ADVERTISEMENT

ಗ್ರಾಮ ವ್ಯಾಪ್ತಿಯಲ್ಲಿ ತೆರಿಗೆ ಭಾರ: ಸ್ಥಿರಾಸ್ತಿ ತೆರಿಗೆ ಪರಿಷ್ಕರಣೆಗೆ ಹೊಸ ನಿಯಮ

ಗ್ರಾಮ ಪಂಚಾಯಿತಿಗಳಲ್ಲಿ ಸ್ಥಿರಾಸ್ತಿ ತೆರಿಗೆ ಪರಿಷ್ಕರಣೆಗೆ ಹೊಸ ನಿಯಮ ಪ್ರಕಟ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 20:08 IST
Last Updated 7 ಏಪ್ರಿಲ್ 2022, 20:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿರಾಸ್ತಿಯ ಮಾರ್ಗಸೂಚಿ ದರದ ಆಧಾರದಲ್ಲಿ ವಸತಿ ಮತ್ತು ಕೈಗಾರಿಕಾ ಉದ್ದೇಶದ ಆಸ್ತಿಗಳಿಗೆ ತೆರಿಗೆ ನಿಗದಿ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಹೊಸ ನಿಯಮಗಳ ಜಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ನಿಯಮಗಳ ಜಾರಿಯಿಂದ ಗ್ರಾಮೀಣ ಪ್ರದೇಶದಲ್ಲಿ ತೆರಿಗೆಯ ಭಾರ ಹೆಚ್ಚಲಿದೆ.

‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು– 2021’ ಜಾರಿಗೊಳಿಸಿ ಮಾರ್ಚ್‌ 31ರಂದು ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ತೆರಿಗೆ ನಿಗದಿಗೆ ಈ ನಿಯಮಗಳು ಅನ್ವಯವಾಗುತ್ತವೆ.

‘30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶಗಳಿಗೆ ಅನ್ವಯಿಸಿ ಸಮಗ್ರವಾದ ತೆರಿಗೆ ನಿಯಮಗಳನ್ನು ರೂಪಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ತಿಳಿಸಿದರು.

ADVERTISEMENT

‘ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿ ಏಕರೂಪದ ತೆರಿಗೆ ವ್ಯವಸ್ಥೆ ಇರಲಿಲ್ಲ. ಆಯಾ ಗ್ರಾಮ ಪಂಚಾಯಿತಿಗಳು ಇಚ್ಛಾನುಸಾರ ತೆರಿಗೆ ವಿಧಿಸುತ್ತಿದ್ದವು. ಈಗ ಆರ್ಥಿಕ ಸ್ವಾಯತ್ತತೆಗೆ ಪೂರಕವಾಗಿ ತೆರಿಗೆ ನಿಯಮಗಳಲ್ಲಿ ಏಕರೂಪತೆ ತಂದಿದ್ದೇವೆ’ ಎಂದು ಹೇಳಿದರು.

ಆಸ್ತಿಯ ಮೌಲ್ಯವನ್ನು ಆಧರಿಸಿ ತೆರಿಗೆ ನಿಗದಿ ಮಾಡುವ ಪದ್ಧತಿಯನ್ನು ಹೊಸ ನಿಯಮಗಳ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದೆ. ಸ್ಥಿರಾಸ್ತಿಯ ಸದ್ಯದ ಮಾರ್ಗಸೂಚಿ ದರದ ಆಧಾರದಲ್ಲಿ ತೆರಿಗೆ ಹೆಚ್ಚಳ ಮಾಡಲಾಗುತ್ತದೆ. ಇನ್ನು ಎಲ್ಲ ಗ್ರಾಮ ಪಂಚಾಯಿತಿಗಳೂ ಆಯಾ ಪ್ರದೇಶದ ಸ್ಥಿರಾಸ್ತಿ ಮಾರ್ಗಸೂಚಿ ದರದ ಆಧಾರದಲ್ಲೇ ತೆರಿಗೆ ನಿಗದಿ ಮಾಡಬೇಕಾಗುತ್ತದೆ.

ಈ ನಿಯಮಗಳ ಕರಡು ಪ್ರಕಟಿಸಿದ್ದಾಗಲೇ ಕೈಗಾರಿಕೆ ಮತ್ತು ಉದ್ಯಮ ವಲಯದ ಹಲವರು ತೆರಿಗೆ ಹೆಚ್ಚಳದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಹೊಸ ನಿಯಮಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನೂ ಸಲ್ಲಿಸಿದ್ದರು.

