ADVERTISEMENT

‘ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಸರ್ಕಾರದ ನೆರವು’

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 19:33 IST
Last Updated 6 ಜನವರಿ 2021, 19:33 IST
‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಸಚಿವರಾದ ಎಸ್‌. ಸುರೇಶ್‌ಕುಮಾರ್‌, ಆರ್‌. ಅಶೋಕ, ಕೆ. ಗೋಪಾಲಯ್ಯ, ಗೋವಿಂದ ಕಾ ರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ತೇಜಸ್ವಿ ಸೂರ್ಯ, ಉದಯಗರುಡಾಚಾರ್‌, ಎಸ್‌.ಎ ರಾಮದಾಸ್, ಎಸ್‌.ಆರ್‌. ವಿಶ್ವನಾಥ್‌, ಸಚ್ಚಿದಾನಂದ ಮೂರ್ತಿ ಇದ್ದರು.
‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಸಚಿವರಾದ ಎಸ್‌. ಸುರೇಶ್‌ಕುಮಾರ್‌, ಆರ್‌. ಅಶೋಕ, ಕೆ. ಗೋಪಾಲಯ್ಯ, ಗೋವಿಂದ ಕಾ ರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ತೇಜಸ್ವಿ ಸೂರ್ಯ, ಉದಯಗರುಡಾಚಾರ್‌, ಎಸ್‌.ಎ ರಾಮದಾಸ್, ಎಸ್‌.ಆರ್‌. ವಿಶ್ವನಾಥ್‌, ಸಚ್ಚಿದಾನಂದ ಮೂರ್ತಿ ಇದ್ದರು.   

ಬೆಂಗಳೂರು: ‘ಆರ್ಥಿಕವಾಗಿ ದುರ್ಬಲರಾಗಿರುವ ಬ್ರಾಹ್ಮಣರಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮೂಲಕ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಸರ್ಕಾರದಿಂದ ಎಲ್ಲ ಸಹಕಾರ ನೀಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ಬುಧವಾರ ವಿಧಾನಸೌಧದಲ್ಲಿ ನಡೆದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಗೌರವಿಸಿ ಮತ್ತು ಮಂಡಳಿಯ 'ಅರುಂಧತಿ' ಯೋಜನೆಗೆ ಚಾಲನೆ ನೀಡಿ ಸಚಿವರು ಮಾತನಾಡಿದರು.

‘ಕೊರೊನಾ ಕಾರಣ ಇತರ ರಾಜ್ಯಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಕೈಬಿಟ್ಟಾಗ ಮಕ್ಕಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಪರೀಕ್ಷೆಯನ್ನು ನಡೆಸಿತು. ಇದರಿಂದ ಪ್ರತಿಭೆಗಳ ಅನಾವರಣಕ್ಕೆ ಅವಕಾಶವಾಯಿತು. ಪರೀಕ್ಷೆ ನಡೆಸದೇ ಹೋಗಿದ್ದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಯಶಸ್ಸು, ಮನೆಯಿಂದ ಧೈರ್ಯವಾಗಿ ಹೊರಬಂದು ಪರೀಕ್ಷೆ ಬರೆದ 8.5 ಲಕ್ಷ ಮಕ್ಕಳಿಗೆ ಸಲ್ಲಬೇಕು’ ಎಂದರು.

ADVERTISEMENT

‘ಆರನೇ ತರಗತಿ ಪುಸ್ತಕದಲ್ಲಿ ವಿಪ್ರ ಸಮಾಜಕ್ಕೆ ಅವಹೇಳನವಾಗುವಂಥ ಪಠ್ಯವೊಂದಿರುವ ಕುರಿತು ಮಂತ್ರಾಲಯದ ಶ್ರೀಗಳು ನನ್ನ ಗಮನಕ್ಕೆ ತಂದು, ಪಠ್ಯಗಳಲ್ಲಿ ಯಾವುದೇ ಸಮಾಜದ ಇಲ್ಲವೇ ಯಾವುದೇ ಜನರ ಭಾವನೆಗಳಿಗೆ ಧಕ್ಕೆ ತರುವಂಥ ಪಠ್ಯಗಳಿರಬಾರದು ಎಂದರು. ತಕ್ಷಣವೇ ಅವರಿಗೆ ಮಾತು ಕೊಟ್ಟಂತೆ ಅದನ್ನು ಸರಿಪಡಿಸಿದೆವು. ಈ ಪಠ್ಯವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಪರಿಷ್ಕರಿಸಿರಲಿಲ್ಲ ಎಂಬುದನ್ನು ಶ್ರೀಗಳ ಗಮನಕ್ಕೆ ತಂದುಮ ಯಾವುದೇ ಸಮಾಜದ ಭಾವನೆಗಳಿಗೆ ಧಕ್ಕೆ ಆಗುವಂಥ ಪಠ್ಯಗಳಿದ್ದರೆ ಪಠ್ಯದಿಂದ ಕೈಬಿಡುವ ಕುರಿತು ಗಮನಹರಿಸಲಾಗಿದೆ’ ಎಂದು ಸುರೇಶ್ ಕುಮಾರ್ ಹೇಳಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಆರ್. ಅಶೋಕ, ಕೆ. ಗೋಪಾಲಯ್ಯ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಶಾಸಕರಾದ ಎಸ್.ಆರ್. ಶ್ರೀನಿವಾಸ್, ಎಸ್.ಎ. ರಾಮದಾಸ್, ಉದಯಗರುಡಾಚಾರ್, ಪೂರ್ಣಿಮಾ ಶ್ರೀನಿವಾಸ್, ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್, ಹಿಂದಿನ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಕಾರ್ಯಕ್ರಮದಲ್ಲಿ ಇದ್ದರು. ಕರ್ನಾಟಕ ಬ್ರಾಹ್ಮಣ ಮಂಡಳಿ ಅಧ್ಯಕ್ಷ ಕೆ.ಎಸ್. ಸಚ್ಚಿದಾನಂದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.