
ಬೆಂಗಳೂರು:‘ರಾಜ್ಯವು ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಮತ್ತು ನೀತಿಕಾರಕ ವಿಚಾರಗಳಲ್ಲಿ ದಮನಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕರ್ನಾಟಕವನ್ನು ಆರ್ಥಿಕವಾಗಿ ದಮನಿಸಿದರೆ ಅದರ ಪರಿಣಾಮ ಇಡೀ ದೇಶದ ಮೇಲೆ ಆಗುತ್ತದೆ. ಇದನ್ನು ಒಕ್ಕೂಟ (ಕೇಂದ್ರ) ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ರಾಜ್ಯಪಾಲರ ಭಾಷಣ ಕೇಂದ್ರದ ವಿರುದ್ಧ ಕಿಡಿಕಾರಿದೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಎರಡು ಸಾಲು ಭಾಷಣ ಓದಿ ತೆರಳಿದ ಬಳಿಕ ವಿಧಾನಸಭಾ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ರಾಜ್ಯಪಾಲರ ಭಾಷಣವನ್ನು ಸದನದಲ್ಲಿ ಮಂಡಿಸಿದರು.
ಭಾಷಣದ ಮುಖ್ಯಾಂಶಗಳು:
* ತೆರಿಗೆ ಪಾಲು, ಕೇಂದ್ರ ಪುರಸ್ಕೃತ ಯೋಜನೆಗಳು, ಕೇಂದ್ರದ ಯೋಜನೆಗಳು, ವಿಶೇಷ ಯೋಜನೆಗಳು ಮುಂತಾದವುಗಳಲ್ಲಿ ಕರ್ನಾಟಕ ಅನ್ಯಾಯಗಳಿಗೆ ತುತ್ತಾಗಿದೆ. ದೇಶದ ಆರ್ಥಿಕತೆಯಲ್ಲಿ ಚಾಲಕ ಸ್ಥಾನದಲ್ಲಿದೆ. 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಸುಮಾರು ₹1.25 ಲಕ್ಷ ಕೋಟಿಗಳಷ್ಟು ಬೃಹತ್ ಪ್ರಮಾಣದ ಸಂಪನ್ಮೂಲಗಳು ರಾಜ್ಯಕ್ಕೆ ಸಿಗದೆ ವಂಚನೆಯಾಗಿದೆ.
* ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಆ ಮೂಲಕ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು, ಸಣ್ಣ ರೈತರ, ಮಹಿಳೆಯರ ಉದ್ಯೋಗದ ಮತ್ತು ನಿರುದ್ಯೋಗದ ಭತ್ಯೆ ಹಕ್ಕನ್ನು ಕಸಿದುಕೊಂಡಿದೆ. ಗ್ರಾಮೀಣ ಭಾರತದ ಅಭಿವೃದ್ಧಿ ಪರ್ವದ ಬೃಹತ್ ಅಧ್ಯಾಯವಾಗಿದ್ದ ಮನರೇಗಾ ಕಾಯ್ದೆಯ ರದ್ದತಿ ಮೂಲಕ ಗ್ರಾಮೀಣ ಬದುಕನ್ನು ದುರ್ಬಲಗೊಳಿಸಲಾಗಿದೆ.
* ಮನರೇಗಾ ಯೋಜನೆಯಡಿ ರಾಜ್ಯವು ಕಳೆದ 20 ವರ್ಷಗಳಲ್ಲಿ 76.89 ಲಕ್ಷ ಕಾಮಗಾರಿಗಳನ್ನು ₹61.03 ಸಾವಿರ ಕೋಟಿ ವೆಚ್ಚದಲ್ಲಿ ಕೈಗೊಂಡಿದೆ. 182.5 ಕೋಟಿ ಮಾನವ ದಿನಗಳಷ್ಟು ಉದ್ಯೋಗವನ್ನು ಸೃಜಿಸಿದೆ. ಮನೆರೇಗಾ ಕಾಯ್ದೆಯು ಖಾತ್ರಿ ಮಾಡಿದ್ದ ಉದ್ಯೋಗದ ಖಾತ್ರಿಯನ್ನು ಹೊಸ ವಿಬಿ ಗ್ರಾಮ್ ಜಿ (ವಿಬಿ ರಾಮ್ ಜೀ) ಕಾಯ್ದೆಯು ಕಿತ್ತುಕೊಂಡಿದೆ. ಮನರೇಗಾ ಕಾಯ್ದೆಯ ಸೆಕ್ಷನ್ 3 ರ ಪ್ರಕಾರ ಯಾವುದೇ ಪಂಚಾಯಿತಿಯಲ್ಲಿ ಉದ್ಯೋಗ ನೀಡಬೇಕೆಂದು ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಬೇಡಿಕೆ ಆಧರಿಸಿ ಉದ್ಯೋಗ ನೀಡಬೇಕೆಂಬ ತತ್ವವನ್ನು ಧ್ವಂಸ ಮಾಡಿ ಪೂರೈಕೆ ಆಧಾರಿತ ಯೋಜನೆ ಮಾಡಲಾಗಿದೆ. ಕಾರ್ಪೊರೇಟ್ ಬಂಡವಾಳಿಗರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಹೊಸ ಯೋಜನೆ ರೂಪಿಸಲಾಗಿದೆ.
* ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಹೊಸ ಕಾಯ್ದೆಯು ದುರ್ಬಲಗೊಳಿಸಿದೆ. ವಿಕೇಂದ್ರೀಕೃತ ವ್ಯವಸ್ಥೆಯ ಅಡಿಪಾಯವನ್ನೇ ಬುಡಮೇಲು ಮಾಡಿ ಕೇಂದ್ರಕೃತ ವ್ಯವಸ್ಥೆಗೆ ಕೇಂದ್ರ ಸರ್ಕಾರವು ಬುನಾದಿ ಹಾಕಿದೆ. ಅಲ್ಲದೇ, ಗ್ರಾಮಸಭೆಗಳಿಗಿದ್ದ ಅಧಿಕಾರವನ್ನು ಕೇಂದ್ರ ಸರ್ಕಾರದ ಮಾನದಂಡಗಳ ಮೂಲಕ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕೇಂದ್ರದ ಈ ಕ್ರಮಗಳು ರಾಷ್ಟ್ರದ ಹಿತಾಸಕ್ತಿಯನ್ನು ವಿನಾಶದ ಅಂಚಿಗೆ ದೂಡುವ ಪ್ರಗತಿ ವಿರೋಧಿ ಕ್ರಮವಾಗಿದೆ.
* ಹೊಸ ಕಾಯ್ದೆಯು ಉದ್ಯೋಗ ಅರಸಿ ದೊಡ್ಡ ಪಟ್ಟಣಗಳಿಗೆ ಗುಳೆ ಹೋಗುವ ಅಥವಾ ವಲಸೆ ಹೋಗುವ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುತ್ತದೆ. ಆದ್ದರಿಂದ ಇದನ್ನು ಪ್ರಬಲವಾಗಿ ವಿರೋಧಿಸುತ್ತೇವೆ. ದಲಿತರು, ಆದಿವಾಸಿಗಳು, ಮಹಿಳೆಯರು, ಹಿಂದುಳಿದವರು, ರೈತಾಪಿ ಸಮುದಾಯಗಳ ಜನರ ಉದ್ಯೋಗದ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ.
* ಹೊಸ ಕಾಯ್ದೆಯನ್ನು ಜಾರಿಗೊಳಿಸುವಾಗ ರಾಜ್ಯಗಳ ಅಭಿಪ್ರಾಯ ಪಡೆಯಬೇಕಾಗಿತ್ತು. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಗಳ ಪಾಲು ಇರುತ್ತದೆ. ಹೀಗಿರುವಾಗ ರಾಜ್ಯಗಳನ್ನು ಸಂಪರ್ಕಿಸದೇ ಜಾರಿಗೊಳಿಸಿರುವುದು ಸಂವಿಧಾನ ಬಾಹಿರ ನಡೆ.
* ಕಾರ್ಮಿಕ ಕೇಂದ್ರಿತ ಹಕ್ಕುಗಳನ್ನು ಮೊಟಕುಗೊಳಿಸಿ, ಅವರನ್ನು ಗುತ್ತಿಗೆದಾರರ ಅಧೀನಕ್ಕೆ ನೀಡಲಾಗುತ್ತಿದೆ. ಬೆಲೆ ಏರಿಕೆ, ಹಣದುಬ್ಬರಗಳನ್ನು ಆಧರಿಸಿ ಕೂಲಿಯನ್ನು ಪರಿಷ್ಕರಿಸುತ್ತಿದ್ದ ಅವಕಾಶಗಳೂ ಹೊಸ ಕಾಯ್ದೆಯಲ್ಲಿ ಕ್ಷೀಣಿಸಿವೆ. ಇದರಿಂದ ಬಡ ಕೂಲಿಕಾರರ ಸಾಮಾಜಿಕ ಭದ್ರತೆ ಇಲ್ಲವಾಗಿದೆ.
* ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರು ತೆಗೆಯಲಾಗಿದೆ. ರಾಜ್ಯ ಸರ್ಕಾರ ಶೇ 40 ರಷ್ಟು ಅನುದಾನ ನೀಡದಿದ್ದರೆ, ಕೇಂದ್ರವೂ ಅನುದಾನ ನೀಡುವುದಿಲ್ಲ. ಇದರಿಂದ ಯೋಜನೆಯು ನಿಧಾನವಾಗಿ ಅವಸಾನದ ಹಾದಿ ಹಿಡಿಯುತ್ತದೆ.
* ಆದ್ದರಿಂದ ಕೇಂದ್ರ ಸರ್ಕಾರ ತಂದಿರುವ ಈ ಕಾನೂನನ್ನು ತಕ್ಷಣ ರದ್ದುಪಡಿಸಿ, ನರೇಗಾ ಯೋಜನೆಯನ್ನು ಮರು ಸ್ಥಾಪಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.