ADVERTISEMENT

ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರಕ್ಕಿಲ್ಲ ಇಚ್ಛಾಶಕ್ತಿ: ಪ್ರಮುಖರ ಕಳವಳ

ಚಿಂತನಾ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಕಳವಳ *ಶಾಲೆಗಳ ಸಬಲೀಕರಣಕ್ಕೆ ಹಲವು ಸಲಹೆಗಳು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 14:42 IST
Last Updated 13 ಡಿಸೆಂಬರ್ 2023, 14:42 IST
ಚಿಂತನಾ ಸಭೆಯಲ್ಲಿ ನ್ಯಾ. ಅರಳಿ ನಾಗರಾಜ್ ಮತ್ತು ಮಹೇಶ ಜೋಶಿ ಚರ್ಚಿಸಿದರು. ಗುರುರಾಜ ಕರಜಗಿ, ಪ್ರಧಾನ್ ಗುರುದತ್ತ, ಶಿವರುದ್ರ ಸ್ವಾಮೀಜಿ, ಹಂ.ಪ. ನಾಗರಾಜಯ್ಯ, ರಾಣಿ ಸತೀಶ್‌ ಹಾಗೂ ದೊಡ್ಡರಂಗೇಗೌಡ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಚಿಂತನಾ ಸಭೆಯಲ್ಲಿ ನ್ಯಾ. ಅರಳಿ ನಾಗರಾಜ್ ಮತ್ತು ಮಹೇಶ ಜೋಶಿ ಚರ್ಚಿಸಿದರು. ಗುರುರಾಜ ಕರಜಗಿ, ಪ್ರಧಾನ್ ಗುರುದತ್ತ, ಶಿವರುದ್ರ ಸ್ವಾಮೀಜಿ, ಹಂ.ಪ. ನಾಗರಾಜಯ್ಯ, ರಾಣಿ ಸತೀಶ್‌ ಹಾಗೂ ದೊಡ್ಡರಂಗೇಗೌಡ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸಲು ಸರ್ಕಾರಗಳು ಹಾಗೂ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದ ವಿವಿಧ ಕ್ಷೇತ್ರಗಳ ಪ್ರಮುಖರು, ಮಾದರಿ ಶಾಲೆ ನಿರ್ಮಾಣ, ಮೂಲಸೌಕರ್ಯ ಒದಗಿಸುವಿಕೆ, ಉಚಿತ ಬಸ್ ವ್ಯವಸ್ಥೆ, ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಘೋಷಣೆ, ಕನ್ನಡ ಭಾಷೆಯ ಮಹತ್ವದ ಬಗ್ಗೆ ಜನಾಂದೋಲನ ಸೇರಿ ಹಲವು ಸಲಹೆಗಳನ್ನು ನೀಡಿದರು. 

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಬುಧವಾರ ಹಮ್ಮಿಕೊಂಡ ‘ಕನ್ನಡ ಶಾಲೆ ಉಳಿಸಿ-ಕನ್ನಡ ಬೆಳೆಸಿ’ ಚಿಂತನ ಸಭೆಯಲ್ಲಿ ಸಾಹಿತ್ಯ, ಶಿಕ್ಷಣ, ನ್ಯಾಯಾಂಗ, ಆಡಳಿತ ಸೇರಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಸಲಹೆ ಸೂಚನೆಗಳನ್ನು ನೀಡಿದರು. 

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಬೇಲಿಮಠದ ಪೀಠಾಧ್ಯಕ್ಷ ಶಿವರುದ್ರ ಸ್ವಾಮೀಜಿ, ಸಾಹಿತಿಗಳಾದ ಹಂ.ಪ. ನಾಗರಾಜಯ್ಯ, ಜಿ.ಎಸ್. ಸಿದ್ದಲಿಂಗಯ್ಯ, ದೊಡ್ಡರಂಗೇಗೌಡ, ಪ್ರಧಾನ್ ಗುರುದತ್ತ, ಶಿಕ್ಷಣ ತಜ್ಞ ಗುರುರಾಜ ಕರಜಗಿ, ಮಾಜಿ ಸಚಿವೆ ರಾಣಿ ಸತೀಶ್ ಸೇರಿ ವಿವಿಧ ಕ್ಷೇತ್ರಗಳ 80ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. 

