ADVERTISEMENT

ಸಾಕ್ಷ್ಯ ಕೊಡಿ, ಇಲ್ಲವೇ ಕ್ಷಮೆ ಯಾಚಿಸಿ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 16:40 IST
Last Updated 11 ಜನವರಿ 2022, 16:40 IST
ಡಾ.ಕೆ.ಸುಧಾಕರ್‌
ಡಾ.ಕೆ.ಸುಧಾಕರ್‌   

ಬೆಂಗಳೂರು: ‘ಕೋವಿಡ್‌ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಿ ಸರ್ಕಾರ ಹಣ ಸಂಪಾದಿಸುತ್ತಿದೆ ಎಂಬ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಾಕ್ಷ್ಯ ಒದಗಿಸಬೇಕು. ಇಲ್ಲದಿದ್ದಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸವಾಲು ಹಾಕಿದರು.

ಸುದ್ದಿಗಾರರ ಜತೆಮಂಗಳವಾರ ಮಾತನಾಡಿದ ಅವರು, ‘ಕೋವಿಡ್‌ ನಿಯಂತ್ರಣ ಮತ್ತು ಪರೀಕ್ಷೆಯಲ್ಲಿ ತಪ್ಪು ಕಂಡುಬಂದಿದ್ದರೆ ಅವರು ಸರ್ಕಾರಕ್ಕೆ ದೂರು ನೀಡಬೇಕಿತ್ತು. ರಾಜಕೀಯ ಲಾಭಕ್ಕಾಗಿ ತಪ್ಪು ಸಂದೇಶ ನೀಡಿ, ವದಂತಿ ಹಬ್ಬಿಸಿದ್ದಾರೆ. ಸುಳ್ಳು ಆರೋಪಕ್ಕೆ ಸಾಕ್ಷ್ಯ ಕೊಡದಿದ್ದರೆ ಅಥವಾ ಕ್ಷಮೆ ಯಾಚಿಸದಿದ್ದರೆ ಶಿವಕುಮಾರ್‌ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದರು.

ತಮಗೆ ಕೋವಿಡ್‌ ಸೋಂಕು ತಗುಲಿಸಲು ಸರ್ಕಾರ ಯತ್ನಿಸಿತ್ತು ಎಂದು ಅವರು ಆರೋಪಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಹಿಡಿದು ಕೋವಿಡ್‌ ದೃಢಪಟ್ಟಿದೆ ಎಂದು ಬಿಂಬಿಸಲಾಗುತ್ತಿದೆ ಎಂದಿದ್ದಾರೆ. ಈ ರೀತಿಯ ಆಧಾರರಹಿತ ಆರೋಪಗಳನ್ನು ಮಾಡಿ, ವದಂತಿ ಹಬ್ಬಿಸುವವರ ವಿರುದ್ಧ ಕಾನೂನಿನ ರೀತಿಯಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

‘ಶಿವಕುಮಾರ್‌ ಅವರು ನನ್ನನ್ನು ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ. ಅದನ್ನು ರಾಜಕೀಯವಾಗಿಯೇ ನಾವು ಎದುರಿಸುತ್ತೇವೆ. ಆದರೆ, ಕೋವಿಡ್‌ ನಿಯಂತ್ರಣ ಮತ್ತು ಪರೀಕ್ಷೆ ಕುರಿತು ಸುಳ್ಳು ಆರೋಪ ಮಾಡುವ ಮೂಲಕ ಆರೋಗ್ಯ ವ್ಯವಸ್ಥೆಯ ಬಗ್ಗೆ ವದಂತಿ ಹಬ್ಬಿಸಿದ್ದಾರೆ. ಸರ್ಕಾರಿ ನೌಕರರ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ. ಇವುಗಳನ್ನು ಕಾನೂನಿನ ಮೂಲಕ ಎದುರಿಸಲಾಗುವುದು’ ಎಂದರು.

ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ–1897, ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ– 2020 ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ. ಆರೋಪ ಮಾಡಿರುವವರು ತಕ್ಷಣವೇ ಸಾಕ್ಷ್ಯಗಳ ಸಮೇತ ಸ್ಪಷ್ಟನೆ ನೀಡಬೇಕು. ಇಲ್ಲವಾದರೆ ಕಾನೂನು ಕ್ರಮ ನಿಶ್ಚಿತ ಎಂದು ಆರೋಗ್ಯ ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.