ಚಾಮರಾಜನಗರ: ಮೊದಲ ಹಂತದಲ್ಲಿ 28 ಕೋವಿಡ್ ರೋಗಿಗಳಿಂದ ಮತದಾನ. ಚಾಮರಾಜನಗರ ತಾಲ್ಲೂಕಿನಲ್ಲಿ 20 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎಂಟು ಮಂದಿ ಹಕ್ಕು ಚಲಾಯಿಸಿದ್ದಾರೆ. ಎರಡೂ ತಾಲ್ಲೂಕುಗಳಲ್ಲಿ 55 ಮಂದಿ ರೋಗಿಗಳಿದ್ದರು.
ಕಮಲಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಸೊಂತ ಗ್ರಾಮದಲ್ಲಿ ಮತದಾನದ ಸಮಯ 5 ಗಂಟೆ ಮೀರಿದರೂ ಸುಮಾರು 200ಕ್ಕಿಂತ ಹೆಚ್ಚು ಜನರ ಮತ ಚಲಾವಣೆ ಬಾಕಿ ಉಳಿದಿದ್ದು, ಎಲ್ಲರೂ ಸರತಿಯಲ್ಲಿ ನಿಂತಿದ್ದಾರೆ. ಅವರಿಗೆ ಟೋಕನ್ ವಿತರಿಸಲಾಗಿದೆ.
ವಾರ್ಡ್ ಸಂಖ್ಯೆ 2ರಲ್ಲಿ 3 ಸ್ಥಾನಗಳಿದ್ದು, 15 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ವಾರ್ಡ್ ಸಂಖ್ಯೆ 3ರಲ್ಲಿಯೂ 3 ಸ್ಥಾನಗಳಿದ್ದು, 18 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಈ ಎರಡೂ ವಾರ್ಡುಗಳ ಮತಗಟ್ಟೆಗಳಲ್ಲಿ ಸುಮಾರು 200ಕ್ಕಿಂತ ಹೆಚ್ಚು ಜನ ಮತದಾನಕ್ಕಾಗಿ ಕಾದು ನಿಂತಿದ್ದಾರೆ. ಹೆಚ್ಚು ಜನ ಸ್ಪರ್ಧೆಯಲ್ಲಿರುವುದರಿಂದ ಮತಪತ್ರ ದೊಡ್ಡದಾಗಿದೆ. ತಮ್ಮ ಅಭ್ಯರ್ಥಿಯನ್ನು ಹುಡುಕಿ ಮತ ಚಲಾಯಿಸಲು ಹೆಚ್ಚು ಸಮಯ ಬೇಕಾಗುತ್ತಿದೆ. ಜೊತೆಗೆ ಈ ಗ್ರಾಮದ ಬಹುತೇಕ ಜನ ಜಿಲ್ಲಾ ಕೇಂದ್ರ ಕಲಬುರ್ಗಿಯಲ್ಲಿ ನೆಲೆಸಿದ್ದಾರೆ. ಅವರೆಲ್ಲ ಮಧ್ಯಾಹ್ನದ ನಂತರ ಬರುತ್ತಿರುವುದರಿಂದ ಮತದಾನ ವೇಗ ಪಡೆದ್ದಿಲ್ಲ. ಇವರೆಲ್ಲರ ಮತದಾನ ಪ್ರಕ್ರಿಯೆ ಮುಗಿಯಬೇಕಾದರೆ ರಾತ್ರಿ 8 ಆಗಬಹುದು ಎನ್ನಲಾಗುತ್ತಿದೆ.
ಸ್ವಲ್ಪ ಸಮಯವಾದರೂ ಎಲ್ಲರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಚುನಾವಣಾಧಿಕಾರಿ ಚಂದ್ರಕಾಂತ ಕಿಣಗಿ ತಿಳಿಸಿದ್ದಾರೆ.
ಹಾಸನ: ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣದ ಉರ್ದು ಶಾಲೆ ಮತಗಟ್ಟೆ ಬಳಿ ಪೊಲೀಸರು ಮತ್ತು ಗ್ರಾಮದ ಕೆಲವರ ಮಧ್ಯೆ ಘರ್ಷಣೆ ಉಂಟಾಯಿತು.
ಕೊಣನೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ಅಜಯ್ ಕುಮಾರ್ ಮತಗಟ್ಟೆ ಬಳಿ ಉಪಹಾರ ನೀಡದಂತೆ ವ್ಯಕ್ತಿಯೊಬ್ಬರಿಗೆ ಲಾಠಿಯಿಂದ ಹೊಡೆದಿದ್ದಾರೆ. ಆಕ್ರೋಶಗೊಂಡ ಕೆಲವರು ಪೊಲೀಸ್ ಜೀಪ್ ಅಡ್ಡಗಟ್ಟಿ ಸಬ್ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿ, ಪೊಲೀಸರನ್ನು ತಳ್ಳಾಡಿ, ನೂಕಾಡಿದರು. ಪೊಲೀಸ್ ಜೀಪ್ ಅಡ್ಡಗಟ್ಟಿದ ಗ್ರಾಮದ ಒಂದು ಗುಂಪು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿತು.
‘ಮತಗಟ್ಟೆ ಬಳಿ ಉಪಹಾರ ಮತ್ತು ಮದ್ಯ ಹಂಚುತ್ತಿದ್ದರು. ನೀತಿ ಸಂಹಿತೆ ಉಲ್ಲಂಘಿಸದಂತೆ ಹೇಳಿದ್ದಕ್ಕೆ ಪೊಲೀಸ್ ಜೀಪ್
ಅಡ್ಡಗಟ್ಟಿ ನನಗೆ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿ, ಜೀಪ್ ಸುಟ್ಟು ಹಾಕುವುದಾಗಿ ಹೆದರಿಸಿದರು. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಐವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎಸ್‌ಐ ಅಜಯ್ ಕುಮಾರ್ ತಿಳಿಸಿದರು.
ಸಕಲೇಶಪುರ ತಾಲ್ಲೂಕಿನ ಆಚಂಗಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಬಾಗೇಶ್ ಮತ್ತು ಸ್ನೇಹಿತ ಪ್ರವೀಣ್ ಹಾಗೂ ಸಹಚರರ ನಡುವೆ ಸೋಮವಾರ ರಾತ್ರಿ ಗಲಾಟೆ ನಡೆದು, ಪರಸ್ಪರ ಹಲ್ಲೆ ನಡೆಸಿದ್ದಾರೆ. ಬಾಗೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಚಿತ್ರದುರ್ಗ: ತಾಲ್ಲೂಕಿನ ಭರಮಸಾಗರ ಹೋಬಳಿಯ ಆಜಾದ್ ನಗರದಲ್ಲಿ ಮತದಾನದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಕಲ್ಲು ತೂರಾಟ ನಡೆದಿದೆ. ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.
ಮತಗಟ್ಟೆ ಸಮೀಪ ಸೇರಿದ್ದ ಎರಡು ಗುಂಪುಗಳ ನಡುವೆ ಮಂಗಳವಾರ ಮಧ್ಯಾಹ್ನ ವಾಗ್ವಾದ ನಡೆದಿದೆ. ಮತದಾರರನ್ನು ಮತಗಟ್ಟೆಗೆ ಕರೆತರುವ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಕಲ್ಲು ತೂರಾಟದಲ್ಲಿ ಹಲವರಿಗೆ ಗಾಯಗಳಾಗಿವೆ.
ಏಕಾಏಕಿ ನಡೆದ ಈ ಬೆಳವಣಿಗೆಯಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಭರಮಸಾಗರ ಠಾಣೆಯ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿ ವ್ಯಾಪ್ತಿಯ ದೊಡ್ಡತೇಕಲವಟ್ಟಿ ಗ್ರಾಮದಲ್ಲಿ ಸಂಜೆ 5 ಗಂಟೆಯ ಬಳಿಕವೂ ಮತದಾನ ನಡೆಯಿತು. ಒಂದೇ ಮತಗಟ್ಟೆಯಲ್ಲಿ 950ಕ್ಕೂ ಹೆಚ್ಚು ಮತದಾರರು ಇದ್ದಾರೆ. ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ನಂತರ ಬಿರುಸು ಪಡೆಯಿತು.
ಸಂಜೆ 5ಕ್ಕೆ ಮತಗಟ್ಟೆ ಸ್ಥಾಪಿಸಿದ್ದ ಶಾಲಾ ಆವರಣದ ಗೇಟ್ ಹಾಕಲಾಯಿತು. ಗೇಟಿನ ಒಳಗೆ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಯಿತು.
ಕಲಬುರ್ಗಿ: ಗೋಪ್ಯ ಮತದಾನ ನಿಯಮವನ್ನು ಉಲ್ಲಂಘಿಸಿ ತಾಲ್ಲೂಕಿನ ಜಂಬಗಾ (ಬಿ) ಗ್ರಾಮದ ವ್ಯಕ್ತಿಯೊಬ್ಬರು ತಾವು ಮತ ಚಲಾಯಿಸಿದ ಮತಪತ್ರದ ಚಿತ್ರವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಮತದಾನ ಮಂಗಳವಾರ ನಡೆಯಿತು. ಮತದಾನ ಕೇಂದ್ರದಲ್ಲಿ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಿದ್ದರೂ ವ್ಯಕ್ತಿ ಮೊಬೈಲ್ ಒಯ್ದು ತಾವು ಮತಹಾಕಿದ ಮತಪತ್ರದ ಚಿತ್ರ ತೆಗೆದಿದ್ದಾರೆ.
ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬೀಪುರ ಗ್ರಾಮಸ್ಥರು ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಮಂಗಳವಾರ ಚುನಾವಣೆ ಬಹಿಷ್ಕರಿಸಿದರು.
ಕಂಬೀಪುರ ಗ್ರಾಮದ ಒಂದು ಸದಸ್ಯ ಸ್ಥಾನಕ್ಕೆ 3 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಗ್ರಾಮದಲ್ಲಿ ಸುಮಾರು 380 ಮತದಾರರಿದ್ದಾರೆ. ಮಾಲೂರು–ಭಾವನಹಳ್ಳಿ ಮುಖ್ಯರಸ್ತೆಯಿಂದ ಗ್ರಾಮಕ್ಕೆ 3 ಕಿ.ಮೀ ಸಂಪರ್ಕ ರಸ್ತೆ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದ ಗ್ರಾಮಸ್ಥರು ಮತಗಟ್ಟೆಯತ್ತ ಸುಳಿಯಲಿಲ್ಲ.