ADVERTISEMENT

ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಹಲವು ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸುಸಜ್ಜಿತವಾಗಿದ್ದ ಕನ್ನಡ ಮಾಧ್ಯಮ ಶಾಲೆಗಳನ್ನೂ ಸರ್ಕಾರವು ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಎಂದು ಪರಿವರ್ತಿಸಿತು. ಇದರಿಂದ ಮಕ್ಕಳಿಗೆ ಯಾವುದೇ ಭಾಷೆ ಸರಿಯಾಗಿ ಬರುತ್ತಿಲ್ಲ. ಕಾನೂನು ತೊಡಕುಗಳಿಂದ ಕನ್ನಡ ಅನ್ನದ ಭಾಷೆಯಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾ. ಅರಳಿ ನಾಗರಾಜ್, ‘ಕನ್ನಡ ಮಾಧ್ಯಮ ಶಾಲೆಗಳ ಪುನಶ್ಚೇತನಕ್ಕೆ ಕಾನೂನಿನ ಅಡೆ ತಡೆಯಿಲ್ಲ. ಸರ್ಕಾರವು ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ, ಆಕರ್ಷಕ ರೀತಿಯಲ್ಲಿ ರೂಪಿಸಬೇಕು. ಜನಪ್ರತಿನಿಧಿಗಳೂ ಈ ಬಗ್ಗೆ ಕ್ರಮವಹಿಸಬೇಕು’ ಎಂದು ಹೇಳಿದರು. 

ಮಾದರಿ ಶಾಲೆ ನಿರ್ಮಿಸಿ: ಗುರುರಾಜ ಕರಜಗಿ, ‘ಮಕ್ಕಳು ಏಕೆ ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಗುತ್ತಿಲ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಶಿಕ್ಷಕರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಿ, ಜಿಲ್ಲೆಗೊಂದು ಮಾದರಿ ಕನ್ನಡ ಮಾಧ್ಯಮ ಶಾಲೆಯನ್ನು ರೂಪಿಸಬೇಕು. ಅಲ್ಲಿ ಒಂದು ಭಾಷೆಯಾಗಿ ಇಂಗ್ಲಿಷ್ ಬೋಧಿಸಬೇಕು. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ಶಾಲೆಗಳಿಗೆ ಅಗತ್ಯ ಸೌಕರ್ಯ ನೀಡಿ, ಅಭಿವೃದ್ದಿಪಡಿಸಬೇಕು’ ಎಂದು ಹೇಳಿದರು. 

ಜಿ.ಎಸ್. ಸಿದ್ದಲಿಂಗಯ್ಯ, ‘ರಾಜ್ಯಾಂಗದಲ್ಲಿ ಶಿಕ್ಷಣವನ್ನು ಪೋಷಕರ ಹಕ್ಕು ಎಂದು ಹೇಳಿಲ್ಲ. ಶಾಲೆಗಳ ಉಳಿವಿಗೆ ಸರ್ಕಾರ ಆಡಳಿತಾತ್ಮಕ ಕೆಲಸ ಮಾಡಬೇಕು. ಪರಿಷತ್ತಿನ ನಿಯೋಗ ಸರ್ಕಾರಕ್ಕೆ ಹಾಗೂ ವಿರೋಧ ಪಕ್ಷಕ್ಕೆ ಕನ್ನಡ ಶಾಲೆಗಳ ಪ್ರಾಮುಖ್ಯತೆ ಬಗ್ಗೆ ಮನವರಿಕೆ ಮಾಡಿಸಬೇಕು’ ಎಂದರು. 

ಜನಾಂದೋಲನ ರೂಪದಲ್ಲಿ ಕನ್ನಡ ಕಲಿಸಬೇಕು. ಕನ್ನಡದ ಇತಿಹಾಸ ವೈಭವ ವೈಶಿಷ್ಟ್ಯವನ್ನು ಸಾರಿದರೆ ಮಕ್ಕಳು ಭಾಷೆಯ ಕಡೆಗೆ ಆಕರ್ಷಿತರಾಗುತ್ತಾರೆ. ಪಠ್ಯದಲ್ಲಿ ಉತ್ತಮ ವಿಚಾರ ಅಳವಡಿಸಬೇಕು. 

