ADVERTISEMENT

ಒಳಮೀಸಲಾತಿ ಕುರಿತು ಸರ್ಕಾರದಿಂದ ಎಡವಟ್ಟು ನಿರ್ಧಾರ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 16:22 IST
Last Updated 24 ಫೆಬ್ರುವರಿ 2026, 16:22 IST
<div class="paragraphs"><p>ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿತು.</p></div>

ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿತು.

   

ಬೆಂಗಳೂರು: ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ಬಂದು 18 ತಿಂಗಳಾಗಿದೆ. ರಾಜ್ಯದಲ್ಲಿ ಒಳ ಮೀಸಲಾತಿ ಇನ್ನೂ ಜಾರಿ ಆಗಿಲ್ಲ. ಅನುಷ್ಠಾನಕ್ಕೆ ಸರ್ಕಾರ ಆಸಕ್ತಿಯನ್ನೂ ತೋರಿಸುತ್ತಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ದೂರಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ ಈ ಬಗ್ಗೆ ಮನವಿ ಸಲ್ಲಿಸಿದೆ.

ADVERTISEMENT

ಬಳಿಕ ಮಾತನಾಡಿದ ಕಾರಜೋಳ, ‘ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ನಿರಂತರವಾಗಿ ಎಡವಟ್ಟುಗಳನ್ನು ಮಾಡುತ್ತಲೇ ಬಂದಿದೆ’ ಎಂದರು.

‘ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ಮತ್ತು ನಾಗಮೋಹನದಾಸ್ ಆಯೋಗವು ಅಲೆಮಾರಿ, ಸಣ್ಣಜಾತಿಗಳ ಗುಂಪಿಗೆ ಪ್ರತ್ಯೇಕ ಪ್ರವರ್ಗದಲ್ಲಿ ಶೇ 1ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಒಳ ಮೀಸಲಾತಿಯನ್ನು ಜಾರಿ ಮಾಡಲು ಹೋಗಿ ಅಲೆಮಾರಿ ಮತ್ತು ಸಣ್ಣ ಜಾತಿಗಳನ್ನು ಬೀದಿ ಪಾಲು ಮಾಡಿದೆ’ ಎಂದು ಹೇಳಿದರು.

ಎಕೆ, ಎಡಿ, ಎಎ ಸಮಸ್ಯೆಗೂ ಪರಿಹಾರ ಒದಗಿಸಿಲ್ಲ. ಬ್ಯಾಕ್‌ಲಾಗ್‌ ನೇಮಕಾತಿಯಲ್ಲಿ ರೋಸ್ಟರ್‌ ರೂಪಿಸುವಲ್ಲಿ ಸರ್ಕಾರ ಸೋತಿದೆ. ಹೀಗಾಗಿ 101 ಜಾತಿಗಳಲ್ಲಿಯೂ ಅಸಮಾಧಾನ ಹೆಪ್ಪುಗಟ್ಟಿದೆ. ಪರಿಶಿಷ್ಟರ ಗುಂಪುಗಳು ಬೀದಿಗಿಳಿದಿವೆ. ಅಲೆಮಾರಿ ಸಮುದಾಯಗಳ ಪ್ರಮುಖರ ಎದುರು ಸ್ವತಃ ಮುಖ್ಯಮಂತ್ರಿಯವರೇ ಇದೊಂದು ರಾಜಕೀಯ ಪ್ರೇರಿತ ನಿರ್ಧಾರ. ಇದರಲ್ಲಿ ಸಾಮಾಜಿಕ ನ್ಯಾಯ ಇಲ್ಲ. ನ್ಯಾಯ ಬೇಕಿದ್ದರೆ ಕೋರ್ಟಿಗೆ ಹೋಗಿ ಎಂದಿದ್ದಾರೆ. ಇದಕ್ಕಿಂತ ದೊಡ್ಡ ದುರಂತ ಯಾವುದಿದೆ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.