ADVERTISEMENT

ವೃತ್ತಿಪರ ಕೋರ್ಸ್‌: ಕ್ರೀಡಾ ಕೋಟಾ ನಿಯಮ ಬದಲು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 16:37 IST
Last Updated 31 ಆಗಸ್ಟ್ 2023, 16:37 IST
   

ಬೆಂಗಳೂರು: ಕ್ರೀಡಾ ಕೋಟಾದ ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇರುವ ನಿಯಮಗಳನ್ನು ಬದಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕ್ರೀಡಾ ವಿದ್ಯಾರ್ಥಿಗಳು ಸಿಇಟಿಗೆ ಹಾಜರಾಗಬೇಕು. ಪಿಯು ಸೇರಿದಂತೆ ಹಿಂದಿನ ಮೂರು ವರ್ಷಗಳ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿರಬೇಕು. ಎರಡರಲ್ಲಿ ಅತ್ಯುತ್ತಮ ಕ್ರೀಡಾ ಪ್ರದರ್ಶನ ನೀಡಿರಬೇಕು ಎಂದು ಹೊಸ ನಿಯಮಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ನಿಯಮವನ್ನು 2024–25ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಮಾಹಿತಿ ನೀಡಿದರು.

ಕ್ರೀಡಾ ಕೋಟಾದಡಿ ವೈದ್ಯಕೀಯದಲ್ಲಿ ಏಳು, ದಂತ ವೈದ್ಯಕೀಯದಲ್ಲಿ ಐದು ಮತ್ತು ಎಂಜಿನಿಯರಿಂಗ್‌ನಲ್ಲಿ 165 ಸೀಟುಗಳು ಲಭ್ಯವಿವೆ. ಕ್ರೀಡಾ ಕೋಟಾ ಪರಿಗಣಿಸುವಾಗ ಒಲಿಂಪಿಕ್ಸ್‌ ಅಥವಾ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದರೆ ಗರಿಷ್ಠ 100 ಅಂಕ, ಒಲಿಂಪಿಕ್ಸ್‌ ಅಥವಾ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರೆ 97 ಅಂಕ ನೀಡಲಾಗುತ್ತದೆ. ವಿಶ್ವಕಪ್‌, ವಿಶ್ವ ಚಾಂಪಿಯನ್‌ಶಿಪ್‌, ಏಷ್ಯನ್ ಆಟಗಳು, ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರನ್ನೂ ಕೋಟಾದ ಅಡಿ ಪರಿಗಣಿಸಲಾಗುತ್ತಿದೆ.

ADVERTISEMENT

ಜತೆಗೆ, ಪ್ರಸ್ತುತ 8ರಿಂದ 12ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು ತೋರಿದ ಕ್ರೀಡಾ ಸಾಧನೆಗಳನ್ನು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗುತ್ತಿದೆ. 8ನೇ ತರಗತಿ ಇದ್ದಾಗ ಕ್ರೀಡೆಯಲ್ಲಿ ಭಾಗವಹಿಸಿ ಪದಕ ಗೆದ್ದ ವಿದ್ಯಾರ್ಥಿಯನ್ನು ಕ್ರೀಡಾ ಕೋಟಾದಡಿ  ಪರಿಗಣಿಸುವುದು ಎಷ್ಟು ಸೂಕ್ತ ಎನ್ನುವ ಚರ್ಚೆಗಳು ನಡೆದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಮಿತಿ ರಚಿಸಿತ್ತು. ಸಮಿತಿ ಶಿಫಾರಸಿನಂತೆ ಈ ನಿರ್ಧಾರಕ್ಕೆ ಬರದಲಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.