ADVERTISEMENT

ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ಒತ್ತಡಕ್ಕೆ ಮಣಿಯದಿರಲಿ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 13:23 IST
Last Updated 13 ಸೆಪ್ಟೆಂಬರ್ 2023, 13:23 IST
<div class="paragraphs"><p>ಬಸವರಾಜ ಬೊಮ್ಮಾಯಿ</p></div>

ಬಸವರಾಜ ಬೊಮ್ಮಾಯಿ

   

ಹಾವೇರಿ: ‘ಕಾವೇರಿ ನೀರಿನ ವಿಚಾರದಲ್ಲಿ ನಾವು ರಾಜ್ಯ ಸರ್ಕಾರದ ಜೊತೆಗಿದ್ದೇವೆ. ರಾಜ್ಯ ಸರ್ಕಾರ ರಾಜ್ಯದ ವಾಸ್ತವ ಸ್ಥಿತಿಯನ್ನು ಸುಪ್ರೀಂಕೋರ್ಟ್‌ನಲ್ಲಿ ಗಟ್ಟಿಯಾಗಿ ಪ್ರತಿಪಾದಿಸಬೇಕು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. 

ಸವಣೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಇನ್ನು ಮುಂದೆ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದ ರಾಜ್ಯ ಸರ್ಕಾರ ನೀರು ಬಿಟ್ಟಿತ್ತು. ಬುಧವಾರ ಸರ್ವಪಕ್ಷ ಸಭೆ ಕರೆದಿದ್ದು ನೋಡಿದರೆ, ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಪಾದಿಸಲು ಸಾದ್ಯವಾಗುತ್ತಿಲ್ಲ. ಮತ್ತೆ ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ. ನಾವು ಸರ್ಕಾರದ ಜೊತೆಗಿದ್ದೇವೆ. ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು. ಈ ಸಂದರ್ಭದಲ್ಲಿ ರಾಜ್ಯದ ನಾಯಕತ್ವ ಎಷ್ಟು ಗಟ್ಟಿಯಾಗಿದೆ’ ಎಂದು ತೋರಿಸಿಕೊಡಬೇಕಿದೆ ಎಂದು ಹೇಳಿದರು.

ADVERTISEMENT

‘ನಾವು ಈಗಾಗಲೇ ತಮಿಳುನಾಡಿಗೆ 16ರಿಂದ 17 ಟಿಎಂಸಿ ನೀರು ಹರಿಸಿದ್ದೇವೆ. ಮತ್ತೆ ಐದು ಸಾವಿರ ಕ್ಯೂಸೆಕ್‌ ನೀರು ಹರಿಸುವುದು ಸಾಧ್ಯವಿಲ್ಲದ ಮಾತು. ನಮಗೆ ಕುಡಿಯುವ ನೀರಿಗೂ ಕೊರತೆಯಿದೆ. ರಾಜ್ಯ ಸರ್ಕಾರ ಸೆ.12ರ ನಂತರ ನೀರು ಬಿಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಕೊಟ್ಟಿದೆ. ಇದಕ್ಕೆ ರಾಜ್ಯ ಸರಕಾರ ಬದ್ಧವಾಗಿರಬೇಕು’ ಎಂದು ಹೇಳಿದರು.

ಚೈತ್ರಾ ಕುಂದಾಪುರ ವಿಚಾರಣೆ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಸಂಪರ್ಕವಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ , ‘ಯಾರಾದರೂ ಅಪರಾಧದಲ್ಲಿ ಸಿಕ್ಕಾಗ ತಮ್ಮ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ಆ ರೀತಿ ಹೇಳುತ್ತಾರೆ. ಪೊಲೀಸ್‌ನವರು ತನಿಖೆ ನಡೆಸಿ, ನಿಜಾಂಶ ಹೊರಗೆ ತರಲಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.