ADVERTISEMENT

ಸಕ್ಕರೆ ಕಾರ್ಖಾನೆಗಳಲ್ಲಿ ಮೋಸ ತಡೆಗೆ ಬಿಗಿ ಕ್ರಮ: ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 16:34 IST
Last Updated 11 ಡಿಸೆಂಬರ್ 2023, 16:34 IST
Venugopala K.
   Venugopala K.

ವಿಧಾನಸಭೆ: ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸ ಸೇರಿದಂತೆ ರೈತರಿಗೆ ವಂಚಿಸುವುದನ್ನು ತಡೆಯಲು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಕಬ್ಬಿನ ತೂಕದಲ್ಲಿ ಮೋಸ ನಡೆಯುತ್ತಿರುವ ಕುರಿತು ಕಾಂಗ್ರೆಸ್‌ನ ಲಕ್ಷ್ಮಣ ಸವದಿ, ರಾಜು ಕಾಗೆ, ವಿನಯ ಕುಲಕರ್ಣಿ ಮತ್ತಿತರರು ನಿಯಮ 69ರಡಿ ಸೋಮವಾರ ಮಾತನಾಡಿದರು. ‘ಪ್ರತಿ ಲಾರಿಯಲ್ಲಿ ಎರಡು ಟನ್‌ನಷ್ಟು ತೂಕವನ್ನು ಮೋಸ ಮಾಡಲಾಗುತ್ತಿದೆ’ ಎಂದು ಆರೋಪಿಸಿದ ಸದಸ್ಯರು, ವಂಚನೆ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

‘ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡಲು ಡಿಜಿಟಲ್‌ ತೂಕದ ಯಂತ್ರ ಅಳವಡಿಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಪ್ರಸಕ್ತ ಹಂಗಾಮಿನಲ್ಲಿ 76 ಕಾರ್ಖಾನೆಗಳು ಕಬ್ಬು ನುರಿದಿವೆ. ಅವುಗಳಲ್ಲಿ 24 ಕಾರ್ಖಾನೆಗಳಲ್ಲಿ ಮಾತ್ರ ಡಿಜಿಟಲ್‌ ತೂಕದ ಯಂತ್ರ ಅಳವಡಿಸಲಾಗಿದೆ. ಮುಂದಿನ ವರ್ಷದಿಂದ ಸಕ್ಕರೆ ಇಲಾಖೆಯಿಂದಲೇ ಕಾರ್ಖಾನೆಗಳ ಬಳಿ ಡಿಜಿಟಲ್‌ ತೂಕದ ಯಂತ್ರ ಅಳವಡಿಸಲಾಗವುದು’ ಎಂದರು.

ADVERTISEMENT

ಎಥೆನಾಲ್‌ ಘಟಕಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಿಂದ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ತೊಂದರೆ ಆಗಲಿದೆ. ಈ ಕಾರಣದಿಂದ ಕೇಂದ್ರ ಸರ್ಕಾರ ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಸಚಿವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.