ದೇವೆ. ನಮ್ಮ ಕುಟುಂಬ ಯಾವ ಪಕ್ಷದ ಪರವಾಗಿಯೂ ಇಲ್ಲ. ಕೋವಿಡ್ ಸಂಕಷ್ಟ ಸಮಯಲ್ಲಿ ರಾಜಕೀಯ ಬೇಡ ಎಂಬ ಕಾರಣಕ್ಕೆ ನಾವು ಮೌನವಾಗಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.