
ಬೆಂಗಳೂರು: ‘ಸಂವಿಧಾನದ ರಕ್ಷಣೆ, ಆಶಯಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡುವ ಒಕ್ಕೂಟ ವ್ಯವಸ್ಥೆ ಉಳಿಸಿಕೊಳ್ಳೋಣ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
‘ಸಂವಿಧಾನವು ಸಾರ್ವಭೌಮ ಅಧಿಕಾರವನ್ನು ಒಕ್ಕೂಟ ಮತ್ತು ರಾಜ್ಯಗಳ ನಡುವೆ ಹಂಚಿದೆ. ಸಮಗ್ರತೆ ದೃಷ್ಟಿಯಿಂದ ಒಕ್ಕೂಟ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಿ ಗೌರವಿಸಿದೆ. ಅಧಿಕಾರ ಹಂಚಿಕೆ ತತ್ವ ಅಳವಡಿಸಿಕೊಂಡು ಸಂವಿಧಾನ ನಿರ್ಮಾತೃಗಳ ಕನಸಿಗೆ ಕುಂದಾಗದಂತೆ ಒಕ್ಕೂಟ ವ್ಯವಸ್ಥೆ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ’ ಎಂದರು.
‘ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಅನುಷ್ಠಾನಗೊಳಿಸುವವರು ಕೆಟ್ಟವರಾಗಿದ್ದರೆ ಪರಿಣಾಮ ಕೆಟ್ಟದ್ದೇ ಆಗಿರಲಿದೆ. ಸಂವಿಧಾನ ಕೆಟ್ಟದ್ದಾಗಿದ್ದರೂ ಅದನ್ನು ಅನುಷ್ಠಾನ ಮಾಡುವವರು ಒಳ್ಳೆಯವರಾಗಿದ್ದರೆ ಪರಿಣಾಮವೂ ಒಳ್ಳೆಯದೇ ಆಗುತ್ತದೆ. ಪ್ರಜೆಗಳ ಆಶೋತ್ತರಗಳನ್ನು ಈಡೇರಿಸುವುದಕ್ಕೆ ಸಾಧನವಾಗಿ ಸಂವಿಧಾನವನ್ನು ರಾಜಕೀಯ ಪಕ್ಷಗಳು ಆಯ್ಕೆ ಮಾಡಿಕೊಂಡಿವೆ’ ಎಂದು ಅಂಬೇಡ್ಕರ್ ಅವರು ಹಿಂದೆಯೇ ಹೇಳಿದ್ದಾರೆ. ಸಂವಿಧಾನದ ಮೂಲ ಆಶಯ ಅರಿತು ಕೆಲಸ ಮಾಡುವ ಪ್ರತಿನಿಧಿಗಳನ್ನು ಆರಿಸಿ, ನಿರಂತರ ಪ್ರಶ್ನೆ, ಸಂವಾದ ಮಾಡುತ್ತಲೇ ಜನತಂತ್ರ ಉಳಿಸುವುದು ನಮ್ಮ ಗುರಿಯಾಗಬೇಕು’ ಎಂದು ಸಲಹೆ ನೀಡಿದರು.
‘ಗಣರಾಜ್ಯದ ನೈಜ ಶಕ್ತಿಯು ವಿವಿಧತೆಯಲ್ಲಿ ಏಕತೆ, ಪ್ರಜಾಪ್ರಭುತ್ವ ಸಂಸ್ಥೆಗಳ ಚಲನಶೀಲತೆ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳ ಬದ್ಧತೆಯಲ್ಲಿದೆ. ರಾಷ್ಟ್ರದ ಏಕತೆ, ಸಮಾನತೆ, ಸಮಗ್ರತೆ ಮತ್ತು ಸಮೃದ್ದಿ ಸಾಧಿಸಲು ಪ್ರಜಾಪ್ರಭುತ್ವದ ಆದರ್ಶಗಳು ಮಾರ್ಗದರ್ಶನ ನೀಡಬೇಕು. ಮಾದರಿ ಗಣತಂತ್ರ ವ್ಯವಸ್ಥೆ ಸದೃಢಗೊಳಿಸೋಣ’ ಎಂದು ಆಶಿಸಿದರು.
‘ಸಂವಿಧಾನದ ಆಶಯದಂತೆ ಅತ್ಯಂತ ಹಿಂದುಳಿದವರಿಗೆ ಆರ್ಥಿಕ ಚೈತನ್ಯ ನೀಡಲು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿಯೊಂದು ಪ್ರದೇಶ, ಸಮುದಾಯದ ಜನರ ಬೇಡಿಕೆಗಳಿಗೆ ನ್ಯಾಯೋಚಿತ ಪರಿಹಾರ ನೀಡುತ್ತಿದೆ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸುತ್ತಿದೆ. ಇದು ರಾಜ್ಯದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಚೈತನ್ಯಕ್ಕೆ ದಾರಿ ಮಾಡಿಕೊಟ್ಟಿದೆ’ ಎಂದರು.