ಹಿರಿಯ ನಟಿ ಲೀಲಾವತಿ ಮತ್ತು ನಟ ವಿನೋದ್ ರಾಜ್ ಅವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೆಲಮಂಗಲ ತಾಲ್ಲೂಕಿನ ಮೈಲನಹಳ್ಳಿಯ ಮತಗಟ್ಟೆ ಸಂಖ್ಯೆ167ರಲ್ಲಿ ಮತ ಚಲಾಯಿಸಿದರು. ಪ್ರಜಾವಾಣಿ ಚಿತ್ರ -ಬಿ ಎಚ್ ಶಿವಕುಮಾರ್
ಬೀದರ್: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ನಂತರ ಬಿರುಸು ಪಡೆದುಕೊಂಡಿದೆ.
ಜಿಲ್ಲೆಯಲ್ಲಿ ವಿಪರೀತ ಚಳಿ ಇದ್ದ ಕಾರಣ ಬೆಳಿಗ್ಗೆ ಹೆಚ್ಚು ಮತದಾರರು ಮತಗಟ್ಟೆಗಳಿಗೆ ಬರಲಿಲ್ಲ. ಬೆಳಿಗ್ಗೆ 9 ಗಂಟೆಗೆ ಶೇಕಡ 6.13 ರಷ್ಟು, 11 ಗಂಟೆಗೆ 19.59ರಷ್ಟು ಹಾಗೂ ಮಧ್ಯಾಹ್ನ 3 ಗಂಟೆಗೆ ಶೇಕಡ 50ರಷ್ಟು ಮತದಾನವಾಗಿದೆ.
ಬೀದರ್ ಜಿಲ್ಲೆಯಲ್ಲಿ ಅಷ್ಟೇ ಮತಯಂತ್ರ ಬಳಕೆ
‘ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 818 ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಲಾಗುತ್ತಿದೆ. ಮೊದಲ ಹಂತದ ಚುನಾವಣೆಲ್ಲಿ 344 ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಲಾಗಿದ್ದು, ಎಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ತಿಳಿಸಿದರು.
ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಮತಗಟ್ಟೆ 7ರಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮತದಾನ ಎರಡು ತಾಸು ವಿಳಂಬವಾಗಿ ಆರಂಭವಾಯಿತು. ಚುನಾವಾಣಾ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸ್ಥಳಕ್ಕೆ ಭೇಟಿಕೊಟ್ಟು ಗೊಂದಲ ನಿವಾರಿಸಿದರು. ನಂತರ ಸಂಜೆ ಹೆಚ್ಚುವರಿಯಾಗಿ ಎರಡು ತಾಸು ಮತದಾನ ಮಾಡಲು ಅವಕಾಶ ಕಲ್ಪಸಲಾಗುವುದು ಎಂದು ತಹಶೀಲ್ದಾರರು ಭರವಸೆ ನೀಡಿದರು.
ಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿಯ ಮತಗಟ್ಟೆ ಸಂಖ್ಯೆ 14ರಲ್ಲಿ ಇವಿಎಂ ಬಟನ್‌ನಲ್ಲಿ ಸ್ವಲ್ಪ ತಾಂತ್ರಿ ದೋಷ ಕಾಣಿಸಿಕೊಂಡು 10 ನಿಮಿಷ ವಿಳಂಬವಾಗಿ ಮತದಾನ ಆರಂಭವಾಯಿತು.
ಮತ ಚಲಾಯಿಸಿ ಮೃತಪಟ್ಟ ವೃದ್ಧ
ಚಿಟಗುಪ್ಪ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಚಾಂದಪಾಶಾ (99) ಅವರು ಕುಟುಂಬದ ಸದಸ್ಯರೊಂದಿಗೆ ವೀಲಚೇರ್‌ನಲ್ಲಿ ಮತಗಟ್ಟೆಗೆ ಬಂದು ಮತಚಾಲಾಯಿಸಿ ಮನೆಗೆ ತಲುಪಿದ ತಕ್ಷಣ ಮೃತಪಟ್ಟಿದ್ದಾರೆ.
ಹಾವೇರಿ: ಜಿಲ್ಲೆಯ 4 ತಾಲೂಕುಗಳಲ್ಲಿ ಮೊದಲನೇ ಹಂತದ ಮತದಾನ ಆರಂಭಗೊಂಡಿದ್ದು ಎಲ್ಲೆಡೆ ಶಾಂತಿಯುತ ಮತದಾನ ನಡೆಯುತ್ತಿದೆ.
ಮಧ್ಯಾಹ್ನ 3 ರವರೆಗೆ ಶೇ 64.97 ರಷ್ಟು ಮತದಾನ ದಾಖಲಾಗಿದೆ.
ಹಾವೇರಿ ತಾಲ್ಲೂಕಿನಲ್ಲಿ ಶೇ 65.98, ರಾಣೆಬೆನ್ನೂರು ತಾಲ್ಲೂಕಿನಲ್ಲಿ ಶೇ 64.06, ಹಿರೇಕೆರೂರು ತಾಲ್ಲೂಕಿನಲ್ಲಿ ಶೇ 65.72, ರಟ್ಟಿಹಳ್ಳಿ ತಾಲ್ಲೂಕಿನಲ್ಲಿ ಶೇ 64.09 ರಷ್ಟು ಮತದಾನವಾಗಿದೆ.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಶೇ 61.39 ಮತದಾನವಾಗಿದೆ.
ತಾಲ್ಲೂಕುವಾರು ಅಜ್ಜಂಪುರ- ಶೇ 61.4, ಚಿಕ್ಕಮಗಳೂರು-ಶೇ 63.64, ಕಡೂರು- ಶೇ 64.57, ಕೊಪ್ಪ- ಶೇ 55.74, ಮೂಡಿಗೆರೆ- ಶೇ 59.05, ಎನ್.ಆರ್.ಪುರ- ಶೇ 58.65, ಶೃಂಗೇರಿ- ಶೇ 59.45 ಹಾಗೂ ತರೀಕೆರೆ- ಶೇ 61.39 ಮತದಾನವಾಗಿದೆ.
ಕಲಬುರ್ಗಿ: ಜಿಲ್ಲೆಯ ಆರು ತಾಲ್ಲೂಕಿನಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಬೆಳಿಗ್ಗೆ 7ರಿಂದ ಮಧ್ಯಾಹ್ನ 3 ಗಂಟೆವರೆಗೆ ಶೇ 57.63ರಷ್ಟಾಗಿದೆ.
ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ ಮಧ್ಯಾಹ್ನ 3 ರ ವೇಳೆಗೆ ಶೇ 62 ಮತದಾನ ನಡೆದಿದೆ.
ದಾವಣಗೆರೆ: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಂಗಳವಾರ ಮಧ್ಯಾಹ್ನ 3ರ ಹೊತ್ತಿಗೆ ಶೇ 62.52 ಮತದಾನವಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ ಶೇ 61.38 ಹೊನ್ನಾಳಿ ತಾಲ್ಲೂಕಿನಲ್ಲಿ ಶೇ 63.41 ಜಗಳೂರು ತಾಲ್ಲೂಕಿನಲ್ಲಿ ಶೇ 62.76 ಮತದಾನವಾಗಿದೆ.
ಕೊಪ್ಪಳ: ಮುನಿರಾಬಾದ್ ಸಮೀಪದ ಹುಲಿಗಿ ಗ್ರಾಮದಲ್ಲಿ ಚುನಾವಣಾ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಮತದಾನ ಸ್ಥಗಿತವಾಗಿದೆ.
ಕೌಂಟರ್ ಪೋಲಿಯೋ ಉಳಿಸಿಕೊಂಡು ಮತಪತ್ರವನ್ನು ಮಾತ್ರ ಕೊಡಬೇಕಾಗಿದ್ದ ಸಿಬ್ಬಂದಿ ಕೌಂಟರ್ ಪೋಲಿಯೋ ಜೊತೆಗೆ ಮತಪತ್ರವನ್ನು ಹರಿದು ಕೊಟ್ಟಿದ್ದು ಸಮಸ್ಯೆಗೆ ಕಾರಣವಾಗಿದೆ.
ಮತಗಟ್ಟೆ ಸಂಖ್ಯೆ 170 ರಲ್ಲಿ12 ಗಂಟೆಯಿಂದ ಮತದಾನ ಸ್ಥಗಿತವಾಗಿದ್ದು, 3 ಗಂಟೆ ಮೇಲೆ ಚುನಾವಣೆ ಅಧಿಕಾರಿಗಳು ಗೊಂದಲ ಸರಿಮಾಡಿದ್ದರಿಂದ ಮತ್ತೆ ಮತದಾನ ಚಲಾವಣೆಗೆ ಅವಕಾಶ ನೀಡಲಾಯಿತು.
ಸಮೀಪದ ಹಿಟ್ನಾಳ ಗ್ರಾಮದ 1ನೇ ವಾರ್ಡಿನಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಶಾಸಕ ಹಾಲಪ್ಪ ಆಚಾರ ಮತಕೇಂದ್ರಕ್ಕೆ ಬಂದು ಮತ ಚಲಾಯಿಸಿದರು.
ಜಿಲ್ಲೆಯ ಕೊಪ್ಪಳ, ಯಲಬುರ್ಗಾ, ಕುಕನೂರು ತಾಲ್ಲೂಕಿನಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ.
ಸಮೀಪದ ಬಹದ್ದೂರ ಬಂಡಿ ಗ್ರಾಮಕ್ಕೆ ಕಾಂಗ್ರೆಸ್ ಮುಖಂಡರ ದಂಡು ಭೇಟಿ ನೀಡಿ ಚುನಾವಣೆ ಪ್ರಕ್ರಿಯೆ ವೀಕ್ಷಣೆ ನಡೆಸಿದರಲ್ಲದೆ, ಮತಗಟ್ಟೆ ಕೇಂದ್ರದ ಹೊರಗೆ ತಮ್ಮ ಬೆಂಬಲಿಗರನ್ನು ಭೇಟಿ ಮಾಡುತ್ತಿರುವ ದೃಶ್ಯ ಕಂಡು ಬಂತು.
