ADVERTISEMENT

43 ಶಾಸಕರಿಗೆ ನಿಗಮ– ಮಂಡಳಿಗಳ ಅಧ್ಯಕ್ಷಗಿರಿ: ಕಾನೂನು ಉಲ್ಲಂಘನೆಯ ವರದಿಗೆ ಸೂಚನೆ

ಅಗತ್ಯ ದಾಖಲೆಗಳೊಂದಿಗೆ ವಾಸ್ತವ ವರದಿ ಸಲ್ಲಿಸಲು ರಾಜ್ಯಪಾಲರಿಂದ ಮುಖ್ಯ ಕಾರ್ಯದರ್ಶಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 0:28 IST
Last Updated 4 ಫೆಬ್ರುವರಿ 2026, 0:28 IST
<div class="paragraphs"><p>ವಿಧಾನಸೌಧ </p></div>

ವಿಧಾನಸೌಧ

   

ಬೆಂಗಳೂರು: ನಿಗಮ– ಮಂಡಳಿಗಳ ಅಧ್ಯಕ್ಷರಾಗಿ ಶಾಸಕರ ನೇಮಕದಲ್ಲಿ ಸಂವಿಧಾನ ಹಾಗೂ ಕಾನೂನು ಉಲ್ಲಂಘನೆಯಾಗಿರುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ವಾಸ್ತವ ವರದಿಯನ್ನು ಸಲ್ಲಿಸುವಂತೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ಸರ್ಕಾರವು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ 43 ಶಾಸಕರನ್ನು ಹಲವು ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈ ಎಲ್ಲ ನೇಮಕಗಳು ಸಂವಿಧಾನದ ಪರಿಚ್ಛೇದ 164(5) ಮತ್ತು 195ರ ಉಲ್ಲಂಘನೆಯಾಗಿದ್ದು, ಕಾನೂನಿಗೂ ವಿರುದ್ಧವಾಗಿವೆ. ನೇಮಕವಾಗಿರುವ ಎಲ್ಲರೂ ಕಾಯ್ದೆ ಪ್ರಕಾರ ಅನರ್ಹತೆ ವ್ಯಾಪ್ತಿಗೆ ಬರುತ್ತಾರೆ ಎಂದು ಸೂರಿ ಪಾಯಲ್‌ ವಿವರವಾದ ಮನವಿಯನ್ನು ನೀಡಿದ್ದಾರೆ’ ಎಂದು ರಾಜ್ಯಪಾಲರ ಪತ್ರ ಉಲ್ಲೇಖಿಸಿದೆ.

ADVERTISEMENT

‘ಸಂವಿಧಾನದ ಪರಿಚ್ಛೇದ 192 (1) ಪ್ರಕಾರ, ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ ಉಲ್ಲೇಖಿಸಬೇಕು. ಅಲ್ಲದೆ, ಸಂವಿಧಾನದ ಪರಿಚ್ಛೇದ 191 (1)(ಎ) ಪ್ರಕಾರ ಶಾಸಕರ ಅನರ್ಹತೆ ಬಗ್ಗೆ ಚುನಾವಣಾ ಆಯೋಗದ ಅಭಿಪ್ರಾಯ ಪ‍ಡೆಯಬೇಕು ಎಂದು ಸೂರಿ ಅವರು ಮನವಿ ಮಾಡಿದ್ದಾರೆ. ಹೀಗಾಗಿ, ಈ ಎಲ್ಲ ವಿಚಾರವನ್ನು ಪರಿಗಣಿಸಿ ರಾಜ್ಯ ಸರ್ಕಾರದಿಂದ ವಾಸ್ತವ ವರದಿಯನ್ನು ನೀಡಬೇಕು. ಅದರೊಂದಿಗೆ ಎಲ್ಲ ಅಗತ್ಯ ದಾಖಲೆಗಳನ್ನೂ ಒದಗಿಸಬೇಕು’ ಎಂದು ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಅಧಿಕೃತವಾಗಿ 32 ಸಚಿವರಿದ್ದರೆ, ‘ಸಚಿವ ಸ್ಥಾನಮಾನ’ ಪಡೆದಿರುವವರ ಸಂಖ್ಯೆ ದುಪ್ಪಟ್ಟಾಗಿದೆ. ನಿಗಮ ಮಂಡಳಿಗಳ ಅಧ್ಯಕ್ಷರು–ಉಪಾಧ್ಯಕ್ಷರು ಸೇರಿದಂತೆ ಒಟ್ಟು 76 ಮಂದಿಗೆ ‘ಸಚಿವರ ಸ್ಥಾನಮಾನ’ದ ‘ಗ್ಯಾರಂಟಿ’ಯನ್ನು ಕಾಂಗ್ರೆಸ್‌ ಸರ್ಕಾರ ದಯಪಾಲಿಸಿದೆ’ ಎಂಬ ವಿವರಿಗಳಿದ್ದ, ‘ಸಂಪುಟ’ಕ್ಕಿಂತ ಸಚಿವ ದರ್ಜೆ ಭಾರ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ 2025ರ ಅಕ್ಟೋಬರ್‌ 16ರಂದು ವಿಶೇಷ ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.