‘ಗ್ಯಾರಂಟಿ ಯೋಜನೆಗಳಿಂದ ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಿದ್ದು, ಕುಟುಂಬಗಳು ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತಿವೆ. ಶಿಕ್ಷಣ ವ್ಯವಸ್ಥೆ ಸುಧಾರಣೆ, ಕೌಶಲವೃದ್ಧಿಗೆ ಒತ್ತು ನೀಡಲಾಗುತ್ತಿದೆ. 300 ಕರ್ನಾಟಕ ಪಬ್ಲಿಕ್ ಶಾಲೆ, ಕೌಶಲಕ್ಕೆ ಜಿಟಿಟಿಸಿ, ಪಾಲಿಟೆಕ್ನಿಕ್, ಸ್ಕಿಲ್ ಪಾರ್ಕ್ ಪ್ರಾರಂಭಿಸಲಾಗುತ್ತಿದೆ. ಮಾದಕ ವಸ್ತುಗಳ ಬಳಕೆ ನಿಗ್ರಹಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ಹಿಂದುಳಿದವರ ಬಲವರ್ಧನೆಗೆ ₹1.12 ಲಕ್ಷ ಕೋಟಿ ಹಂಚಿಕೆ
ಗ್ಯಾರಂಟಿ ಯೋಜನೆಗಳಿಗೆ ₹1.13 ಲಕ್ಷ ಕೋಟಿ ವಿನಿಯೋಗ
ವಾರ್ಷಿಕ 12 ದಿನಗಳ ವೇತನ ಸಹಿತ ಋತು ಚಕ್ರ ರಜೆ
ಬೆಂಗಳೂರು ಅಭಿವೃದ್ದಿಗೆ ₹1.5 ಲಕ್ಷ ಕೋಟಿ ಯೋಜನೆ
ನ್ಯಾಯಾಲಯಗಳಲ್ಲಿ ಶೇ 80ಕ್ಕೂ ಹೆಚ್ಚಿನ ಪ್ರಕರಣಗಳ ಇತ್ಯರ್ಥ
ಕಂದಾಯ ಗ್ರಾಮಗಳ ಘೋಷಣೆ,
1.11 ಲಕ್ಷ ಹಕ್ಕುಪತ್ರ ವಿತರಣೆ
ಹೆಲ್ತ್ ಹಬ್‌ಗಳಾಗಿ ಹನ್ನೊಂದು ನಗರಗಳ ಅಭಿವೃದ್ಧಿ
ಹಾಲು ಉತ್ಪಾದಕರಿಗೆ ₹4,130 ಕೋಟಿ ವಿತರಣೆ
ಬೆಂಗಳೂರು ನಗರ ಅಭಿವೃದ್ಧಿಗೆ 1.5 ಲಕ್ಷ ಕೋಟಿ ಹಂಚಿಕೆ
ಅಮೃತ ನಗರೋತ್ಥಾನಕ್ಕೆ ₹3,885 ಕೋಟಿ ವೆಚ್ಚ
ಒಳನಾಡು ಜಲ ಮಾರ್ಗ ಅಭಿವೃದ್ಧಿಗೆ ₹23,094 ಕೋಟಿ ವೆಚ್ಚದ ಮಾಸ್ಟರ್ ಪ್ಲಾನ್
ಬೆಂಗಳೂರು: ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯಪಾಲರು ಪೂರ್ಣವಾಗಿ ಭಾಷಣವನ್ನು ಓದದ ಕಾರಣ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ರಾಜಕೀಯ ಸಂಘರ್ಷ ಉಂಟಾಗಿತ್ತು. ಇದರ ಮಧ್ಯೆಯೇ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಸೋಮವಾರ ಯಥಾವತ್ತಾಗಿ ಓದಿದರು.
24 ಪುಟಗಳ ಭಾಷಣದ ಪ್ರತಿಯಲ್ಲಿ ಒಕ್ಕೂಟ ವ್ಯವಸ್ಥೆ ಉಳಿಸಿಕೊಳ್ಳುವ ಒಂದು ಸಾಲು ಹೊರತುಪಡಿಸಿದರೆ ಹೆಚ್ಚಿನ ಭಾಗ ರಾಜ್ಯ ಸರ್ಕಾರದ ಸಾಧನೆಗಳ ಪಟ್ಟಿ ಮುಂದಿನ ಗುರಿಯ ನೋಟ ಇತ್ತು. ಕೇಂದ್ರದ ವಿರುದ್ಧ ಟೀಕೆ ಟಿಪ್ಪಣಿಗಳಿರಲಿಲ್ಲ. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ರಾಜ್ಯಪಾಲರ ಭಾಷಣದ ಪ್ರತಿಯನ್ನು ನೀಡಲಾಗಿತ್ತು. ಆದರೆ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದರು. ಒಂದು ಅಂಶವನ್ನೂ ಬಿಡದೇ ರಾಜ್ಯಪಾಲರು 20 ನಿಮಿಷದಲ್ಲಿ ಓದಿ ಮುಗಿಸಿದರು.