ಬೆಳಿಗ್ಗೆ 11ರ ಸುಮಾರಿಗೆ ಶೇ.8ರಷ್ಟು ಮತದಾನವಾಗಿತ್ತು.
ಚಳಿಯ ಕಾರಣದಿಂದ ಗ್ರಾಮಸ್ಥರು ಹೊತ್ತೇರಿದ ನಂತರ ನಿಧಾನವಾಗಿ ಮತಗಟ್ಟೆ ಕೇಂದ್ರಗಳತ್ತ ಧಾವಿಸುತ್ತಿರುವುದು ಕಂಡು ಬಂತು.
ಹಲಗೇರಿ ಗ್ರಾಮದಲ್ಲಿ ಸಾವಿರಾರು ಜನರು ಮತ ಚಲಾಯಿಸಲು ಸೇರಿದ್ದು, ವಿಶೇಷವಾಗಿತ್ತು.
ತಾಲ್ಲೂಕಿನ ಕುಕನಪಳ್ಳಿ ಗ್ರಾಮದ 1ನೇ ವಾರ್ಡಿನಲ್ಲಿ ಸಂಸದ ಸಂಗಣ್ಣ ಕರಡಿ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಗವಿಸಿದ್ಧಪ್ಪ ಕರಡಿ ಪತ್ನಿ ಸಮೇತ ಮತ ಹಾಕಿದರು.
ಮಧ್ಯಾಹ್ನ 1ಕ್ಕೆ ಶೇ 43ರಷ್ಟು ಮತದಾನವಾಗಿದೆ.
ಕೊಪ್ಪಳ ಶೇ 43.81, ಕುಕನೂರ ಶೇ 45.62, ಯಲಬುರ್ಗಾ ಶೇ 47.61ರಷ್ಟು ಮತದಾನವಾಗಿದೆ.
ಸಂಜೆ 4ರ ನಂತರ ಮತದಾನ ಕೇಂದ್ರದತ್ತ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಬರುತ್ತಿದ್ದಾರೆ.
ಮತದಾನ ಮಾಡದೆ ಇರುವವರನ್ನು ಪತ್ತೆ ಹಚ್ಚಿ ಕರೆದುಕೊಂಡು ಬರುವ ಕೆಲಸವನ್ನು ಅಭ್ಯರ್ಥಿಗಳ ಬೆಂಬಲಿಗರು ಮಾಡುತ್ತಿರುವುದು ಕಂಡು ಬಂತು.
ಮದ್ಯಾಹ್ನ 3 ಗಂಟೆಯ ವರೆಗೆ
ಚಾಮರಾಜನಗರ ಶೇ.67.02
ಗುಂಡ್ಲುಪೇಟೆ ಶೇ.57.25
ಒಟ್ಟಾರೆ ಶೇ 63.04
ವಿಜಯಪುರ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 3ರ ವರೆಗೆ ಶೇ 46.50ರಷ್ಟು ಮತದಾನವಾಗಿದೆ.
ವಿಜಯಪುರ ತಾಲ್ಲೂಕಿನಲ್ಲಿ ಶೇ 50.25, ಬಬಲೇಶ್ವರ ಶೇ 47, ತಿಕೋಟಾ ಶೇ 40, ಬಸವನ ಬಾಗೇವಾಡಿ ಶೇ 43.25, ನಿಡಗುಂದಿ ಶೇ 45, ಕೊಲ್ಹಾರ ಶೇ 51.25, ಮುದ್ದೇಬಿಹಾಳ ಶೇ 46.25 ಮತ್ತು ತಾಳಿಕೋಟೆ ಶೇ 49 ರಷ್ಟು ಮತದಾನವಾಗಿದೆ. ಮತದಾನಕ್ಕೆ ಕೇವಲ ಒಂದು ಗಂಟೆ ಬಾಕಿ ಇದ್ದು, ಮತದಾರರು ಮತಗಟ್ಟೆ ಎದುರು ಸಾಲುಗಟ್ಟಿ ನಿಂತಿದ್ದಾರೆ.
ಹುಣಸಗಿ: ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.
ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಕೆಲ ಮತಗಟ್ಟೆಯಲ್ಲಿ ಶೇ 50 ರಷ್ಟು ಮತದಾನವಾಗಿದೆ.
ಸುರಪುರ: ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಯಾವುದೇ ತೊಂದರೆ, ಅಹಿತಕರ ಘಟನೆ ನಡೆದಿಲ್ಲ. ಮತದಾರರಿಗೆ ಅಂತರದ ಗುರುತು ಹಾಕಲಾಗಿದೆ.
ಸಾನಿಟೈಸಿಂಗ್, ಜ್ವರ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಮತದಾರರು ಮಾಸ್ಕ್ ಧರಿಸದಿರುವುದು ಕಂಡು ಬಂತು. ಮಧ್ಯಾಹ್ನ 2 ಗಂಟೆವರೆಗೆ ಶೇ 48 ರಷ್ಟು ಮತದಾನವಾಗಿದೆ.
ಚಿತ್ರ: ಸುರಪುರ ತಾಲ್ಲೂಕಿನ ಅರಕೇರಾ ಕೆ. ಮತಗಟ್ಟೆಯಲ್ಲಿ ಮತದಾರರು ಸಾಲಿನಲ್ಲಿ ನಿಂತಿರುವುದು.
ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದ ಮತಗಟ್ಟೆ ಬಳಿಯಲ್ಲೇ ಮತದಾರರಿಗೆ ₹500 ಮುಖಬೆಲೆ ನೋಟುಗಳನ್ನು ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ.
ತಾಲ್ಲೂಕು ಕೇಂದ್ರವಾಗಿ ಘೋಷಣೆ ಆಗಿರುವ ಅರಕೇರಾದಲ್ಲಿ 20 ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಗ್ರಾಪಂ ಕೇಂದ್ರವು ಪಟ್ಟಣ ಪಂಚಾಯಿತಿಯಾಗಿ ಬದಲಾಗಲಿದೆ. ಮತಗಟ್ಟೆ ಬಳಿ ಸಾಕಷ್ಟು ಪೊಲೀಸರನ್ನು ನಿಯೋಜಿಸಿದ್ದರೂ ಹಣ ಹಂಚಿಕೆ ಆಗಿದೆ.
ಮಧ್ಯಾಹ್ನ 1 ಗಂಟೆಯ ವರೆಗೆ
ಚಾಮರಾಜನಗರ ಶೇ.51.66
ಗುಂಡ್ಲುಪೇಟೆ ಶೇ.44.55
ಒಟ್ಟಾರೆ ಶೇ 48.77
ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ಪತ್ನಿ ಉಷಾ ಜೊತೆಗೂಡಿ ಮತದಾನ ಮಾಡಿದರು
ರಾಮನಗರ: ಜಿಲ್ಲೆಯ 56 ಗ್ರಾ.ಪಂ.ಗಳಿಗೆ ನಡೆದಿರುವ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 54.07ರಷ್ಟು ಮತದಾನವಾಗಿದೆ.
ರಾಮನಗರ ತಾಲ್ಲೂಕಿನಲ್ಲಿ ಶೇ 56.07ರಷ್ಟು ಮಂದಿ ಮತ ಚಲಾಯಿಸಿದ್ದರೆ, ಕನಕಪುರ ತಾಲ್ಲೂಕಿನಲ್ಲಿ ಶೇ 52.06ರಷ್ಟು ಮತದಾನವಾಗಿದೆ.
ಯಾದಗಿರಿ: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ
1 ಗಂಟೆ ವರೆಗೆ ಶೇ 41.75 ರಷ್ಟು ಮತದಾನವಾಗಿದೆ.
ಸುರಪುರ ತಾಲ್ಲೂಕಿನಲ್ಲಿ ಶೇ 49.87, ಶಹಾಪುರ ತಾಲ್ಲೂಕಿನ ಶೇ 47.08, ಹುಣಸಗಿ ತಾಲ್ಲೂಕಿನ ಶೇ 28.28 ಸೇರಿದಂತೆ ಶೇ 41.75 ರಷ್ಟು ಮತದಾನವಾಗಿದೆ.
ಗದಗ: ಮಧ್ಯಾಹ್ನ 1ರವರೆಗೆ ಗದಗ ತಾಲ್ಲೂಕಿನಲ್ಲಿ ಶೇ. 41.67, ಲಕ್ಷ್ಮೇಶ್ವರ ಶೇ 39.94, ಶಿರಹಟ್ಟಿ ತಾಲ್ಲೂಕಿನಲ್ಲಿ ಶೇ. 42.06ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು ಶೇ 41.22ರಷ್ಟು ಮತದಾನವಾಗಿದೆ.
ಕೆಂಭಾವಿ (ಯಾದಗಿರಿ): ಸಮೀಪದ ಚಿಂಚೋಳಿ ಗ್ರಾಮ ಸೇರಿದಂತೆ ಹಲವೆಡೆ ಅಂತರ ಹಾಗೂ ಮಾಸ್ಕ್ ಇಲ್ಲದೆ ಜನ ಮತದಾನ ಕೆಂದ್ರಕ್ಕೆ ಬಂದು ಮತದಾನ ಮಾಡುತ್ತಿರುವುದು ಕಂಡು ಬಂದಿತು.
ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
ರಾಯಚೂರು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆವರೆಗೂ ಶೇ 41.52 ರಷ್ಟು ಮತದಾನವಾಗಿದೆ.
ರಾಯಚೂರು ತಾಲ್ಲೂಕಿನಲ್ಲಿ ಶೇ 40.47, ದೇವದುರ್ಗ ತಾಲ್ಲೂಕಿನಲ್ಲಿ ಶೇ 42.30, ಮಾನ್ವಿ ತಾಲ್ಲೂಕಿನಲ್ಲಿ ಶೇ 43.38 ಹಾಗೂ ಸಿರವಾರ ತಾಲ್ಲೂಕಿನಲ್ಲಿ ಶೇ 44.59 ರಷ್ಟು ಮತದಾನವಾಗಿದೆ.
ಬೆಳಗಾವಿ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದ್ದು, ಮಧ್ಯಾಹ್ನ 1ರವರೆಗೆ ಶೇ 33.04ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಂಗಳವಾರ ಮಧ್ಯಾಹ್ನ 1ರವರೆಗೆ ಶೇಕಡಾ 49.68 ರಷ್ಟು ಮತದಾನವಾಗಿದೆ.
