ADVERTISEMENT

ಅವಕಾಶಕ್ಕಾಗಿ ಪದವೀಧರರ ಒತ್ತಾಯ

ಪರೀಕ್ಷೆಗೆ ಸಜ್ಜಾಗಿರುವ ಪಿಎಸ್‌ಐ ಹುದ್ದೆ ಆಕಾಂಕ್ಷಿಗಳ ಆಗ್ರಹ

ಡಿ.ಬಿ, ನಾಗರಾಜ
Published 2 ಫೆಬ್ರುವರಿ 2021, 20:29 IST
Last Updated 2 ಫೆಬ್ರುವರಿ 2021, 20:29 IST

ಮೈಸೂರು: ರಾಜ್ಯ ಪೊಲೀಸ್‌ ಇಲಾಖೆಯು 545 ಸಿವಿಲ್‌ ಪಿಎಸ್‌ಐ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದು, ಇದಕ್ಕೆ ಅರ್ಜಿ ಸಲ್ಲಿಸಲು ತಮಗೂ ಅವಕಾಶ ಕೊಡಬೇಕೆಂದು 2020ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿರುವ ಪದವೀಧರರು ಆಗ್ರಹಿಸಿದ್ದಾರೆ.

2020ರಲ್ಲಿ ಇದೇ ನೇಮಕಾತಿಗೆ ಸಂಬಂಧಿಸಿದಂತೆ, 2020ರ ಜೂನ್ 30ರೊಳಗೆ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅವಕಾಶವಿತ್ತು. ಆದರೆ ಕೋವಿಡ್‌ನಿಂದ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿತು.

ಇದೀಗ ನೇಮಕಾತಿ ಮತ್ತೆ ಶುರುವಾಗಿದ್ದು, ಹೊಸ ಅಧಿಸೂಚನೆ ಪ್ರಕಟಗೊಂಡಿದೆ. ಇದರಲ್ಲಿ 2020ರ ಏ.1ರೊಳಗೆ ಪದವಿ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದು ಎಂಬುದು ನಮೂದಾಗಿದ್ದು; ಕೋವಿಡ್‌–19ರ ಸಂಕಷ್ಟದಲ್ಲೂ ಪದವಿ ಪಡೆದ ವಿದ್ಯಾರ್ಥಿಗಳ ಅವಕಾಶವನ್ನೇ ಕಿತ್ತುಕೊಂಡಂತಾಗಿದೆ ಎಂಬುದು ಪದವೀಧರರ ದೂರು.

ADVERTISEMENT

ಅವಕಾಶಕ್ಕಾಗಿ ಟ್ವಿಟರ್‌ನಲ್ಲಿ ಅಭಿಯಾನ ನಡೆಸಿದ್ದಾರೆ. ಪತ್ರ ಬರೆದಿದ್ದಾರೆ. ಆದರೆ ಯಾರೊಬ್ಬರಿಂದಲೂ ಅವರಿಗೆ ಸ್ಪಂದನೆ ಸಿಕ್ಕಿಲ್ಲ.

‘ಹಿಂದಿನ ವರ್ಷ ಅಧಿಸೂಚನೆ ಪ್ರಕಟಗೊಂಡಾಗಲೇ ಖಾಕಿಯ ಕನಸು ಕಂಡಿದ್ದೆವು. ಅವಕಾಶ ಸಿಕ್ಕಿದ ಹುಮ್ಮಸ್ಸಿನಿಂದ, ಕೊರೊನಾ ವೈರಸ್‌ ಹಾವಳಿ ಉಲ್ಬಣಿಸಿದ ಕಾಲಘಟ್ಟದಲ್ಲೇ ಪರೀಕ್ಷೆ ಬರೆದು ಪದವಿ ಪಡೆದಿದ್ದೇವೆ. ತರಬೇತಿ, ಕೋಚಿಂಗ್‌ ಕ್ಲಾಸ್‌ಗಳ ಮಾರ್ಗದರ್ಶನವನ್ನೂ ಪಡೆದು, ಸೂಕ್ತ ತಯಾರಿ ನಡೆಸಿಕೊಂಡಿದ್ದೆವು. ಈಗಿನ ಅಧಿಸೂಚನೆ ನಮ್ಮ ಕನಸಿಗೆ ಕೊಳ್ಳಿ ಇಟ್ಟಿದೆ’ ಎಂದು ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಶರತ್‌ ನಾಯ್ಕ್‌ ಅಸಮಾಧಾನ ಹೊರಹಾಕಿದರು. ಇದಕ್ಕೆ ಜುಬೇರ್‌, ನಾಗೇಶ್‌, ಶಂಕರ್‌ ಸಹ ಧ್ವನಿಗೂಡಿಸಿದರು.

‘ನಮ್ಮ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳುವುದು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಅಲವತ್ತುಕೊಂಡವರು ವಿಜಯಪುರ ಜಿಲ್ಲೆಯ ಪವನ್‌.

‘ಐದು ವರ್ಷ ಸೇವೆ ಸಲ್ಲಿಸಿದ ಕಾನ್‌ಸ್ಟೆಬಲ್‌ಗಳು ಸಹ ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಎಂಬುದು ಅಧಿಸೂಚನೆಯಲ್ಲಿದೆ. ಆದರೆ ಅರ್ಹತೆಯ ದಿನಾಂಕವನ್ನು 2020ರ ಏ.1ಕ್ಕೆ ನಿಗದಿಪಡಿಸಿದ್ದಾರೆ. 2020ರ ಅಕ್ಟೋಬರ್‌ವರೆಗೂ ವಿಸ್ತರಿಸಿದರೆ, ನಮ್ಮ ಬ್ಯಾಚಿನ ಸಾವಿರಕ್ಕೂ ಹೆಚ್ಚಿನ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಮತ್ತೊಂದು ನೇಮಕಾತಿವರೆಗೂ ಕಾಯಬೇಕು’ ಎಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಠಾಣೆಯೊಂದರ ಕಾನ್‌ಸ್ಟೆಬಲ್‌ ರಮೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.