ADVERTISEMENT

ಸರ್ಕಾರವೇ ಸಾಮರಸ್ಯ ಕಾಪಾಡಬೇಕು: ಎಚ್.ವಿಶ್ವನಾಥ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 19:55 IST
Last Updated 31 ಮಾರ್ಚ್ 2022, 19:55 IST
   

ನವದೆಹಲಿ: ಕರ್ನಾಟಕದಲ್ಲಿ ಆರ್‌ಎಸ್‌ಎಸ್, ಬಜರಂಗದಳ ಅಥವಾ ವಿಶ್ವ ಹಿಂದೂ ಪರಿಷತ್ ನೇತೃತ್ವದ ಸರ್ಕಾರವಿಲ್ಲ. ಬಿಜೆಪಿ ಸರ್ಕಾರ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾರ ಮಾತನ್ನೂ ಕೇಳದೇ ರಾಜ್ಯದಲ್ಲಿ ಸಾಮರಸ್ಯ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಸಲಹೆ ನೀಡಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್, ಹಲಾಲ್, ಟಿಪ್ಪು ಸುಲ್ತಾನ್ ಮತ್ತಿತರ ಸೂಕ್ಷ್ಮ ವಿಷಯಗಳ ಕುರಿತು ಜನರನ್ನು ಇಬ್ಭಾಗ ಮಾಡದೇ ಎಲ್ಲರನ್ನೂ ಒಂದುಗೂಡಿಸುವತ್ತ ಸರ್ಕಾರ ಮುಂದಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬಿ.ಎಸ್. ಯಡಿಯೂರಪ್ಪ ಅವರ ಆಡಳಿತದಲ್ಲಿ ಈ ರೀತಿಯ ಒಡೆದಾಳುವ ನೀತಿಯನ್ನು ಅನುಸರಿಸಿರಲಿಲ್ಲ. ಬೊಮ್ಮಾಯಿ ಆಡಳಿತ ವೈಖರಿಯು ಸರ್ಕಾರದ ಹೆಸರು ಕೆಡಿಸುತ್ತಿದೆ. ಯಡಿಯೂರಪ್ಪ ಅವರು ಕೂಡಲೇ ಮಧ್ಯ ಪ್ರವೇಶಿಸುವ ಮೂಲಕ ಪರಿಸ್ಥಿತಿ ಸರಿಪಡಿಸಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ರೋಹಿತ್ ಚಕ್ರತೀರ್ಥ ಅವರನ್ನು ನೇಮಿಸಿದೆ. ಅವರ ಅರ್ಹತೆ ಏನು ಎಂಬುದನ್ನು ಶಿಕ್ಷಣ ಸಚಿವರು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಎಂಬುದರಲ್ಲಿ ಸಂಶಯವಿಲ್ಲ. ಯಾರು ಏನೇ ಹೇಳಿದರೂ ಇತಿಹಾಸವನ್ನು ಮರೆಮಾಚಲು ಆಗದು ಎಂದ ಅವರು, ಹಲಾಲ್ ಮಾಂಸ ನಿಷೇಧ ಮತ್ತು ದೇವಸ್ಥಾನಗಳ ಎದುರು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಿರುವ ನಿರ್ಧಾರ ಸರ್ಕಾರದ್ದಲ್ಲ. ಆದರೂ ಈ ಬಗ್ಗೆ ಸರ್ಕಾರ ಮೌನ ವಹಿಸದೆ ಸೂಕ್ತ ನಿಲುವು ಪ್ರಕಟಿಸಬೇಕು ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.