ADVERTISEMENT

ಚಳ್ಳಕೆರೆ ತಾಲೂಕಲ್ಲೂ ಗ್ರಾಮ ಪಂಚಾಯಿತಿ ಸ್ಥಾನ ಹರಾಜು: ₹7 ಲಕ್ಷಕ್ಕೆ ಸೀಟು ಮಾರಾಟ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 15:59 IST
Last Updated 10 ಡಿಸೆಂಬರ್ 2020, 15:59 IST
ಚಳ್ಳಕೆರೆ ತಾಲ್ಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ನಡೆದ ಹರಾಜು ಪ್ರಕ್ರಿಯೆ.
ಚಳ್ಳಕೆರೆ ತಾಲ್ಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ನಡೆದ ಹರಾಜು ಪ್ರಕ್ರಿಯೆ.   

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮದ ನಾಲ್ಕು ಸದಸ್ಯ ಸ್ಥಾನಕ್ಕೆ ಹರಾಜು ಪ್ರಕ್ರಿಯೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗ್ರಾಮದ ಮುಖಂಡರು ಸಭೆ ನಡೆಸಿ ನಾಲ್ಕು ಸ್ಥಾನಗಳನ್ನು ಹರಾಜು ಮಾಡಲಾಗಿದೆ. ಮೂರು ಸ್ಥಾನಗಳು ತಲಾ ₹3.5 ಲಕ್ಷಕ್ಕೆ ಹಾಗೂ ತೀವ್ರ ಸ್ಪರ್ಧೆ ಇದ್ದ ಒಂದು ಸ್ಥಾನ ₹7 ಲಕ್ಷಕ್ಕೆ ಹರಾಜಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದ ಆಕಾಂಕ್ಷಿಗಳಾದ ಭೀಮಣ್ಣ, ಬೊಮ್ಮಜ್ಜ, ಲಕ್ಷ್ಮೀದೇವಿ, ಶಾಂತಮ್ಮ ಅವರ ಅವಿರೋಧ ಆಯ್ಕೆಗೆ ಗ್ರಾಮಸ್ಥರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದ ದೇಗುಲದ ಮುಂಭಾಗದಲ್ಲಿ ಸಭೆ ನಡೆದಿದೆ. ಈ ಬಗ್ಗೆ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ.

ADVERTISEMENT

‘ಹರಾಜು ಪ್ರಕ್ರಿಯೆ ಇನ್ನೂ ಖಚಿತವಾಗಿಲ್ಲ. ಸೆಕ್ಟರ್ ಅಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದೇನೆ. ಅವರು ನೀಡುವ ವರದಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗೆ ರವಾನೆ ಮಾಡಲಾಗುವುದು’ ಎಂದು ಚಳ್ಳಕೆರೆ ತಹಶೀಲ್ದಾರ್ ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.