-ಶಿವರುದ್ರ ಸ್ವಾಮೀಜಿ ಬೇಲಿಮಠದ ಪೀಠಾಧ್ಯಕ್ಷ

Quote - ಕೆಲ ಕನ್ನಡ ಮಾಧ್ಯಮ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿ ರೂಪಿಸಬೇಕು. ಮನೆಗಳಲ್ಲಿ ಪೋಷಕರಿಂದ ಕನ್ನಡದ ಬಗ್ಗೆ ಗೌರವ ಹೆಚ್ಚಿಸುವ ಕೆಲಸ ಆಗಬೇಕು. ಸರ್ಕಾರ ಕನ್ನಡಕ್ಕೆ ಆದ್ಯತೆ ನೀಡಬೇಕು. ।ದೊಡ್ಡರಂಗೇಗೌಡ ಸಾಹಿತಿ

‘ಇಂಗ್ಲಿಷ್‌ ಕಲಿಕೆಗೂ ಅವಕಾಶ ಕಲ್ಪಿಸಿ’ 

‘ಸರ್ಕಾರಗಳಿಗೆ ಕನ್ನಡ ಭಾಷೆ ಹಾಗೂ ಶಿಕ್ಷಣ ಆದ್ಯತೆಯಾಗಿಲ್ಲ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಮಕ್ಕಳನ್ನು ಕರೆತರಬೇಕಾದರೆ ಈ ಶಾಲೆಗಳಲ್ಲಿಯೂ ಇಂಗ್ಲಿಷ್‌ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಕನ್ನಡ ಮಾಧ್ಯಮದಲ್ಲಿನ ಮಕ್ಕಳಿಗೆ ಇಂಗ್ಲಿಷ್ ಕಲಿಕೆಯ ಎಲ್ಲ ಸೌಲಭ್ಯ ಕಲ್ಪಿಸಬೇಕು. ಆಗ ಶಾಲೆ ಮತ್ತು ಕನ್ನಡ ಉಳಿಯುತ್ತದೆ. ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಮುಷ್ಕರ ನಡೆಸಬೇಕು. ಈ ವಿಚಾರವಾಗಿ ಆಮರಣಾನಂತರ ಉಪವಾಸಕ್ಕೂ ನಾನು ಸಿದ್ಧ’ ಎಂದು ಹಂ.ಪ. ನಾಗರಾಜಯ್ಯ ಹೇಳಿದರು. ಪ್ರಧಾನ್ ಗುರುದತ್ತ ‘ಶಾಸಕರು ಮಂತ್ರಿಗಳಿಗೆ ಕನ್ನಡ ಬೇಕಿಲ್ಲ. ಜನ‍ಪ್ರತಿನಿಧಿಗಳು ಶಾಲೆಗಳನ್ನೂ ನಡೆಸುತ್ತಿದ್ದಾರೆ. ಹೀಗಾಗಿ ಕನ್ನಡ ಮಾಧ್ಯಮ ಶಾಲೆಗೆ ಈ ಸ್ಥಿತಿ ಬಂದಿದೆ. ಕನ್ನಡ ಮಾಧ್ಯಮಕ್ಕೆ ಮಾನ್ಯತೆ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಹಳ್ಳಿಗಳಲ್ಲಿ ಸಿಬಿಎಸ್‌ಇ ಶಾಲೆಗಳನ್ನು ಪ್ರಾರಂಭ ಮಾಡಲಾಗುತ್ತಿದೆ. ಸರ್ಕಾರಕ್ಕೆ ನ್ಯಾಯಾಂಗ ಕ್ಷೇತ್ರದಿಂದ ಬರೆ ಹಾಕುವ ಕೆಲಸ ಆಗಬೇಕು’ ಎಂದರು. 

‘ಮಹಿಳೆಯರ ಬದಲು ಮಕ್ಕಳಿಗೆ ಉಚಿತ ನೀಡಿ’

‘ವಿಧಾನಸೌಧದ ಸುತ್ತೊಲೆಗಳಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. ಎಲ್ಲ ಕನ್ನಡ ಮನಸ್ಸುಗಳು ಒಂದಾಗಬೇಕು. ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಕನ್ನಡ ಶಾಲೆ ಹಾಗೂ ಕನ್ನಡ ಭಾಷೆಗೆ ಅನುದಾನ ನೀಡುವ ಪ್ರಕ್ರಿಯೆ ಆಗಬೇಕು. ಈ ಬಗ್ಗೆ ಪರಿಷತ್ತಿನ ನೇತೃತ್ವದಲ್ಲಿ ನಿಯೋಗ ತೆರೆಳಿ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಮಾಡಬೇಕು. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮಾಡುವ ಬದಲು ಮಕ್ಕಳಿಗೆ ಉಚಿತ ನೀಡಿ ಮೈದಾನ ಒಳಗೊಂಡಂತೆ ವಿವಿಧ ಸೌಲಭ್ಯಗಳನ್ನು ಶಾಲೆಗಳಿಗೆ ಒದಗಿಸಿದರೆ ಮಕ್ಕಳನ್ನು ಆಕರ್ಷಿಸಲು ಸಾಧ್ಯ’ ಎಂದು ರಾಣಿ ಸತೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.