ADVERTISEMENT

ವೇತನಕ್ಕೆ ಕಾಯುತ್ತಿರುವ ಗ್ರಾ.ಪಂ ಸಿಬ್ಬಂದಿ

ಚಿಕ್ಕಬಳ್ಳಾಪುರ ಜಿಲ್ಲೆಯ 157 ಪಂಚಾಯಿತಿಗಳಲ್ಲಿ 1,745 ಸಿಬ್ಬಂದಿ ಕೆಲಸ

ಡಿ.ಎಂ.ಕುರ್ಕೆ ಪ್ರಶಾಂತ
Published 17 ಜೂನ್ 2021, 21:49 IST
Last Updated 17 ಜೂನ್ 2021, 21:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿಕ್ಕಬಳ್ಳಾಪುರ: ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವಪೌರ ಕಾರ್ಮಿಕರು, ವಾಟರ್ ಮೆನ್, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್‌ಗಳು ಐದಾರು ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ.

ಸಾಮಾನ್ಯವಾಗಿ ಈ ನೌಕರರು ಆರ್ಥಿಕವಾಗಿ ಸಬಲರೇನೂ ಅಲ್ಲ. ಕೆಳ ಹಾಗೂ ಮಧ್ಯಮ ವರ್ಗದ ಕುಟುಂಬ
ಗಳವರೇ ಈ ಕೆಲಸಗಳಲ್ಲಿ ಇದ್ದಾರೆ. ಬಹಳಷ್ಟು ಸಿಬ್ಬಂದಿ ಇಲ್ಲಿನ ವೇತನವನ್ನೇ ನಂಬಿ ಜೀವನ ಸಾಗಿಸುವರು.

ಜಿಲ್ಲೆಯಲ್ಲಿ ಒಟ್ಟು 157 ಗ್ರಾಮ ಪಂಚಾಯಿತಿಗಳಿವೆ. ಇವುಗಳಲ್ಲಿ ಪೌರ ಕಾರ್ಮಿಕರು, ವಾಟರ್‌ಮೆನ್, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪ
ರೇಟರ್‌ಗಳು ಸೇರಿ 1,745 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಗರಪ್ರದೇಶಗಳ ಆಸುಪಾಸಿನಲ್ಲಿದ್ದು ಆರ್ಥಿಕವಾಗಿ ಸಬಲವಾಗಿರುವ, ಕಡಿಮೆ ಸಿಬ್ಬಂದಿ ಹೊಂದಿರುವ ಪಂಚಾಯಿತಿಗಳು ಮಾತ್ರ ತಮ್ಮ ಸಿಬ್ಬಂದಿಗೆ ಕಾಲಕಾಲಕ್ಕೆ ವೇತನ ನೀಡುತ್ತಿವೆ. ಆದರೆ, ಬಹಳಷ್ಟು ಪಂಚಾಯಿತಿಗಳಲ್ಲಿ ಐದಾರು ತಿಂಗಳಿನಿಂದ ಹಿಡಿದು ಏಳೆಂಟು ತಿಂಗಳವರೆಗೂ ವೇತನ ಬಾಕಿ ಇದೆ.

ADVERTISEMENT

ಸಿಬ್ಬಂದಿ ವೇತನ ಪಾವತಿಗೆ ಮೂರು ತಿಂಗಳಿಗೆ ಒಮ್ಮೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಈ ಹಣದಲ್ಲಿ ಪೂರ್ಣ ಪ್ರಮಾಣದಲ್ಲಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿಗಳು ಸಂಗ್ರಹಿಸುವ ತೆರಿಗೆಯಲ್ಲಿ ಶೇ 40ರಷ್ಟನ್ನು ಸಿಬ್ಬಂದಿ ವೇತನಕ್ಕೆ ಬಳಸಲು ಅವಕಾಶವಿದೆ.

15ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾ ಯೋಜನೆ ರೂಪಿಸಿಕೊಂಡು ಸಂಬಳ ನೀಡಬಹುದಾಗಿದೆ. ಆದರೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈ ಪ್ರಯತ್ನಗಳು ಆಗುತ್ತಿಲ್ಲ. ಪಂಚಾಯಿತಿ ಸಿಬ್ಬಂದಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ ಜಾರಿಗೊಳಿಸಿದೆ. ಆದರೆ ಜಿಲ್ಲೆಯಲ್ಲಿ ಬೆರೆಳೆಣಿಕೆಯ ಪಂಚಾಯಿಗಳು ಮಾತ್ರ ನೌಕರರಿಗೆ ಕನಿಷ್ಠ ವೇತನ ನೀತಿ ಜಾರಿಗೊಳಿಸಿವೆ. ಬಹುತೇಕ ಪಂಚಾಯಿತಿಗಳಲ್ಲಿ ಈ ನೀತಿ ಜಾರಿಯಾಗಿಲ್ಲ. ಕೋವಿಡ್‌ನ ಈ ಸಂದರ್ಭದಲ್ಲಿ ಕೆಳ ಹಂತದ ಸಿಬ್ಬಂದಿ ವೇತನವಿಲ್ಲದೆ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ.

‘ಐದು ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲ. ನಾನು ನಮ್ಮ ಪಕ್ಕದ ಪಂಚಾಯಿತಿಯವರನ್ನೂ ಸಂಬಳ ಕೊಟ್ಟಿದ್ದಾರೆಯೇ ಎಂದು ಕೇಳಿದೆ. ಇಲ್ಲ ಎಂದರು. ಸಂಬಳ ನಂಬಿಯೇ ಜೀವನ ನಡೆಸುತ್ತಿದ್ದೇವೆ. ಸಂಸಾರ ನಿರ್ವಹಣೆಯೂ ಕಷ್ಟವಾಗಿದೆ. ಆಯಾ ತಿಂಗಳು ಪಂಚಾಯಿತಿಯವರು ಸಂಬಳ ಕೊಟ್ಟರೆ ನಮ್ಮ ಜೀವನ ನಡೆಯುತ್ತದೆ’ ಎಂದು ಹೆಸರು ಹೇಳಲು ಇಚ್ಚಿಸದ ವಾಟರ್‌ಮೆನ್ ಒಬ್ಬರು ನೋವು ತೋಡಿಕೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.