ADVERTISEMENT

ಸರ್ಕಾರಿ ಶಾಲೆ: ₹ 100 ದೇಣಿಗೆ ಸುತ್ತೋಲೆ ವಾಪಸ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 13:34 IST
Last Updated 22 ಅಕ್ಟೋಬರ್ 2022, 13:34 IST
ಸಚಿವ ನಾಗೇಶ್‌
ಸಚಿವ ನಾಗೇಶ್‌   

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಖರ್ಚುವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ಪ್ರತಿ ತಿಂಗಳು ₹ 100 ದೇಣಿಗೆ ಸಂಗ್ರಹಿಸಲು ಹೊರಡಿಸಿದ್ದ ಸುತ್ತೋಲೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಿಂಪಡೆದಿದೆ.

ಇಲಾಖೆಯ ಆಯುಕ್ತರ ಕಚೇರಿ ಹೊರಡಿಸಿದ್ದ ಸುತ್ತೋಲೆ ಕುರಿತು ‘ಪ್ರಜಾವಾಣಿ’ ಅ.21ರ ಸಂಚಿಕೆಯ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಸರ್ಕಾರದ ನಿರ್ಧಾರಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ಸಂಘಟನೆಗಳು, ಶಿಕ್ಷಣ ತಜ್ಞರು ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಶಾಲಾ ನಿರ್ವಹಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಸರ್ಕಾರದ ಮಂಜೂರಾತಿ ಇಲ್ಲವಾದಾಗ, ಅನುದಾನದ ಕೊರತೆ ಎದುರಾದಾಗ ಸ್ಥಳೀಯವಾಗಿ ಸುಗಮ ನಿರ್ವಹಣೆ ಸಾಧ್ಯವಾಗಿಸಲು, ಶಾಲಾ ಚಟುಚಟಿಕೆ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವಂತೆ ಮಾಡಲು ಮಕ್ಕಳ ಪೋಷಕರು, ತಂದೆ, ತಾಯಿಯರ ಮನವೊಲಿಸಿ ಪ್ರತಿ ತಿಂಗಳು ಹಣ ಪಡೆಯಬೇಕು. ಹಣಕ್ಕಾಗಿ ಬಲವಂತ ಮಾಡಬಾರದು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿತ್ತು.

ADVERTISEMENT

ದೇಣಿಗೆ ನೀಡುವುದು ಸ್ವಚ್ಛಯೆಯಿಂದ ಎಂದು ಹೇಳಿದ್ದರೂ ಈ ಸುತ್ತೋಲೆಯಿಂದ ಪೋಷಕರ ಮಧ್ಯೆ ತಾರತಮ್ಯಕ್ಕೆ ಕಾರಣವಾಗುತ್ತದೆ. ಸರ್ಕಾರಿ ಶಾಲೆಗೆ ಈಗ ಬರುತ್ತಿರುವ ಮಕ್ಕಳೂ ಬರದೆ ಶಾಲೆ ಮುಚ್ಚುವ ಸ್ಥಿತಿ ನಿರ್ಮಾಣವಾಗಬಹುದು. ಸಂವಿಧಾನದ ಮೂಲಭೂತ ಹಕ್ಕು, ಕಡ್ಡಾಯ ಶಿಕಲ್ಷಣದ ಹಕ್ಕಿಗೆ ಚ್ಯುತಿ ತರುತ್ತದೆ. ಸರ್ಕಾರ ಇತರೆ ಯೋಜನೆಗಳಿಗೆ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತದೆ. ಶಿಕ್ಷಣ, ಆರೋಗ್ಯ ಕ್ಷೇತ್ರ ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.