ಹಾಸನ ತಾಲೂಕಿನಲ್ಲಿ ಶೇ 52.53, ಅರಕಲಗೂಡು ಶೇ 43.73, ಚನ್ನರಾಯಪಟ್ಟಣ ಶೇ 52.21, ಸಕಲೇಶಪುರ ಶೇ 50.38 ಮತದಾನವಾಗಿದೆ.
ಒಟ್ಟು 125 ಗ್ರಾಮ ಪಂಚಾತಿಯಗಳ 1,470 ಸದಸ್ಯ ಸ್ಥಾನಗಳಿಗೆ 3,867 ಮಂದಿ ಸ್ಪರ್ಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಶೇ 44.09 ಮತದಾನವಾಗಿದೆ.
ತಾಲ್ಲೂಕುವಾರು: ಅಜ್ಜಂಪುರ- ಶೇ 41.6, ಚಿಕ್ಕಮಗಳೂರು-ಶೇ 47.72, ಕಡೂರು- ಶೇ 45.55, ಕೊಪ್ಪ- ಶೇ 45.48, ಮೂಡಿಗೆರೆ- ಶೇ 38.03, ಎನ್.ಆರ್.ಪುರ- ಶೇ 43.89, ಶೃಂಗೇರಿ-ಶೇ 50.42 ಹಾಗೂ ತರೀಕೆರೆ- ಶೇ 41.11 ಮತದಾನವಾಗಿದೆ.
ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆಗೆ ಮಧ್ಯಾಹ್ನ 1 ಗಂಟೆವರೆಗೂ ಮಂಡ್ಯದಲ್ಲಿ ಶೇ 48.25ರಷ್ಟು ಮತದಾನವಾಗಿದೆ.
ಮಂಡ್ಯ ತಾಲ್ಲೂಕು ಶೇ 46.49
ಮದ್ದೂರು ತಾಲ್ಲೂಕು ಶೇ 50.03
ಮಳವಳ್ಳಿ ತಾಲ್ಲೂಕು ಶೇ 48.40
ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಗ್ರಾಮದ ಮತಗಟ್ಟೆಯಲ್ಲಿ ಸಂಸದೆ ಸುಮಲತಾ ಮತದಾನ
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ 20, 21 ನೇ ಮತಗಟ್ಟೆಯಲ್ಲಿ ಮತದಾನ ಮತ್ತೆ ಆರಂಭವಾಯಿತು.
20 ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆವರೆಗೆ 905 ಮತದಾರರಲ್ಲಿ 207 ಜನ ಮತದಾನ ಮಾಡಿದ್ದರು.
ವಿಜಯಪುರ ಜಿಲ್ಲೆಯಲ್ಲಿ ಮಧ್ಯಾಹ್ನ 1ರ ವರೆಗೆ ಶೇ 31.59ರಷ್ಟು ಮತದಾನವಾಗಿದೆ.
ಮಧ್ಯಾಹ್ನವಾಗುತ್ತಿದಂತೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಜುಮನಾಳ, ಮುಳವಾಡ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಮೋಹನ ಕುಮಾರಿ ಇದ್ದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಝಾಂಗಟಿಹಾಳ ಗ್ರಾಮದಲ್ಲಿ ಮತದಾರರು ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ
ಕಲಬುರ್ಗಿ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿರುವ ಆರು ತಾಲ್ಲೂಕುಗಳಲ್ಲಿ ಬೆಳಿಗ್ಗೆ 7ರಿಂದ 11ರವರೆಗೆ ಶೇ 24.37 ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.
ಚಿಕ್ಕಮಗಳೂರು: ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೇ 24.30 ಮತದಾನವಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಗ್ರಾಮದ ಮತಗಟ್ಟೆಯಲ್ಲಿ ಮಂಗಳವಾರ 85ರ ಇಳಿ ವಯಸ್ಸಿನ ಅಡಿವೆಮ್ಮ ಮತಕೇಂದ್ರಕ್ಕೆ ಬಂದು ಮತದಾನ ಮಾಡಿದರು.
ಮಸಬಹಂಚಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 4. ಮತದಾನ ಕೇಂದ್ರಗಳನ್ನು 'ಮತದಾರ ಸ್ನೇಹಿ ಮತ ಕೇಂದ್ರ' ಸ್ಥಾಪಿಸಿ ಮಾಸ್ಕ್, ಸ್ಯಾನಿಟೈಸರ್, ಅಂಗವಿಕಲರ ವಾಹನ ಹಾಗೂ ಹಿರಿಯ ನಾಗರಿಕರರಿಗೆ ಆಸನಗಳನ್ನು ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪಿಡಿಒ ಮಹೇಶ್ ತಿಳಿಸಿದರು.
ಹಿರಿಯ ನಟಿ ಲೀಲಾವತಿ ಮತ್ತು ನಟ ವಿನೋದ್ ರಾಜ್ ಅವರು ನೆಲಮಂಗಲ ತಾಲ್ಲೂಕಿನ ಮೈಲನಹಳ್ಳಿಯ ಮತಗಟ್ಟೆ ನಂ 167ರಲ್ಲಿ ಮತ ಚಲಾಯಿಸಿದರು. ಚಿತ್ರ- ಬಿ ಎಚ್ ಶಿವಕುಮಾರ್
ಬೆಳಗಾವಿ: ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮಂದಗತಿಯಲ್ಲಿ ಸಾಗಿದೆ.
ಬೆಳಿಗ್ಗೆ 11 ರವರೆಗೆ ಶೇ 18.44ರಷ್ಟು ಮತದಾನವಾಗಿದೆ. ಮೂಡಲಗಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ 24ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ರಾಯಚೂರು: ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆವರೆಗೂ ಶೇ 23.48 ರಷ್ಟು ಮತದಾನವಾಗಿದೆ.
ರಾಯಚೂರು ತಾಲ್ಲೂಕಿನಲ್ಲಿ ಶೇ 24.69, ದೇವದುರ್ಗ ತಾಲ್ಲೂಕಿನಲ್ಲಿ ಶೇ 21.15, ಮಾನ್ವಿ ತಾಲ್ಲೂಕಿನಲ್ಲಿ ಶೇ 25.55 ಹಾಗೂ ಸಿರವಾರ ತಾಲ್ಲೂಕಿನಲ್ಲಿ ಶೇ 25.07 ರಷ್ಟು ಮತದಾನವಾಗಿದೆ.
ಉಡುಪಿ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದ್ದು, 11 ಗಂಟೆಯ ಹೊತ್ತಿಗೆ ಜಿಲ್ಲೆಯಲ್ಲಿ ಶೇ 32.20 ಮತದಾನ ನಡೆದಿದೆ. ಉಡುಪಿಯಲ್ಲಿ 33, ಹೆಬ್ರಿ 34, ಬ್ರಹ್ಮಾವರ 33, ಬೈಂದೂರು 28 ಮತದಾನವಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನಾಗಪುರ ಹಾಡಿಯ ನಿವಾಸಿ ರಾಜು ಮತದಾನ ಮಾಡಿದ ಬಳಿಕ ಗುರುತಿನ ಚೀಟಿ ತೋರಿಸಿದರು
ಹೊಸಪೇಟೆ ತಾಲ್ಲೂಕಿನ ಹೊಸೂರಿನಲ್ಲಿ ಬಿ.ಎಸ್. ತರುಣ್ ಮೊದಲ ಬಾರಿಗೆ ಹಕ್ಕು ಚಲಾಯಿಸಿದರು. ಇಂದೇ ಅವರ 19ನೇ ವರ್ಷದ ಜನ್ಮದಿನ. ಹೊಸೂರು ಪಂಚಾಯಿತಿಯ ಪರಿಶಿಷ್ಟ ಪಂಗಡ ಮಹಿಳೆ ಸ್ಥಾನಕ್ಕೆ ಇವರ ಅತ್ತಿಗೆ ಕಿಚಡಿ ಜಯಪದ್ಮಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ನಡೆದಿರುವ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬೆಳಿಗ್ಗೆ 11 ರ ವೇಳೆಗೆ ಶೇ 32.01 ಮತದಾನವಾಗಿದೆ.
ಹಾವೇರಿ ಜಿಲ್ಲೆಯ 4 ತಾಲೂಕುಗಳಲ್ಲಿ ಮೊದಲನೇ ಹಂತದ ಮತದಾನ ಆರಂಭಗೊಂಡಿದ್ದು ಎಲ್ಲೆಡೆ ಶಾಂತಿಯುತ ಮತದಾನ ನಡೆಯುತ್ತಿದೆ.
ಬೆಳಗ್ಗೆ 7 ರಿಂದ 11 ರವರೆಗೆ ಶೇ 20.64ರಷ್ಟು ಮತದಾನವಾಗಿದೆ. ಹಾವೇರಿ ತಾಲೂಕಿನಲ್ಲಿ ಶೇ 17.92, ರಾಣೆಬೆನ್ನೂರು ಶೇ 21.86, ಹಿರೇಕೆರೂರು ಶೇ 22.20, ರಟ್ಟಿಹಳ್ಳಿ ಶೇ 22.02 ರಷ್ಟು ಮತದಾನವಾಗಿದೆ.
ಚಾಮರಾಜನಗರ ತಾಲ್ಲೂಕಿನ ನಲ್ಲೂರಿನ 95 ವರ್ಷದ ಬಸಮ್ಮ ಅವರು ಸೊಸೆ ಹಾಗೂ ಮೊಮ್ಮಗಳ ನೆರವಿನಿಂದ ಮತದಾನ ಮಾಡಿ ಬಂದರು.
ಮುಧೋಳ ತಾಲ್ಲೂಕಿನ ಉತ್ತೂರು ಗ್ರಾಮದ ಭಾಗದ ಸಂಖ್ಯೆ 84ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ಬಿ. ತಿಮ್ಮಾಪುರ ಮತ ಚಲಾಯಿಸಿದರು.
ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದ ಮತಗಟ್ಟೆಗೆ ವಯೋವೃದ್ಧ ಮತದಾರರನ್ನು ಎತ್ತಿಕೊಂಡು ಬಂದ ಕುಟುಂಬಸ್ಥರು
ಮಂಡ್ಯ ಜಿಲ್ಲೆಯಲ್ಲಿ ಬೆಳಗ್ಗೆ 11ಗಂಟೆವರೆಗೆ ಶೇ 25.16 ರಷ್ಟು ಮತದಾನವಾಗಿದೆ.
ಮಂಡ್ಯ ತಾಲ್ಲೂಕು ಶೇ 23.32
ಮದ್ದೂರು ತಾಲ್ಲೂಕು ಶೇ 27.23
ಮಳವಳ್ಳಿ ತಾಲ್ಲೂಕು ಶೇ 25.11
ಚಾಮರಾಜನಗರ: ಬೆಳಿಗ್ಗೆ 11 ಗಂಟೆವರೆಗೆ ಚಾಮರಾಜನಗರ ತಾಲ್ಲೂಕಿನಲ್ಲಿ ಶೇ 27.76, ಗುಂಡ್ಲುಪೇಟೆ ತಾಲ್ಲೂಕು ಶೇ 20.52 ಮತದಾನವಾಗಿದೆ.
ಒಟ್ಟು ಶೇ 24.81ರಷ್ಟು ಮತದಾನವಾಗಿದೆ.
ಶಾಸಕ ಎಚ್.ಕೆ.ಪಾಟೀಲ ಅವರು ಹುಲಕೋಟಿ ಗ್ರಾಮದ ಮತಗಟ್ಟೆ 53ರಲ್ಲಿ ಮತದಾನ ಮಾಡಿದರು
ಮೊದಲ ಹಂತದ ಗ್ರಾ.ಪಂ ಚುನಾವಣೆಯಲ್ಲಿ ಬಾಗಲಕೋಟೆಯಲ್ಲಿ ಮುಂಜಾನೆ 9ರ ವೇಳೆಗೆ ಶೇ 8.1 ರಷ್ಟು ಮತದಾನವಾಗಿದೆ.
11 ಗಂಟೆವರೆಗೆ ಶೇ 25.15 ರಷ್ಟು ಮತದಾನವಾಗಿದೆ.
ಗದಗ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಮತದಾನ ಪ್ರಕ್ರಿಯೆ ಚುರುಕಿನಿಂದ ನಡೆಯುತ್ತಿದ್ದು, ಬೆಳಿಗ್ಗೆ 11ರವರೆಗೆ ಶೇ. 22.86 ರಷ್ಟು ಮತದಾನವಾಗಿದೆ.
ಗದಗ ತಾಲೂಕಿನಲ್ಲಿ ಶೇ 22.82, ಲಕ್ಷ್ಮೇಶ್ವರ ಶೇ 24.10, ಶಿರಹಟ್ಟಿ ಶೇ 21.69 ಮತದಾನವಾಗಿದೆ.
ಚಾಮರಾಜನಗರ: ಬೆಳಿಗ್ಗೆ 9 ಗಂಟೆಯ ನಂತರ ಬಿರುಸಿನ ಮತದಾನವಾಗುತ್ತಿದೆ. 9 ಗಂಟೆಯ ವರೆಗೆ ಶೇ 6.75 ರಷ್ಟು ಮತದಾನವಾಗಿದೆ.
ಬಹುತೇಕ ಕಡೆಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಮತದಾರರು ಕೂಡ ಹುಮ್ಮಸ್ಸಿನಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸ್ಯಾನಿಟೈಸರ್ ಒದಗಿಸಲಾಗುತ್ತಿದೆ. ಮಾಸ್ಕ್ ಧರಿಸದೇ ಇರುವವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
ಹೊಸಪೇಟೆ ತಾಲ್ಲೂಕಿನ ಹೊಸೂರಿನ ಮತಗಟ್ಟೆ ಮುಂದೆ ಸೇರಿದ್ದ ಗ್ರಾಮಸ್ಥರನ್ನು ಪೊಲೀಸರು ಕಳುಹಿಸಿದರು
ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಂಗಳವಾರ ಬೆಳಿಗ್ಗೆ 11ರ ಹೊತ್ತಿಗೆ ಶೇ 18.38 ಮತದಾನವಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ ಶೇ 23.58 ಹೊನ್ನಾಳಿ ತಾಲ್ಲೂಕಿನಲ್ಲಿ ಶೇ 17.50 ಜಗಳೂರು ತಾಲ್ಲೂಕಿನಲ್ಲಿ ಶೇ 14 ಮತದಾನವಾಗಿದೆ.
ಮೂರು ತಾಲ್ಲೂಕುಗಳ 88 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯುತ್ತಿದೆ.
ಹಾವೇರಿ ಜಿಲ್ಲೆಯ 4 ತಾಲೂಕುಗಳಲ್ಲಿ ಮೊದಲನೇ ಹಂತದ ಮತದಾನ ಆರಂಭಗೊಂಡಿದ್ದು ಎಲ್ಲೆಡೆ ಶಾಂತಿಯುತ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ರಿಂದ 9ರವರೆಗೆ ಶೇ. 5.75 ರಷ್ಟು ಮತದಾನ ದಾಖಲಾಗಿದೆ.
ಹಾವೇರಿ ತಾಲೂಕಿನಲ್ಲಿ ಶೇ. 4.87, ರಾಣೆಬೆನ್ನೂರು ಶೇ 6.16, ಹಿರೇಕೆರೂರು ಶೇ 5.6, ರಟ್ಟಿಹಳ್ಳಿ ಶೇ 6.56 ರಷ್ಟು ಮತದಾನವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತ ವಾಗಿ ನಡೆದಿದ್ದು, ಬೆಳಿಗ್ಗೆ 11 ರ ವರೆಗೆ ಶೇ 19.25ರಷ್ಟು ಮತದಾನವಾಗಿದೆ. ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.
ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದ ಮತಗಟ್ಟೆಗೆ ಅಂಗವಿಕಲರೊಬ್ಬರು ಮತದಾನ ಮಾಡಲು ಬಂದ ದೃಶ್ಯ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಆನಿಗೋಳ ಗ್ರಾಮದ ಮತಗಟ್ಟೆಯಲ್ಲಿ ಸುತ್ತುವರಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜೂಟಮರಡಿ ಗ್ರಾಮದ ಮತಗಟ್ಟೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಜೊತೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಲ್ಲದೆ, ಪೊಲೀಸ್ ಜೀಪ್ ಮೇಲೆ ಕಲ್ಲುತೂರಿದ ಘಟನೆ ನಡೆದಿದೆ.
ಮತಗಟ್ಟೆ ಆವರಣದಲ್ಲಿ ಪಿಎಸ್ ಐ ಜೊತೆ ವಾಗ್ವಾದ ಮಾಡಿದವರು ಬಿಜೆಪಿಯಲ್ಲಿ ಪ್ರಭಾವಿ ವ್ಯಕ್ತಿ ಆಗಿದ್ದಾರೆ. ಮಧ್ಯೆ ಪ್ರವೇಶಿಸಿ ಮಾತನಾಡಿದ ಹೆಡ್ ಕಾನ್ಸ್ ಟೇಬಲ್ ಚನ್ನಬಸಪ್ಪ ಮೇಲೆ ಹಲ್ಲೆ ಮಾಡಲಾಗಿದೆ.
ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಲಿಂಗಸುಗೂರು ಡಿವೈ ಎಸ್ ಪಿ ಎಸ್.ಎಸ್. ಹುಲ್ಲೂರ ಸ್ಥಳದಲ್ಲಿದ್ದು ಪರಿಸ್ಥಿತಿ ನಿರ್ವಹಿಸುತ್ತಿದ್ದಾರೆ. ಮತದಾನಕ್ಕೆ ಯಾವುದೇ ತೊಂದರೆ ಅಗದಂತೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಮಠದಕುರಬರಹಟ್ಟಿ ಮತಗಟ್ಟೆಯಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ,
ಭೋವಿಗುರುಪೀಠ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾದರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಹಾಗೂ ಬಸವ ಹರಳಯ್ಯ ಸ್ವಾಮೀಜಿ ಮತದಾನ ಮಾಡಿದರು.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು ಬೆಳಿಗ್ಗೆ 10 ಗಂಟೆ ವೇಳೆಗೆ ಶೇ 14ರಷ್ಟು ಮತದಾನವಾಗಿದೆ.
ಕುಂಬೂರು ಮತಗಟ್ಟೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ಮತದಾನ ಮಾಡಿದರು. ರಂಜನ್ ಪತ್ನಿ ಶೈಲಾ ಅಪ್ಪಚ್ಚು ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಯಾದಗಿರಿ ಜಿಲ್ಲೆಯ ಮೊದಲ ಹಂತದ ಚುನಾವಣೆಯಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ವರೆಗೆ ಶೇ 9.56 ರಷ್ಟು ಮತದಾನವಾಗಿದೆ.
ಶೇಕಡವಾರು ವಿವರ: ಸುರಪುರ ತಾಲ್ಲೂಕಿನಲ್ಲಿ ಶೇ 10.1, ಶಹಾಪುರ ತಾಲ್ಲೂಕಿನಲ್ಲಿ ಶೇ 8.92, ಹುಣಸಗಿ ತಾಲ್ಲೂಕಿನಲ್ಲಿ 9.6 ಒಟ್ಟಾರೆ ಜಿಲ್ಲೆಯಲ್ಲಿ ಶೇ 9.6 ರಷ್ಟು ಮತದಾನವಾಗಿದೆ.
3 ತಾಲ್ಲೂಕುಗಳಲ್ಲಿ 15,821 ಪುರುಷ ಮತದಾರರು, 12,015 ಮಹಿಳಾ ಮತದಾರರು ತಮ್ಮಹಕ್ಕು ಚಲಾಯಿಸಿದ್ದಾರೆ.
ಬಾಗಲಕೋಟೆ: ಬೀಳಗಿ ತಾಲ್ಲೂಕಿನ ತುಂಬರಮಟ್ಟಿಯಲ್ಲಿ ಕೊರೆಯುವ ಚಳಿಯಲ್ಲಿ ನಡುಗುತ್ತಲೇ ಮತದಾನ ಕೇಂದ್ರಕ್ಕೆ ಬಂದ 90ರ ವೃದ್ಧೆ ಮತ ಚಲಾಯಿಸಿ ಗಮನ ಸೆಳೆದರು.
