ADVERTISEMENT

ರಜೆ ಮುಂದುವರಿಕೆ ಶೀಘ್ರ ನಿರ್ಧಾರ: ಶ್ರೀರಾಮುಲು

ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 19:58 IST
Last Updated 17 ಮಾರ್ಚ್ 2020, 19:58 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಮಂಗಳೂರು: ಕೊರೊನಾ ಸೋಂಕು ತಡೆಗಾಗಿ ಶಾಲಾ, ಕಾಲೇಜುಗಳು, ಮಾಲ್‌ಗಳಿಗೆ ಘೋಷಿಸಿರುವ ರಜೆ ವಿಸ್ತರಣೆ ಕುರಿತು ಶೀಘ್ರ ತೀರ್ಮಾನಿಸಲಾಗುವುದು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಇಲ್ಲಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಸೋಂಕು ಪೀಡಿತರು, ಶಂಕಿತ ರೋಗಿಗಳ ಚಿಕಿತ್ಸೆಗಾಗಿ ಮಾಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು.

ಸೋಂಕು ಹರಡದಂತೆ ತಡೆಯಲು ಜನರು ಮನೆಯಲ್ಲೇ ಉಳಿಯುವುದು ಅಗತ್ಯ. ಈ ಕಾರಣದಿಂದ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಾಲ್‌ಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಸೋಂಕು ನಿಯಂತ್ರಿಸಲು ಸಾಕಷ್ಟು ಅನುಕೂಲವಾಗಿದೆ. ಅಗತ್ಯ ಎನಿಸಿದರೆ ರಜೆ ಮತ್ತು ಬಂದ್ ಮುಂದುವರಿಸಲಾಗುವುದು. ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ಈ ಕುರಿತು ತೀರ್ಮಾನಕ್ಕೆ ಬರಲಾಗುವುದು ಎಂದರು.

ADVERTISEMENT

ಎಲ್ಲ ಜಿಲ್ಲೆಗಳಲ್ಲೂ ಪರೀಕ್ಷಾ ಕೇಂದ್ರ: ಕೊರೊನಾ ವೈರಸ್ ಪರೀಕ್ಷೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗಂಟಲು ದ್ರವದ ಮಾದರಿ ಪರೀಕ್ಷಾ ಕೇಂದ್ರ ತೆರೆಯಲಿದ್ದು, ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಶೀಘ್ರ ಪ್ರಯೋಗಾಲಯ ಆರಂಭವಾಗಲಿದೆ ಎಂದರು.

ಮಂಗಳೂರಿನಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಸಾಕಷ್ಟು ದೇಶಗಳಿಂದ ಇಲ್ಲಿಗೆ ಬಂದಿಳಿಯುತ್ತಾರೆ. ಆದ್ಯತೆ ಮೇರೆಗೆ ಮಂಗಳೂರಿನಲ್ಲಿ ತುರ್ತಾಗಿ ಪ್ರಯೋಗಾಲಯ ಆರಂಭಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಈವರೆಗೆ 1.75 ಲಕ್ಷ ಜನರಿಗೆ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಲಾಗಿದೆ. ಒಟ್ಟು 10 ಕೋವಿಡ್‌–19 ಪ್ರಕರಣ ದೃಢಪಟ್ಟಿವೆ. ಕಾಳಸಂತೆಯಲ್ಲಿ ಮಾಸ್ಕ್‌ ಮಾರಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ರೈಲು ನಿಲ್ದಾಣಗಳಲ್ಲೂ ಥರ್ಮಲ್‌ ಸ್ಕ್ಯಾನಿಂಗ್ ಆರಂಭವಾಗಿದೆ. ಬೀಚ್‌ಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.