ADVERTISEMENT

ಆಲಮಟ್ಟಿಗೆ ರಾಜ್ಯಪಾಲ ಗೆಹಲೋತ್‌ ಭೇಟಿ: ಉದ್ಯಾನ ಬಂದ್, ಪ್ರವಾಸಿಗರ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಮೇ 2022, 17:14 IST
Last Updated 24 ಮೇ 2022, 17:14 IST
ಆಲಮಟ್ಟಿಯ ಪ್ರವೇಶ ಪ್ಲಾಜಾ ಬಳಿ ಪೊಲೀಸರು ನಿಯೋಜನೆಗೊಂಡಿದ್ದು, ಮಧ್ಯಾಹ್ನವೇ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿತ್ತು
ಆಲಮಟ್ಟಿಯ ಪ್ರವೇಶ ಪ್ಲಾಜಾ ಬಳಿ ಪೊಲೀಸರು ನಿಯೋಜನೆಗೊಂಡಿದ್ದು, ಮಧ್ಯಾಹ್ನವೇ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿತ್ತು   

ವಿಜಯಪುರ:ಆಲಮಟ್ಟಿಗೆ ರಾಜ್ಯಪಾಲ ಥಾವರ ಚಂದ್ ಗೆಹಲೋಟ್ ಭೇಟಿ ಹಿನ್ನಲೆಯಲ್ಲಿ ಆಲಮಟ್ಟಿಯ ಉದ್ಯಾನಗಳನ್ನು ಮಂಗಳವಾರ ಮಧ್ಯಾಹ್ನದಿಂದ ಬಂದ್ ಮಾಡಿಸಲಾಯಿತು.

ಸಂಜೆ 7.30ಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಯಿಂದಲೇ ಬಂದ್ ಮಾಡಿದ್ದರಿಂದ ಪ್ರವಾಸಿಗರಲ್ಲಿ ತೀವ್ರ ನಿರಾಶೆ ಮೂಡಿತು.

ರಾಜ್ಯದ ನಾನಾ ಕಡೆ ಹಾಗೂ ಧ್ವನಿ ಗರ ಸಾಕಷ್ಟು ಜನ ಪ್ರವಾಸಿಗರು ಆಗಮಿಸಿದ್ದರು. ಅವರಿಗೆ ರಾಜ್ಯಪಾಲರು ಬರುವ ಯಾವುದೇ ಮಾಹಿತಿಯೂ ಇರಲಿಲ್ಲ. ಉದ್ಯಾನ ಬಂದ್ ಬಗ್ಗೆಯೂ ಗೊತ್ತಿರಲಿಲ್ಲ. ಹೀಗಾಗಿ ಬೆಳಿಗ್ಗೆ ಆಗಮಿಸಿದ ಪ್ರವಾಸಿಗರು ರಾಕ್ ಉದ್ಯಾನವನ್ನಷ್ಟೇ ವೀಕ್ಷಿಸಬೇಕಾಯಿತು. ಮಧ್ಯಾಹ್ನ 2 ಗಂಟೆಯಿಂದಲೇ ಎಲ್ಲಾ ಪ್ರವಾಸಿಗರನ್ನು ರಾಕ್ ಉದ್ಯಾನದಿಂದ ಹೊರಕ್ಕೆ ಕಳುಹಿಸಲಾಯಿತು. ನಂತರ ಉದ್ಯಾನ ಬಂದ್ ಮಾಡಲಾಯಿತು. ಇದರಿಂದ ಪ್ರವಾಸಿಗರು ಪರದಾಡಿದರು.

ADVERTISEMENT

ಬಸವನಬಾಗೇವಾಡಿ, ಸೋಲಾಪುರ, ಹುಬ್ಬಳ್ಳಿ, ಕಲಬುರ್ಗಿ ಸೇರಿ ನಾನಾ ಕಡೆಯಿಂದ ಆಗಮಿಸಿದ್ದ ಪ್ರವಾಸಿಗರು ಸಂಜೆಯ ಸಂಗೀತ ಕಾರಂಜಿ ವೀಕ್ಷಿಸದೇ ನಿರಾಶೆಯಿಂದ ಮರಳಬೇಕಾಯಿತು.