ಕೈಗಾರಿಕೆ: ಮೂರು ವರ್ಗಗಳ ತೆರಿಗೆ:

ಹೊಸ ನಿಯಮಗಳ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿನ ಕೈಗಾರಿಕೆಗಳಿಗೆ ಮೂರು ವರ್ಗಗಳಲ್ಲಿ ತೆರಿಗೆ ದರ ನಿಗದಿ ಮಾಡಲಾಗುತ್ತದೆ. ಸಣ್ಣ ಕೈಗಾರಿಕೆಗಳಿಗೆ ಕಟ್ಟಡದ ಮೌಲ್ಯದ ಶೇ. 0.40 ರಷ್ಟು, ಮಧ್ಯಮ ಕೈಗಾರಿಕೆಗಳಿಗೆ ಕಟ್ಟಡ ಮೌಲ್ಯದ ಶೇ 0.50 ರಷ್ಟು ಮತ್ತು ಬೃಹತ್‌ ಕೈಗಾರಿಕೆಗಳಿಗೆ ಕಟ್ಟಡ ಮೌಲ್ಯದ ಶೇ 0.60 ರಷ್ಟು ತೆರಿಗೆ ವಿಧಿಸಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶ ನೀಡಲಾಗಿದೆ.

‘ಹಿಂದೆ ಕಟ್ಟಡಗಳ ಮೌಲ್ಯದ ಆಧಾರದಲ್ಲಿ ಮಾತ್ರ ತೆರಿಗೆ ನಿಗದಿ ಮಾಡಲಾಗುತ್ತಿತ್ತು. ಈಗ ಕಟ್ಟಡಗಳ ಮೌಲ್ಯದ ಜತೆಗೆ ಆಸ್ತಿಯ ಮಾರ್ಗಸೂಚಿ ದರವನ್ನೂ ಆಧರಿಸಿ ತೆರಿಗೆ ಲೆಕ್ಕ ಹಾಕಲಾಗುತ್ತದೆ. ಮಾರ್ಗಸೂಚಿ ದರ ಆಗಾಗ ಬದಲಾಗುವುದರಿಂದ ತೆರಿಗೆಯ ಪ್ರಮಾಣವೂ ಬದಲಾಗುತ್ತಿರುತ್ತದೆ. ಇದರಿಂದ ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಜಿ.ರಾಜಗೋಪಾಲ್‌.

ತೆರಿಗೆ ಬಾಕಿ ಉಳಿಸಿಕೊಳ್ಳುವ ಕೈಗಾರಿಕೆಗಳಿಗೆ ನೋಟಿಸ್‌ ನೀಡುವ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ ಇದೆ. ಇದರಿಂದ ಕೈಗಾರಿಕೋದ್ಯಮಿಗಳಿಗೆ ಕಿರುಕುಳ ಹೆಚ್ಚಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಶುಲ್ಕ ನಿಗದಿಗೂ ಅವಕಾಶ:

ಗ್ರಾಮ ಪಂಚಾಯಿತಿಗಳು ಕೆಲವು ಹೊಸ ಶುಲ್ಕಗಳನ್ನು ವಿಧಿಸುವುದಕ್ಕೂ ಈಗ ಅವಕಾಶ ಕಲ್ಪಿಸಲಾಗಿದೆ. ನಲ್ಲಿ ನೀರಿನ ಸಂಪರ್ಕ ಪಡೆಯಲು ಒಂದು ಬಾರಿಗೆ ₹ 2,000 ಶುಲ್ಕ ಪಾವತಿಸಬೇಕು. 10 ಕಿಲೋ ಲೀಟರ್‌ವರೆಗಿನ ನೀರಿನ ಬಳಕೆಗೆ ತಿಂಗಳಿಗೆ ₹ 80 ಶುಲ್ಕ ವಿಧಿಸಬಹುದು. ಇಂತಹ ಅನೇಕ ಶುಲ್ಕ ವಿಧಿಸಲು ಅವಕಾಶ ನೀಡಲಾಗಿದೆ.

‘ಕುಕ್ಕುಟ ಸಾಕಣೆ ಮತ್ತು ಕೃಷಿ ಸಂಬಂಧಿ ಉದ್ಯಮಗಳು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿದ್ದವು. ಹೊಸ ನಿಯಮಗಳಲ್ಲಿ ಈ ಉದ್ದಿಮೆಗಳನ್ನೂ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಆಸ್ತಿ ಸಂಖ್ಯೆ ಮತ್ತು ಆಸ್ತಿಯ ಗುರುತಿನ ವಿವರಗಳನ್ನು ನಮೂದಿಸಿದ ತಕ್ಷಣ ಸ್ವಯಂಚಾಲಿತವಾಗಿ ತೆರಿಗೆ ಲೆಕ್ಕ ಹಾಕುವಂತಹ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ’ ಎಂದು ಅತೀಕ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.