ಸಿದ್ದರಾಮಯ್ಯ
ಮಂಗಳೂರು: 'ದ್ವೇಷ ಭಾಷಣ ಮಸೂದೆ ವಿಧಾನಮಂಡಲದ ಉಭಯಸದನಗಳಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಅದನ್ನು ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರು ತಿರಸ್ಕರಿಸಿಲ್ಲ , ಹಿಂದಕ್ಕೂ ಕಳುಹಿಸಿಲ್ಲ. ಅದರ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲ' ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಈ ಮಸೂದೆಯನ್ನು ವಿರೋಧಿಸಿ ಬಿಜೆಪಿ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡುವ ವಿಚಾರದ ಕುರಿತು ಇಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, 'ರಾಜ್ಯಪಾಲರು ಈ ಮಸೂದೆ ಬಗ್ಗೆ ವಿವರಣೆ ಕೇಳಿದರೆ, ಹೋಗಿ ವಿವರಿಸುತ್ತೇನೆ. ಅವರು ಯಾವಾಗ ಕರೆಯುತ್ತಾರೆ ನೋಡೋಣ' ಎಂದರು.
ಬ್ಯಾನರ್ ತೆರವು ಬಳ್ಳಾರಿ ಘಟನೆಗೆ ಪ್ರಚೋದನೆ: ಸಿದ್ದರಾಮಯ್ಯ
ಬಳ್ಳಾರಿಯಿಂದ ಬೆಂಗಳೂರಿಗೆ ಬಿಜೆಪಿ ಪಾದಯಾತ್ರೆ ನಡೆಸಲು ತಯಾರಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಪಾದಯಾತ್ರೆ ಮಾಡಲಿ ಪಾಪ. ಬೇಡ ಎಂದವರು ಯಾರು. ಬಿಜೆಪಿಯವರು, ಅದರಲ್ಲೂ ಜನಾರ್ಧನ ರೆಡ್ಡಿ, ಶ್ರೀರಾಮುಲು ಕಾಯುತ್ತಾ ಇದ್ದಾರೆ. ಅಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಅಸೂಯೆಯಿಂದ ಈ ರೀತಿ ಮಾಡುತ್ತಿದ್ದಾರೆ' ಎಂದರು.
'ನಾವು ಹಿಂದೆ ಬಳ್ಳಾರಿ ಪಾದಯಾತ್ರೆ ಮಾಡಿದ್ದು ಒಳ್ಳೆಯ ವಿಚಾರಕ್ಕಾಗಿ. ರೆಡ್ಡಿ ಸಹೋದರರು ಬಳ್ಳಾರಿ ಆಫ್ ರಿಪಬ್ಲಿಕ್ ನಡೆಸುತ್ತಿದ್ದಾರೆ. ಅಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆಗಿನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ವರದಿ ಕೊಟ್ಟಿದ್ದರು. ಆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ನಡೆಸಿದಾಗ ರೆಡ್ಡಿ ಸಹೋದರರು ಮತ್ತು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮೈಮೇಲೆ ಬಿದ್ದಿದ್ದರು. ಅದಕ್ಕೋಸ್ಕರ ನಾವು ಆಗ ಪಾದಯಾತ್ರೆ ಮಾಡಿದ್ದೆವು' ಎಂದರು.
'ಬಿಜೆಪಿಯವರು ಯಾವುದಕ್ಕೋಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮಿಕಿ ಪ್ರತಿಮೆ ಉದ್ಘಾಟನೆಯ ಬ್ಯಾನರ್ ಹಾಕಿದ್ದನ್ನು ತೆಗೆದವರು ಯಾರು. ಅದನ್ನು ತೆಗೆಯಬೇಕಾದ ಅಗತ್ಯ ಏನಿತ್ತು. ಅದರಿಂದಲೇ ಪ್ರಚೋದನೆ ಆಗಿದ್ದಲ್ಲವೇ. ಬ್ಯಾನರ್ ತೆಗೆಯದೇ ಇದ್ದಿದ್ದರೆ ಪ್ರಚೋದನೆ ಎಲ್ಲಿ ಆಗುತ್ತಿತ್ತು' ಎಂದು ಪ್ರಶ್ನಿಸಿದರು.
'ಸಂಕ್ರಾತಿ ಬಳಿಕ ಕುರ್ಚಿ ಕಾಳಗ ಭಾಗ- 2 ಆರಂಭ' ಎಂದು ಬಿಜೆಪಿಯವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಕಾಳಗ ಎಲ್ಲಿದೆ. ಕಾಳಗವೇ ಇಲ್ಲ. ಎಲ್ಲಾ ಸುಮ್ನೇ ಕೇಳುತ್ತೀರಿ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.