ಸಂಜೆಯಾದೊಡಣೆ ಲೇಸರ್, ಸಂಗೀತ ಕಾರಂಜಿ ವೀಕ್ಷಿಸಲು ನಾನಾ ಕಡೆಯಿಂದ ಖಾಸಗಿ ವಾಹನಗಳ ಮೂಲಕ ಆಗಮಿಸುತ್ತಿದ್ದ ನೂರಾರು ಪ್ರವಾಸಿಗರನ್ನು ಪೆಟ್ರೋಲ್ ಪಂಪ್ ಬಳಿಯೇ ತಡೆದು ಹೊರಕ್ಕೆ ಕಳುಹಿಸಲಾಯಿತು. ಯಾರಿಗೂ ರಾಜ್ಯಪಾಲರು ಬರುವ ವಿಷಯ ತಿಳಿದಿರಲಿಲ್ಲ. ಹೀಗಾಗಿ ಮರಳಿ ಹೋಗಬೇಕಾಯಿತು.

ಆಲಮಟ್ಟಿಯ ಉದ್ಯಾನ ವೀಕ್ಷಿಸಲು ಸೋಲಾಪುರದಿಂದ ಬಂದಿದ್ದೆ, ಆದರೆ ಉದ್ಯಾನ ಬಂದ್ ಇರುವ ಮಾಹಿತಿ ತಿಳಿದು ನಿರಾಶೆಯಿಂದ ತೆರಳುತ್ತಿರುವೆ, ಉದ್ಯಾನ ಬಂದ್ ಬಗ್ಗೆ ಮೊದಲೇ ಪ್ರಚಾರ ನೀಡಬೇಕು ಎಂದು ಸೋಲಾಪುರದ ಗೋವಿಂದ ಉಪರೆ ಹೇಳಿದರು.

ಪ್ರವೇಶ ಬಂದ್:ಸಂಜೆ 5 ಗಂಟೆಯಿಂದ ಆಲಮಟ್ಟಿ ಪೆಟ್ರೋಲ್ ಪಂಪ್‌ನಿಂದ ಆಲಮಟ್ಟಿ ಪ್ರವೇಶಿಸುವ ಮಾರ್ಗ ಹಾಗೂ ಆಲಮಟ್ಟಿ ರೈಲ್ವೆಸ್ಟೇಷನ್ ಕ್ರಾಸ್ ಬಳಿಯೂ ಬಂದ್ ಮಾಡಲಾಯಿತು. ಸಂಜೆ 5 ಗಂಟೆಯ ನಂತರ ಆಲಮಟ್ಟಿಯಲ್ಲಿನ ನೌಕರರ ಸಂಚಾರವನ್ನು ನಿಷೇಧಿಸಲಾಯಿತು.

ಲಾಲ್ ಬಹಾದ್ದೂರ ಶಾಸ್ತ್ರಿ ಪುತ್ಥಳಿ ಬಳಿಯ ಅಂಗಡಿಗಳನ್ನು, ಅಣೆಕಟ್ಟು ವೃತ್ತ ಬಳಿಯ ವ್ಯಾಪಾರ ಮಳಿಗೆಗಳನ್ನು ಪೊಲೀಸರು ಮುಚ್ಚಿಸಿದರು.

ಭಾರಿ ಬಂದೋಬಸ್ತ್:ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಸಿದ್ಧಿ ಬೆಳಿಗ್ಗೆಯಿಂದಲೇ ಆಲಮಟ್ಟಿಯಲ್ಲಿಯೇ ಇದ್ದು, ಜಲಾಶಯ, ಉದ್ಯಾನ, ಪ್ರವಾಸಿ ಮಂದಿರ ಸೇರಿ ನಾನಾ ಕಡೆ ಪೊಲೀಸ್ ಭದ್ರತೆಯನ್ನು ನಿಯೋಜಿಸಿ ಪರಿಶೀಲಿಸಿದರು.

ಎಸ್.ಪಿ. ಎಚ್.ಡಿ. ಆನಂದಕುಮಾರ ನೇತೃತೃತ್ವದಲ್ಲಿ, ಇಬ್ಬರು ಡಿವೈಎಸ್‌ಪಿ, ಐವರು ಸಿಪಿಐ, 10 ಪಿಎಸ್‌ಐ, 14 ಜನ ಎಎಸ್‌ಐ, 35 ಜನ ಹೆಡ್ ಕಾನ್ಸ್‌ಟೇಬಲ್, 76 ಜನ ಕಾನ್ಸ್‌ಟೇಬಲ್, 18 ಮಹಿಳಾ ಕಾನ್ಸ್‌ಟೇಬಲ್, ಎರಡು ಡಿಆರ್ ವಾಹನ, ಒಂದು ಐಆರ್‌ಬಿ ವಾಹನದ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದಾರೆ.

ಅಗ್ನಿಶಾಮಕ ವಾಹನ, ತಜ್ಞ ವೈದ್ಯರುಳ್ಳ ಎರಡು ಅಂಬುಲೆನ್ಸ್ ಕೂಡಾ ಸ್ಥಳದಲ್ಲಿದೆ. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.