ಕೈ ಕಾಲು ನಡುಗುತ್ತಿದ್ದರೂ ಮತ ಹಾಕಿ ತೆರಳಿದರು. ಮೊಮ್ಮಕ್ಕಳ ಜೊತೆ ಬೈಕ್ನಲ್ಲಿ ಬಂದ ಸೋಮವ್ವ ಮತ ಹಾಕಿದರು.
ರಾಯಚೂರು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 9 ಗಂಟೆವರೆಗೂ ಶೇ 8.84 ರಷ್ಟು ಮತದಾನವಾಗಿದೆ.
ರಾಯಚೂರು ತಾಲ್ಲೂಕಿನಲ್ಲಿ ಶೇ 7.21, ದೇವದುರ್ಗ ತಾಲ್ಲೂಕಿನಲ್ಲಿ ಶೇ 7.38, ಮಾನ್ವಿ ತಾಲ್ಲೂಕಿನಲ್ಲಿ ಶೇ 10.09 ಹಾಗೂ ಸಿರವಾರ ತಾಲ್ಲೂಕಿನಲ್ಲಿ ಶೇ 9.23 ರಷ್ಟು ಮತದಾನವಾಗಿದೆ.
ಕಲಬುರ್ಗಿ ಜಿಲ್ಲೆಯಲ್ಲಿ ಬೆಳಿಗ್ಗೆ 7ರಿಂದ 9ರ ವರೆಗಿನ ಮತದಾನ
ಶೇ 6.49ರಷ್ಟು ಮತದಾನವಾಗಿದೆ.
ಕಲಬುರ್ಗಿ ತಾಲ್ಲೂಕಿನ ಭೀಮಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರಿ ಭೋಸಗಾ ಗ್ರಾಮದಲ್ಲಿ ವೃದ್ಧರೊಬ್ಬರು ಮತಗಟ್ಟೆಗೆ ಬಂದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಥರ್ಮಲ್ ಗನ್ ನಿಂದ ಜ್ವರ ತಪಾಸಣೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಮೂಡಲಗಿ ಭಾಗದಲ್ಲಿ ತಾಲ್ಲೂಕಿನ
ಅವರಾದಿ ಗ್ರಾಮದಲ್ಲಿ 98 ವೃದ್ಧೆ ಮತದಾನ ಮಾಡಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಮತಗಟ್ಟೆ ಎದುರು ಕುಳಿತ ನರಸೇಗೌಡ ಎಂಬುವವರು ನನಗೆ ಯಾರು ಹೆಚ್ಚಿಗೆ ಹಣ ಕೊಡುವರೋ ಅವರಿಗೆ ಮತ ಎಂದು ಬಹಿರಂಗವಾಗಿ ಘೋಷಿಸುತ್ತಿದ್ದಾರೆ
ರಾಮನಗರ: ಜಿಲ್ಲೆಯ ಎರಡು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 9ರವರೆಗೆ ಶೇ 10.48ರಷ್ಟು ಮತದಾನವಾಗಿದೆ.
ರಾಮನಗರ ತಾಲ್ಲೂಕಿನ 20 ಪಂಚಾಯಿತಿಗಳಲ್ಲಿ ಶೇ 11 ರಷ್ಟು ಮತದಾರರು ಹಾಗೂ ಕನಕಪುರ ತಾಲ್ಲೂಕಿನಲ್ಲಿ ಶೇ 10.45 ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ದಿ. ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಚ. ಅಂಗಡಿ ವ್ಹೀಲ್ ಚೇರ್ ಸಹಾಯದಿಂದ ಬಂದು ಮತ ಹಕ್ಕು ಚಲಾಯಿಸಿದರು.
ಕನಕಪುರ ತಾಲ್ಲೂಕಿನ ಹೊಸದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏರಂಗೆರೆಯ ಮತಗಟ್ಟೆಯಲ್ಲಿ ಗಲಾಟೆ ನಡೆದಿದೆ.
ಅಭ್ಯರ್ಥಿಯೊಬ್ಬರ ಪತಿ ಮತದಾರರಿಗೆ ಕಣ್ಣು ಕಾಣಿಸುವುದಿಲ್ಲ. ಕೈ ಸರಿ ಇಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಿ, ಮತದಾರರೊಂದಿಗೆ ತಾನೇ ಹೋಗಿ ಮತ ಚಲಾಯಿಸುತ್ತಿದ್ದ. ಇದಕ್ಕೆ ಎದುರಾಳಿ ಬಣದವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ಕೈಕೈ ಮಿಲಾಯಿಸುವ ಹಂತ ತಲುಪಿತು.
ಇದರಿಂದಾಗಿ ಮತದಾನ ಕೆಲ ಕಾಲ ಸ್ಥಗಿತಗೊಂಡಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಮತದಾನ ಪ್ರಕ್ರಿಯೆ ಮುಂದುವರಿಯಿತು.
ಕಾರವಾರ ತಾಲ್ಲೂಕಿನ ಶಿರವಾಡ ಪಬ್ಲಿಕ್ ಶಾಲೆಯ ಮತಗಟ್ಟೆಯ ನಿಷೇಧಿತ ಪ್ರದೇಶಕ್ಕೆ ವಾಹನ ತಂದು ವಾಗ್ವಾದ ಮಾಡಿದ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಾಲೆಯಲ್ಲಿ ನಾಲ್ಕು ಸೂಕ್ಷ್ಮ ಮತಗಟ್ಟೆಗಳಿವೆ. ನಿಯಮದಂತೆ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೆ, ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಇದನ್ನು ಪಾಲಿಸಲಿಲ್ಲ. ನಿಷೇಧಿತ ವಲಯಕ್ಕೆ ಕಾರಿನಲ್ಲಿ ಬಂದರು. ಈ ವೇಳೆ ಪೊಲೀಸರು ವಾಹನ ತೆಗೆಯುವಂತೆ ಸೂಚಿಸಿದಾಗ ವಾಗ್ವಾದಕ್ಕಿಳಿದರು.
ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಲು ಮುಂದಾದರು. ಇದನ್ನು ಗಮನಿಸಿದ ಗ್ರಾಮೀಣ ಠಾಣೆ ಇನ್ ಸ್ಪೆಕ್ಟರ್ ರೇವಣಸಿದ್ದಪ್ಪ ಹಾಗೂ ಸಿಬ್ಬಂದಿ ತಡೆದರು. ಕಾರಿನಿಂದ ಇಳಿಸಿ ವಶಕ್ಕೆ ಪಡೆದರು.
ಕಲಬುರ್ಗಿ ತಾಲ್ಲೂಕಿನ ಭೀಮಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆರಿಭೋಸಗಾ ಗ್ರಾಮದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಯುವಕರು
ತುಮಕೂರಿನ ಹೆಬ್ಬೂರು, ನಾಗವಲ್ಲಿ ಮತಗಟ್ಟೆಗೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯಪುರ: ಜಿಲ್ಲೆಯ ತೊರವಿ ಗ್ರಾಮ ಪಂಚಾಯ್ತಿಯಲ್ಲಿ ಮತದಾರರನ್ನು ಆಟೊ, ಟಂಟಂಗಳಲ್ಲಿ ಮತಗಟ್ಟೆಗೆ ಕರೆದುಕೊಂಡು ಬಂದು ವೋಟ್ ಹಾಕಿಸುತ್ತಿರುವ ದೃಶ್ಯ ಕಂಡುಬಂದಿತು.
ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನರು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ. ಈ ಚುನಾವಣೆಯಲ್ಲಿ ಜನರು ಒಳ್ಳೆಯ ತೀರ್ಪು ನೀಡುವರು ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಬಳ್ಳಾರಿ; ತಾಲ್ಲೂಕಿನ ಶಂಕರಬಂಡೆ ಗ್ರಾಮ ಪಂಚಾಯತಿ ಯ 7ನೇ ವಾರ್ಡ್ ನ ತೊಲಮಾಮಿಡಿ ಗ್ರಾಮದ ಅಭ್ಯರ್ಥಿ ಪದ್ಮಾವತಿ ಅವರಿಗೆ ನೀಡಲಾಗಿದ್ದ ಮಡಿಕೆ ಚಿಹ್ನೆಯ ಬದಲಿಗೆ ಮತಪತ್ರದಲ್ಲಿ ಸಿಲಿಂಡರ್ ಚಿಹ್ನೆ ಬಂದಿದ್ದು ಅಭ್ಯರ್ಥಿ ಆಗ್ರಹದ ಮೇರೆಗೆ ಮತದಾನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ದಾವಣಗೆರೆ: ತಾಲ್ಲೂಕಿನ ಆನಗೋಡು ಹೋಬಳಿಯ ಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಮತಗಟ್ಟೆ ಸಂಖ್ಯೆ ಅದಲು ಬದಲಾಗಿ ಗೊಂದಲ ಉಂಟಾಗಿದೆ. ಮತದಾನವೇ ಆರಂಭಗೊಂಡಿಲ್ಲ.
ಬೆಳಗಾವಿ: ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮಂದಗತಿಯಲ್ಲಿ ನಡೆದಿದೆ. ಬೆಳಿಗ್ಗೆ 7ರಿಂದ 9ರವರೆಗೆ ಶೇ 7.2ರಷ್ಟು ಮತದಾನವಾಗಿದೆ. ಬೆಳಗಾವಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ 10ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದ ಮತಗಟ್ಟೆಯಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸುವುದು ಕಂಡು ಬರಲಿಲ್ಲ. ಮತದಾರರು ಅಂತರ ಕಾಯ್ದುಕೊಳ್ಳುತ್ತಿಲ್ಲ. ಪೊಲೀಸರು ತಲೆಕೆಡಿಸಿಕೊಳ್ಳುತ್ತಿಲ್ಲ.
ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಶೇ 7.10ರಷ್ಟು ಮತದಾನವಾಗಿದೆ. 5.27 ಲಕ್ಷ ಮತದಾರರ ಪೈಕಿ 37,088 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ ತಾಲ್ಲೂಕಿನ ಮಠದ ಕುರುಬರಹಟ್ಟಿ ಮತಗಟ್ಟೆಯಲ್ಲಿ ಮತಚಲಾಯಿಸಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಉದ್ದೇಹೊಸಕೆರೆ ಮತಗಟ್ಟೆ ಸಂಖ್ಯೆ 94ರಲ್ಲಿ 70 ವರ್ಷದ ರಾಮಣ್ಣ ಅವರು ಗಾಲಿ ಕುರ್ಚಿಯಲ್ಲಿ ಬಂದು ಮತಚಲಾಯಿಸಿದರು
ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಗಣದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ತುಪ್ಪದೂರ ಗ್ರಾಮದ ಮತಗಟ್ಟೆಯಲ್ಲಿ ಮತಪತ್ರದಲ್ಲಿನ ದೋಷ ಕಾರಣದಿಂದ ಮತದಾನ ಸ್ಥಗಿತಗೊಳಿಸಲಾಗಿದೆ.
ವಿಜಯಪುರ: ವಿಜಯಪುರ ಉಪ ವಿಭಾಗ ವ್ಯಾಪ್ತಿಯ ಎಂಟು ತಾಲ್ಲೂಕುಗಳ 111 ಗ್ರಾಮ ಪಂಚಾಯ್ತಿಗಳಲ್ಲಿ ಬೆಳಿಗ್ಗೆ 9ರ ವರೆಗೆ ಶೇ 11ರಷ್ಟು ಮತದಾನವಾಗಿದೆ.
ಕಮಲಾಪುರ (ಕಲಬುರ್ಗಿ ಜಿಲ್ಲೆ): ಚಿಹ್ನೆ ಬದಲಾವಣೆಯಾಗಿದ್ದರಿಂದ ತಾಲ್ಲೂಕಿನ ಶ್ರೀಚಂದ್ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡ್‍ನಲ್ಲಿ ಮತದಾನ ಸ್ಥಗಿತಗೊಂಡಿದೆ.
'ನನಗೆ ಹಲ್ಲುಜ್ಜುವ ಪೇಸ್ಟ್ ಚಿಹ್ನೆ ನೀಡಲಾಗಿತ್ತು. ಈಗಾಗಲೇ ಇದೇ ಚಿಹ್ನೆ ಮೂಲಕ ಪ್ರಚಾರ ಕೈಗೊಂಡಿದ್ದೇನೆ. ಆದರೆ ಮತ ಪತ್ರದಲ್ಲಿ ಹಲ್ಲುಜ್ಜುವ ಬ್ರಷ್ ಪ್ರಿಂಟ್ ಆಗಿದೆ' ಎಂದು ಅಭ್ಯರ್ಥಿ ಗಜಾನಂದ ದತ್ತಾಪ್ರಸಾದ ಎಂಬುವವ ತಕರಾರು ತೆಗೆದಾಗ ಕೆಲಕಾಲ ಮತದಾನ ಸ್ಥಗಿತಗೊಳಿಸಲಾಗಿದೆ.
ಕಾರವಾರ ತಾಲ್ಲೂಕಿನ ಅರಗಾ ಗ್ರಾಮದ ಮತಗಟ್ಟೆಯಲ್ಲಿ ಮತದಾನಕ್ಕೆ ಬಂದ ಮತದಾರರ ಆರೋಗ್ಯ ಪರಿಶೀಲನೆ ಮಾಡಲಾಯಿತು
ಕಾರವಾರ: ಜಿಲ್ಲೆಯ ಕರಾವಳಿಯ ಐದು ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಯಲ್ಲಿ ಬೆಳಿಗ್ಗೆ 10 ಗಂಟೆಯವರೆಗೆ ಶೇ 9.67ರಷ್ಟು ಮತದಾನವಾಗಿದೆ.
ರಾಮನಗರ ಜಿಲ್ಲೆಯ ರಾಮನಗರ ಹಾಗೂ ಕನಕಪುರ ತಾಲ್ಲೂಕಿನ 56 ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಬಿರುಸಿನ ಮತದಾನ ನಡೆದಿದೆ. ಒಟ್ಟು 1987 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಮತಗಟ್ಟೆಗೆ ಬರುವ ಪ್ರತಿ ಮತದಾರರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಕೈಗೆ ಸ್ಯಾನಿಟೈಸರ್ ನೀಡಿ ಒಳಗೆ ಬಿಡಲಾಗುತ್ತಿದೆ.
ಮತಗಟ್ಟೆಗಳ ಮುಂದೆ ಜನರ ಸಾಲು ಇದ್ದು, ಹಿರಿಯರೂ ಮತದಾನಕ್ಕೆ ಉತ್ಸಾಹ ತೋರಿದ್ದಾರೆ. ಚುನಾವಣಾ ಕಾರ್ಯಕ್ಕೆಂದು ಜಿಲ್ಲಾಡಳಿತವು 2480 ಸಿಬ್ಬಂದಿ ಹಾಗೂ 1200 ಪೊಲೀಸರನ್ನು ನಿಯೋಜಿಸಿದೆ.
ಬಳ್ಳಾರಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ನಡೆದಿರುವ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬೆಳಿಗ್ಗೆ 9 ರ ವೇಳೆಗೆ ಶೇ 12.9 ಮತದಾನವಾಗಿದೆ.
ದಾವಣಗೆರೆ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಂಗಳವಾರ ಬೆಳಿಗ್ಗೆ 9ರ ಹೊತ್ತಿಗೆ ಶೇ 5.85 ಮತದಾನವಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ ಶೇ 8.62 ಹೊನ್ನಾಳಿ ತಾಲ್ಲೂಕಿನಲ್ಲಿ ಶೇ 4.95 ಜಗಳೂರು ತಾಲ್ಲೂಕಿನಲ್ಲಿ ಶೇ 4 ಮತದಾನವಾಗಿದೆ.
ಮೂರು ತಾಲ್ಲೂಕುಗಳ 88 ಗ್ರಾಮ ಪಂಚಾಯಿತಿಗಳಿಗೆ ಬೆಳಿಗ್ಗೆ 7 ಕ್ಕೆ ಮತದಾನ ಆರಂಭಗೊಂಡಿತು. ಸಂಜೆ 5 ಕ್ಕೆ ಮುಗಿಯಲಿದೆ.
ಮಂಗಳೂರು ತಾಲ್ಲೂಕಿನ ತಲಪಾಡಿಯಲ್ಲಿ ಮತದಾರರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು.
ಬಳ್ಳಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೋವಿಡ್ ನಿಯಂತ್ರಣ ನಿಯಮ ಪಾಲನೆಯು ಕೆಲವೆಡೆ ಕಟ್ಟುನಿಟ್ಟಾಗಿ ನಡೆದಿದ್ದರೆ, ಕೆಲವೆಡೆ ಸಡಿಲವಾಗಿ ನಡೆದಿದೆ.
ತಾಲ್ಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಮತಗಟ್ಟೆಗೆ ಬರುವ ಪ್ರತಿಯೊಬ್ಬರ ಜ್ವರ ತಪಾಸಣೆ ನಡೆಸಲಾಗುತ್ತಿತ್ತು. ಆದರೆ ಮತದಾರರು ಪರಸ್ಪರ ಅಂತರ ಕಾಯ್ದುಕೊಂಡಿರಲಿಲ್ಲ.
ಕಪ್ಪಗಲ್ಲು ಗ್ರಾಮದ ಮತಗಟ್ಟೆಯಲ್ಲಿ ಮತದಾರ ಜ್ವರ ತಪಾಸಣೆ ನಡೆದಿತ್ತು. ಅಂತರ ಕಾಯ್ದುಕೊಂಡೇ ಮತದಾರರು ಮತ ಚಲಾಯಿಸಲು ನಿಂತಿದ್ದರು.
ಮತದಾರರಲ್ಲದವರು ಮತಗಟ್ಟೆಯ ಒಳ ಹೊರ ಆವರಣದಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದರು.
ಬೆಳಗಾವಿ ಗ್ರಾ.ಪಂ. ಚುನಾವಣೆ ನಡೆಯುತ್ತಿರುವ ತಾಲ್ಲೂಕಿನ ಕಾಕತಿ ಗ್ರಾಮ ಸರ್ಕಾರಿ ಶಾಲೆಯ ಮತಗಟ್ಟೆಗೆ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿ ಪರಿಶೀಲಿಸಿದರು.
ಚುನಾವಣಾ ಅಕ್ರಮಕ್ಕೆ ಅವಕಾಶ ನೀಡಬಾರದು. ಕೋವಿಡ್ ಭೀತಿ ಇರುವುದರಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
27 ವರ್ಷಗಳ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಬಳ್ಳಾರಿ ತಾಲ್ಲೂಕು ಕಪ್ಪಗಲ್ಲು ಗ್ರಾಮ ಪಂಚಾಯತಿ ಚುನಾವಣೆಗೆ ಮತ ಚಲಾಯಿಸಲು ನಿಂತ ಗ್ರಾಮದ ಮತದಾರರು
ರಾಯಚೂರು ಜಿಲ್ಲೆಯ 4 ತಾಲ್ಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಮತದಾನ
ಮತದಾರರು ಹಾಗೂ ಬಹುತೇಕ ಮತಗಟ್ಟೆ ಅಧಿಕಾರಿಗಳಿಂದ ಕೋವಿಡ್ ನಿಯಮ ಪಾಲನೆ
ಮತಗಟ್ಟೆಗಳ ಎದುರು ಅಂತರ ಕಾಯ್ದುಕೊಳ್ಳಲು ಗುರುತು
ಸ್ಯಾನಿಟೈಜರ್, ಥರ್ಮಲ್ ಸ್ಕ್ಯಾನರ್ ಮೂಲಕ ಮತದಾರರ ತಪಾಸಣೆ
ಮತಗಟ್ಟೆಗಳ ವ್ಯಾಪ್ತಿಯಿಂದ ಹೊರಗೆ ಜನರು ಗುಂಪು ಗುಂಪಾಗಿ ನಿಂತಿರುವ ದೃಶ್ಯ
ಹೊರಗಡೆ ಕೋವಿಡ್ ನಿಯಮ ಪಾಲನೆ ಆಗುತ್ತಿಲ್ಲ
ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಪಂಚಾಯಿತಿಯಲ್ಲಿ ಸರದಿಯಲ್ಲಿ ನಿಂತು ಮಾಜಿ ಸಚಿವ ರಮಾನಾಥ ರೈ ಮತಚಲಾಯಿಸಿದರು.
