ADVERTISEMENT

ಉದ್ಯಮ ಸ್ನೇಹಿ ‘ಎಬಿಸಿ’ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 15:39 IST
Last Updated 21 ಡಿಸೆಂಬರ್ 2020, 15:39 IST

ಬೆಂಗಳೂರು: ವಾಣಿಜ್ಯ ಮತ್ತು ಉದ್ಯಮಗಳ ಸುಲಲಿತ ವ್ಯವಹಾರಕ್ಕೆ ಸಹಾಯಕವಾಗಲು ಪ್ರಮಾಣಪತ್ರ ಆಧರಿಸಿ ಅನುಮೋದನೆ (ಅಫಿಡವಿಟ್‌ ಬೇಸ್ಡ್‌ ಕ್ಲಿಯರೆನ್ಸ್‌ –ಎಬಿಸಿ) ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಇದಕ್ಕೆ ಚಾಲನೆ ನೀಡಿದರು.

ಯೋಜನೆಗೆ ಚಾಳನೆ ನೀಡಿ ಮಾತನಾಡಿದ ಅವರು, ಸ್ವಯಂ ಘೋಷಣೆ ಪತ್ರದ ಮೂಲಕ ಕೈಗಾರಿಕೆಗಳ ಸ್ಥಾಪನೆ ಪ್ರಕ್ರಿಯೆಯನ್ನು ಸರಳಗೊಳಿಸುವ ಯೋಜನೆ ಇದಾಗಿದೆ. ವಿವಿಧ ಇಲಾಖೆಗಳ ಆಯ್ದ 15 ಉದ್ಯಮ ಸೇವೆಗಳು ಇದರ ವ್ಯಾಪ್ತಿಗೆ ಬರಲಿವೆ ಎಂದರು.

ಹೊಸ ವ್ಯವಸ್ಥೆ ಮೂಲಕ ವ್ಯವಹಾರ ಪ್ರಕ್ರಿಯೆ ಸರಳಗೊಳಿಸಿ, ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ಕಲ್ಪಿಸುವ ಯತ್ನದಲ್ಲಿ ಕರ್ನಾಟಕ ಸದಾ ಒಂದು ಹೆಜ್ಜೆ ಮುಂದಿರುತ್ತದೆ. ಉದ್ಯಮಗಳ ಸ್ಥಾಪನೆಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿರುವ ರಾಜ್ಯದ ಬಗ್ಗೆ ಹೂಡಿಕೆದಾರರು ಅಚಲ ವಿಶ್ವಾಸವಿಟ್ಟಿದ್ದಾರೆ. ಹೂಡಿಕೆದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಲವು ಸುಧಾರಣೆಗಳನ್ನು ತರಲಾಗಿದೆ. ಭೂ ಸುಧಾರಣೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿದೆ. ಹಲವು ರೀತಿಯ ಪರವಾನಗಿಗಳಿಗೆ ಕೇಂದ್ರೀಕೃತ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ADVERTISEMENT

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ಉದ್ಯಮಗಳ ಸ್ಥಾಪನೆ ಆರಂಭದ ಸಂದರ್ಭದಲ್ಲಿ ತಕ್ಷಣ ಅನುಮತಿ ಪಡೆಯಲು ತೊಡಕಾಗದಂತೆ ಕರ್ನಾಟಕ ಸೌಲಭ್ಯ ಅಧಿನಿಯಮ
2002 ರ ತಿದ್ದುಪಡಿ ಜಾರಿಗೆ ತರಲಾಗಿದೆ. ಇದರಿಂದ ಕೈಗಾರಿಕೆ ಸ್ಥಾಪನೆ ಮಾಡಲು ಭೂಪರಿವರ್ತನೆ, ಬಿಲ್ಡಿಂಗ್‌ ಪ್ಲ್ಯಾನ್‌ ಸೇರಿದಂತೆ ಇತರ ಎಲ್ಲ ಅನುಮತಿಗಳನ್ನು ಪಡೆಯುವ ಮೊದಲೇ ಕೈಗಾರಿಕಾ ಘಟಕವನ್ನು ಸ್ಥಾಪಿಸಬಹುದಾಗಿದೆ ಎಂದರು.

ಕೈಗಾರಿಕೆಯ ವಾಣಿಜ್ಯ ಕಾರ್ಯಾಚರಣೆ ಆರಂಭದವರೆಗೆ ಅಥವಾ ಮೂರು ವರ್ಷಗಳ ಆರಂಭಿಕ ಅವಧಿಗೆ ಅಫಿಡವಿಟ್‌ ಬೇಸ್ಡ್‌ ಕ್ಲಿಯರೆನ್ಸ್‌ ಅನ್ನು ಇಲಾಖೆಗಳ ಅನುಮೋದನೆ ಎಂದು ಪರಿಗಣಿಸಲಾಗುತ್ತದೆ. ‘ಕರ್ನಾಟಕ ಉದ್ಯೋಗ ಮಿತ್ರ’ ನೀಡುವ ಸ್ವೀಕೃತಿ ಪ್ರಮಾಣ ಪತ್ರವನ್ನು ಮೂರು ವರ್ಷಗಳ ಆರಂಭಿಕ ಅವಧಿಗೆ ಇಲಾಖೆಗಳ ಅನುಮತಿ ಎಂದೇ ಪರಿಗಣಿಸಲಾಗುತ್ತದೆ. ಇದು ಪೂರ್ವಾನುಮತಿ ದಾಖಲೆಯಾಗಿರುತ್ತದೆ. ಉತ್ಪಾದನಾ ಕೈಗಾರಿಕೆಗಳು/ಉದ್ಯಮಗಳು ಈ ಅಫಿಡವಿಟ್‌ ಕ್ಲಿಯರೆನ್ಸ್‌ ಪಡೆಯಲು ಅರ್ಹವಾಗಿವೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.