ADVERTISEMENT

ಉದ್ಯಮಿಗಳ ‘ಮನೆ ಬಾಗಿಲಿ’ಗೆ ಸರ್ಕಾರ: ನಿರಾಣಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 21:09 IST
Last Updated 18 ಫೆಬ್ರುವರಿ 2021, 21:09 IST
ಮುರುಗೇಶ್‌ ನಿರಾಣಿ
ಮುರುಗೇಶ್‌ ನಿರಾಣಿ   

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ಸುಕರಾಗಿರುವವರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಇಲಾಖೆಯನ್ನು ಜನಸ್ನೇಹಿಗೊಳಿಸುವ ಜೊತೆಗೆ, ‘ಉದ್ಯಮಿಗಳ ಮನೆಬಾಗಿಲಿಗೆ ಸರ್ಕಾರ’ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ಒಕ್ಕೂಟದ ನಿಯೋಗ ನಿರಾಣಿ ಅವರನ್ನು ಗುರುವಾರ ಭೇಟಿ ಮಾಡಿ ಬೇಡಿಕೆಗಳ ಮನವಿ ಸಲ್ಲಿಸಿತ್ತು. ಈ ವೇಳೆ ಮಾತನಾಡಿದ ಸಚಿವರು, ರಾಜ್ಯವನ್ನು ‘ಉದ್ಯಮಸ್ನೇಹಿ' ಮಾಡುವುದು ತಮ್ಮ ಮುಂದಿರುವ‌ ಮೊದಲ ಸವಾಲು ಎಂದರು.

‘ನಿಮ್ಮ ಬೇಡಿಕೆಗಳನ್ನು ಬಜೆಟ್‌ನಲ್ಲಿ ಸೇರಿಸಲಾಗುವುದು. ನೀವು ಯಾವುದೇ ಆತಂಕಪಡಬೇಕಿಲ್ಲ. ಇಲಾಖೆಯಲ್ಲಿ ಈಗಾಗಲೇ ಕೆಲವು ಮಹತ್ವದ ಸುಧಾರಣೆಗಳನ್ನು ತೆಗೆದುಕೊಳ್ಳಲಾಗಿದೆ.ಮರಳು, ಕಲ್ಲು ಕ್ವಾರಿ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ನಿಯೋಗಕ್ಕೆ ನಿರಾಣಿ ಭರವಸೆ ನೀಡಿದರು.

ADVERTISEMENT

‘2021- 2026ನೇ ಸಾಲಿನ ಹೊಸ ಮರಳು ನೀತಿ ಶೀಘ್ರವೇ ಜಾರಿಗೆ ಬರಲಿದೆ. ಅದರಲ್ಲಿ ಅನೇಕ ಹೊಸ ಹೊಸ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದೇವೆ. ಕಟ್ಟಕಡೆಯ ಮನುಷ್ಯನಿಗೂ ಸುಲಭವಾಗಿ ಮರಳು ಸಿಗಬೇಕು ಎಂಬುವುದೇ ನಮ್ಮ ಉದ್ದೇಶ’ ಎಂದರು.

ಬೇಡಿಕೆಗಳೇನು?: 'ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣ (ಎಂಎಂಡಿಆರ್‌) ಕಾಯ್ದೆಯಡಿ ₹ 5 ಲಕ್ಷದಂತೆ ಪ್ರಕರಣವನ್ನು ಒಮ್ಮೆಗೆ ಇತ್ಯರ್ಥಪಡಿಸುವುದು, ಇಲಾಖೆ ವತಿಯಿಂದ ಈ ಹಿಂದೆ ಕೈಗೊಳ್ಳಲಾದ ಡ್ರೋನ್ ಸಮೀಕ್ಷೆಯ ವರದಿ ಅವೈಜ್ಞಾನಿಕ ಹಾಗೂ ಏಕಪಕ್ಷೀಯವಾಗಿರುವುದರಿಂದ ಅದರ ಆಧಾರದ ಮೇಲೆ ವಿಧಿಸಲಾಗಿರುವ 5 ಪಟ್ಟು ದಂಡವನ್ನು ರದ್ದುಪಡಿಸುವುದು, ಕಲ್ಲು ಗಣಿ ಗುತ್ತಿಗೆದಾರರಿಂದ ಸಾಗಣೆಯ ರಾಜಧನ (ಎಂಡಿಪಿ/ಎಂಡಿಆರ್) ಪರವಾನಗಿ ಪಡೆಯುವುದು ಕಡ್ಡಾಯಗೊಳಿಸಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ನಿಯೋಗ ಒತ್ತಾಯಿಸಿದೆ.

ನಿಯೋಗದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್‌. ದತ್ತಾತ್ರಿ, ಅಧ್ಯಕ್ಷ ಸಂಜೀವ ಹಟ್ಟಿಹೊಳಿ, ಉಪಾಧ್ಯಕ್ಷರಾದ ಡಿ.ಸಿದ್ದರಾಜು, ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.