ಉಡುಪಿಯ ಆತ್ರಾಡಿ ಪಂಚಾಯಿತಿ ಮತಗಟ್ಟೆಯಲ್ಲಿ ಮತ ಚಲಾಯಿಸಲು ನಿಂತಿರುವ ಮತದಾರರು.
ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು ಗ್ರಾಮದಲ್ಲಿ 99 ವರ್ಷದ ಲಕ್ಷ್ಮಮ್ಮ ಮತ ಚಲಾವಣೆ ಮಾಡಿದ ಬಳಿಕ ಶಾಯಿ ಹಚ್ಚಿದ ಬೆರಳುವ ತೋರಿಸಿದರು
ರಾಯಚೂರು ಜಿಲ್ಲೆಯ ದೇವದುರ್ಗ, ಸಿರವಾರ, ಮಾನ್ವಿ ಹಾಗೂ ರಾಯಚೂರು ತಾಲ್ಲೂಕಿನ ಗ್ರಾಮಗಳಲ್ಲಿ ಮತದಾನ ಆರಂಭ
ಚಳಿಯನ್ನು ಲೆಕ್ಕಿಸದೆ ಮತದಾನಕ್ಕಾಗಿ ಸರದಿಯಲ್ಲಿ ನಿಂತ ಜನರು
ಅವಸರದಲ್ಲಿ ಮತಗಟ್ಟೆಯತ್ತ ಬಂದ ಕೃಷಿ ಕಾರ್ಯಕ್ಕೆ ತೆರಳುವ ಜನರು
ಚಿಕ್ಕಮಗಳೂರು ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಆರಂಭ
ಕಣದಲ್ಲಿ ಜಿಲ್ಲೆಯ 194 ಪಂಚಾಯಿತಿಗಳ 1893 ಸ್ಥಾನಗಳಿಗೆ 5290 ಮಂದಿ
ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು ಗ್ರಾಮ ಪಂಚಾಯತಿ ಚುನಾವಣೆ
ಮತಗಟ್ಟೆಯಿಂದ 100 ಮೀಟರ್ ಹೊರಗೆ ಜನಸಂದಣಿ
ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಮೊದಲ ಹಂತದ ಗ್ರಾ.ಪಂ. ಮತದಾನ ಆರಂಭ
ಶಹಾಪುರ ತಾಲ್ಲೂಕಿನ 22, ಸುರಪುರ ತಾಲ್ಲೂಕಿನ 20, ಹುಣಸಗಿ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ
ಮತದಾನ ನಡೆಯುವ ಮತಗಟ್ಟೆಗಳಲ್ಲಿ ಅಂತರ ಕಾಪಾಡಿಕೊಳ್ಳಲು ಗುರುತು
ಮಾಸ್ಕ್ ಧರಿಸಿ ಮತದಾರ ಆಗಮನ, ಕಡ್ಡಾಯ ಜ್ವರ ತಪಾಸಣೆ
ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ 26 ವರ್ಷಗಳ ನಂತರ ಮತದಾನ
ಈವರೆಗೆ ಪಂಚಾಯಿತಿಯಲ್ಲಿ ಎಲ್ಲ ಸದಸ್ಯರೂ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು
ಉತ್ಸಾಹದಿಂದ ಹಕ್ಕು ಚಲಾಯಿಸುತ್ತಿರುವ ಜನರು
ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾನ್‌ಸ್ಟೆಬಲ್ ತಾವರೆ ನಾಯ್ಕ ಅವರಿಗೆ ಹೃದಯಾಘಾತ
ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಡಿರಾಂಪುರ ಗ್ರಾಮದ ಮತಗಟ್ಟೆ ಸಂಖ್ಯೆ ಮೂರರಲ್ಲಿ ಘಟನೆ
ಬಾಗಲಕೋಟೆಯ ಬೀಳಗಿ ತಾಲ್ಲೂಕಿನ ಅನಗವಾಡಿಯಲ್ಲಿ 98ರ ವಯಸ್ಸಿನ ವೃದ್ಧೆ ಮತ ಚಲಾವಣೆ
ಪುತ್ರನ ಸಹಾಯದಿಂದ ಮತಗಟ್ಟೆಗೆ ಬಂದು ಹಕ್ಕು ಚಲಾವಣೆ
ತಾಯಿ ದಾನಮ್ಮ ಬಟಕುರ್ಕಿ ಅವರನ್ನು ಮತಗಟ್ಟೆಗೆ ಕರೆತಂದ ಪುತ್ರ ಬಸಯ್ಯ
ಅನಗವಾಡಿ ಗ್ರಾಮ ಪಂಚಾಯ್ತಿಯ ವಾರ್ಡ್ ನಂಬರ್ 2ರ ಮತಗಟ್ಟೆಯಲ್ಲಿ ಮತ ಚಲಾವಣೆ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಆರಂಭ
ಚಿಂತಾಮಣಿ, ಬಾಗೇಪಲ್ಲಿ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳ 84 ಗ್ರಾಮ ಪಂಚಾಯಿತಿಗಳಿಗೆ ಮತದಾನ
ಮತದಾರರು ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಹಕ್ಕು ಚಲಾವಣೆ
ಒಟ್ಟು 1,288 ಸ್ಥಾನಗಳಿಗೆ 3,207 ಉಮೇದುವಾರರು ಸ್ಪರ್ಧಾ ಕಣದಲ್ಲಿ
ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಮಂದಗತಿ ಮತದಾನ
ಮತ ಪೆಟ್ಟಿಗೆಗೆ ಪೂಜೆ ಮಾಡಿ ಮತದಾನ ಆರಂಭಿಸಿದ ಗ್ರಾಮಸ್ಥರು
ಬೈಲಹೊಂಗಲ ತಾಲ್ಲೂಕಲ್ಲೂ ಮತದಾನಕ್ಕೆ ಉತ್ಸಾಹ ಕಂಡುಬಂದಿಲ್ಲ
ಹುಕ್ಕೇರಿ ತಾಲ್ಲೂಕಿನಲ್ಲಿ ಚಳಿ ಇರುವುದರಿಂದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದಿಲ್ಲ
ಬೆಳಗಾವಿ ತಾಲ್ಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದಲ್ಲಿ ಜಿ.ಪಂ. ಸದಸ್ಯೆಯಿಂದ ಪ್ರಚಾರ
ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕುವಂತೆ ಸರಸ್ವತಿ ಪಾಟೀಲ ಪ್ರಚಾರ
ಇದನ್ನು ತಡೆಯಲು ಬಂದ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಸದಸ್ಯೆ
ಮತಗಟ್ಟೆಯಿಂದ ಹೊರ ಕಳುಹಿಸಿ, ಹೊರಗೆ ಸೇರಿದ್ದ ಗುಂಪು ಚದುರಿಸಿದ ಪೊಲೀಸರು
ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮತದಾನ ಬಿರುಸು
100 ಗ್ರಾಮ ಪಂಚಾಯಿತಿ 1,558 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ
ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ 810 ಮತಗಟ್ಟೆ
4,522 ಅಭ್ಯರ್ಥಿಗಳು ಕಣದಲ್ಲಿ, ನಿಗದಿಯಂತೆ ಬೆಳಿಗ್ಗೆ 7ಕ್ಕೆ ಮತದಾನ ಆರಂಭ
ಅಂತರ ಕಾಯ್ದುಕೊಳ್ಳಲು ಬಾಕ್ಸ್ ಮಾರ್ಕಿಂಗ್, ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಹಾಕಿ ಥರ್ಮಲ್ ಸ್ಕ್ರೀನಿಂಗ್
ತುಮಕೂರು, ಗುಬ್ಬಿ, ಕುಣಿಗಲ್ , ಪಾವಗಡ, ಕೊರಟಗೆರೆ ತಾಲ್ಲೂಕುಗಳು
168 ಗ್ರಾಮ ಪಂಚಾಯಿತಿಯ 2,786 ಸ್ಥಾನಗಳಿಗೆ ಮತಚಲಾವಣೆ ಇಂದು
ಸಿದ್ದಗಂಗಾ ಮಠದ ಆವರಣದ ಶಾಲೆಯ ಮತಗಟ್ಟೆಯಲ್ಲಿ ಸಿದ್ಧಲಿಂಗ ಸ್ವಾಮೀಜಿ ಮತ ಚಲಾವಣೆ
ಚುನಾವಣೆ ಬಂದೋಬಸ್ತ್‌ಗಾಗಿ ಡಿವೈಎಸ್ಪಿ, ಸಿಪಿಐ, ಪಿಎಸ್ಐ ಸೇರಿ 1,925 ಸಿಬ್ಬಂದಿ ನಿಯೋಜನೆ
ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಮತದಾನ ಆರಂಭ
ಬೆಳಗಾವಿ, ಖಾನಾಪುರ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ಗೋಕಾಕ, ಮೂಡಲಗಿ ತಾಲ್ಲೂಕುಗಳ 259 ಗ್ರಾಮ ಪಂಚಾಯಿತಿ
3,808 ಸ್ಥಾನಗಳಿಗೆ ಮತದಾನ. ಸಂಜೆ ಐದರವರೆಗೂ ಮತದಾನಕ್ಕೆ ಅವಕಾಶ.
ಒಟ್ಟು 13.02 ಲಕ್ಷ ಮತದಾರರು ಇದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆಗೆ ಮತದಾನ ಆರಂಭ
ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿರುವ ಮತದಾರರು
ಜಮಖಂಡಿ ಉಪವಿಭಾಗದ ವ್ಯಾಪ್ತಿಯ ನಾಲ್ಕು ತಾಲ್ಲೂಕುಗಳಲ್ಲಿ ಮತದಾನ ಇಂದು
ಜಮಖಂಡಿ, ಮುಧೋಳ, ರಬಕವಿ-ಬನಹಟ್ಟಿ, ಬೀಳಗಿ ತಾಲೂಕುಗಳ 88 ಗ್ರಾಮ ಪಂಚಾಯ್ತಿ
1,397 ಸ್ಥಾನಗಳಿಗೆ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ
ಚಾಮರಾಜನಗರ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆ ಚಾಮರಾಜನಗರ ತಾಲ್ಲೂಕು ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಆರಂಭವಾಗಿದೆ. ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಮತದಾರರು ಹಕ್ಕು ಚಲಾಯಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.