ಒಕ್ಕೂಟ ವ್ಯವಸ್ಥೆ ಬಲಪಡಿಸುವ ಅಂಶವನ್ನೂ ಉಲ್ಲೇಖಿಸಿದರು. ರಾಜ್ಯಪಾಲರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಷಣವನ್ನು ಪೂರ್ಣ ಓದುತ್ತಾರೋ ಇಲ್ಲವೋ ಎನ್ನುವ ಚರ್ಚೆ ನಡೆದಿತ್ತು. ರಾಜ್ಯ ಸರ್ಕಾರ ಸಿದ್ದಪಡಿಸಿದ ಭಾಷಣದಲ್ಲಿ ಕೇಂದ್ರ ಸರ್ಕಾರದ ನರೇಗಾ ಯೋಜನೆಯ ಬದಲಾವಣೆ ತೆರಿಗೆ ಅನುದಾನ ಹಂಚಿಕೆಯ ಯಾವ ಅಂಶಗಳೂ ಇರಲಿಲ್ಲ.
‘ನಾವು ಕಳುಹಿಸಿದ್ದ ಭಾಷಣದ ಪ್ರತಿಯನ್ನೇ ಗಣರಾಜ್ಸೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ವಾಚಿಸಿದ್ದಾರೆ. ಯಾವುದೇ ಬದಲಾವಣೆ ಆಗಿಲ್ಲ’ ಎಂದು ಕಾರ್ಯಕ್ರಮದ ನಂತರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು. ವೇದಿಕೆಯಲ್ಲಿ ರಾಜ್ಯಪಾಲರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದು ಪರಸ್ಪರ ಹಸ್ತಲಾಘವ ಮಾಡಿದರು. ರಾಜ್ಯಪಾಲರು ಭಾಷಣ ಓದುವಾಗ ಮುಖ್ಯಮಂತ್ರಿ ಅವರು ಭಾಷಣದ ಪ್ರತಿ ನೋಡುತ್ತಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ಬಹುಮಾನ ವಿತರಿಸಿದರು.
ಬೆಂಗಳೂರು: ‘ಸಂವಿಧಾನವನ್ನು ವಿರೋಧಿಸುತ್ತಿರುವವರು ಸಾಮಾಜಿಕ ಬದಲಾವಣೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವವರು. ಅವರು ಬಡವರ ರೈತರ ಕಾರ್ಮಿಕರ ದಲಿತರ ಶೋಷಿತರ ಪರವಾದ ಕಾನೂನುಗಳು ಮತ್ತು ಕಾರ್ಯಕ್ರಮಗಳನ್ನು ವಿರೋಧಿಸುವವರು ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಸಂದೇಶ ನೀಡಿರುವ ಅವರು ಸಂವಿಧಾನದ ಆಶಯಗಳು ಮತ್ತು ಸರ್ಕಾರದ ಜನಪರ ಯೋಜನೆಗಳ ಕುರಿತ ತಮ್ಮ ಆಶಯವನ್ನು ಹಂಚಿಕೊಂಡಿದ್ದಾರೆ. ‘ಮುಖ್ಯಮಂತ್ರಿಯಾಗಿ ಸಂವಿಧಾನದ ಆಶಯಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದೂ ಹೇಳಿದ್ದಾರೆ.
‘ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ಅರ್ಪಿಸಿದಾಗಲೂ ಅದನ್ನು ವಿರೋಧಿಸುವವರಿದ್ದರು. ಸಂವಿಧಾನವನ್ನು ಬದಲಾಯಿಸುವ ಕಿತ್ತೊಗೆಯುವ ಕೂಗುಗಳು ಈಗಲೂ ಆಗಾಗ ಅಲ್ಲಲ್ಲಿ ಕೇಳಿಬರುತ್ತಿವೆ. ಆದರೆ ಅದು ಸುಲಭದ ಕೆಲಸ ಅಲ್ಲ ಎಂದು ಅರ್ಥ ಮಾಡಿಕೊಂಡವರು ಅದನ್ನು ನಿಧಾನವಾಗಿ ದುರ್ಬಲಗೊಳಿಸುವ ಪ್ರಯತ್ನದಲ್ಲಿದ್ದಾರೆ. ಇದು ನಿಧಾನವಾಗಿ ವಿಷ ಉಣಿಸುವ ಸಂಚು. ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಕಿತ್ತುಕೊಳ್ಳುವ ಮೂಲಕ ಸಂವಿಧಾನವನ್ನು ಅಪ್ರಸ್ತುತ ಮಾಡುವ ಸಂಚಿನ ಬಗ್ಗೆ ನಾವು ಎಚ್ಚರದಿಂದ ಇರಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.