ADVERTISEMENT

ಕೋವಿಡ್‌ ಸಂಕಷ್ಟ: ಗ್ರಾಮೀಣರ ಮೇಲೂ ಬೀಳಲಿದೆ ತೆರಿಗೆ ಭಾರ

ವಿನಾಯಕ ಭಟ್ಟ‌
Published 31 ಆಗಸ್ಟ್ 2021, 22:01 IST
Last Updated 31 ಆಗಸ್ಟ್ 2021, 22:01 IST
   

ದಾವಣಗೆರೆ: ಆಸ್ತಿಯ ಮೂಲ(ಮಾರ್ಗಸೂಚಿ ದರ) ಮೌಲ್ಯದ ಆಧಾರದ ಮೇಲೆ ತೆರಿಗೆ ವಿಧಿಸಲು ಗ್ರಾಮ ಪಂಚಾಯಿತಿಗಳಲ್ಲೂ ಸಿದ್ಧತೆ ನಡೆಯುತ್ತಿದ್ದು, ಕೋವಿಡ್‌ ಪರಿಣಾಮ ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಮೀಣ ಪ್ರದೇಶದ ನಾಗರಿಕರ ಮೇಲೂ ತೆರಿಗೆ ಭಾರದ ತೂಗುಗತ್ತಿ ನೇತಾಡುತ್ತಿದೆ.

ಮೊದಲು ನಾಲ್ಕು ವರ್ಷಗಳಿಗೆ ಒಮ್ಮೆ ಪರಿಷ್ಕರಣೆಯಾಗುತ್ತಿದ್ದ ಆಸ್ತಿ ತೆರಿಗೆಯನ್ನು ಈಗ ಎರಡು ವರ್ಷಗಳಿಗೆ ಒಮ್ಮೆ ಪರಿಷ್ಕರಿಸುವುದು ರೂಢಿ. ಮನೆ, ವಾಣಿಜ್ಯ ಕಟ್ಟಡ, ಖಾಲಿ ನಿವೇಶನಗಳ ಅಳತೆ ಆಧಾರದಲ್ಲಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಹಿಂದೆ ನಿಗದಿಯಾಗಿದ್ದ ಅಲ್ಪ ಪ್ರಮಾಣದ ತೆರಿಗೆ ಮೊತ್ತಕ್ಕೇ ಶೇ 5ರಿಂದ ಶೇ 10ರ ವರೆಗೆ ಹೆಚ್ಚಿಸಲಾಗುತ್ತಿತ್ತು. ಆದರೆ, ಇದೀಗ ಪಂಚಾಯತ್‌ ರಾಜ್‌ ಇಲಾಖೆಯು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಿಗದಿ ಮಾಡಿರುವ ಆಸ್ತಿಯ ಮೌಲ್ಯ ಆಧರಿಸಿ ತೆರಿಗೆ ವಿಧಿಸುವಂತೆ ನಿರ್ದೇಶನ ನೀಡಿದೆ. ಕೋವಿಡ್‌ ಕಾರಣಕ್ಕೆ ಬಹುತೇಕ ಪಂಚಾಯಿತಿಗಳು ಇದನ್ನು ಇನ್ನೂ ಜಾರಿಗೆ ತಂದಿಲ್ಲ.

‌‘ಕೋವಿಡ್‌ ಸಂಕಷ್ಟ ಇರುವುದರಿಂದ ಸದ್ಯ ಅಳತೆ ಆಧಾರದಲ್ಲೇ ಲೆಕ್ಕ ಹಾಕಿ ತೆರಿಗೆ ಸಂಗ್ರಹಿಸುತ್ತಿದ್ದೇವೆ. ಮುಂದಿನ ಆರ್ಥಿಕ ಸಾಲಿನಿಂದ ಆಸ್ತಿಯ ಮೂಲ ಮೌಲ್ಯದ ಆಧಾರದಲ್ಲಿ ತೆರಿಗೆ ವಿಧಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಬಹುದೇನೋ. ಆಗ ಸಹಜವಾಗಿಯೇ ಜನ ಕಟ್ಟುವ ತೆರಿಗೆ ಪ್ರಮಾಣ ಹೆಚ್ಚಾಗಲಿದೆ’ ಎಂದು ದಾವಣಗೆರೆ ತಾಲ್ಲೂಕಿನ ಆನಗೋಡು ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್‌ ಎನ್‌.ಬಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಹಾಗೂ ನಗರ ಸಮೀಪದ ಗ್ರಾಮಗಳಲ್ಲಿನ ಆಸ್ತಿಯ ಮೌಲ್ಯ ಹೆಚ್ಚಿರುವುದರಿಂದ ಅಲ್ಲಿನ ನಿವಾಸಿಗಳಿಗೆ ಹೆಚ್ಚಿನ ತೆರಿಗೆಯ ಹೊರೆ ಬೀಳಲಿದೆ. ಈಗ ನಿಗದಿಗೊಳಿಸಿರುವ ತೆರಿಗೆಯನ್ನೇ ಸಂಗ್ರಹಿಸಲು ಕಷ್ಟವಾಗುತ್ತಿರುವಾಗ ತೆರಿಗೆ ಹೆಚ್ಚಿಸಿದರೆ ಹೇಗೆ ವಸೂಲಿ ಮಾಡುವುದು ಎಂಬ ಚಿಂತೆ ಪಂಚಾಯಿತಿ ಅಧಿಕಾರಿಗಳನ್ನೂ ಕಾಡುತ್ತಿದೆ. ಈಗಾಗಲೇ ಆಸ್ತಿಯ ಮೌಲ್ಯದ ಆಧಾರದಲ್ಲಿ ಪರವಾನಗಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ, ನಾಗರಿಕರಿಂದ ಆಕ್ಷೇಪಗಳು ಕೇಳಿಬರುತ್ತಿವೆ.

ದಾವಣಗೆರೆಗೆ ಸಮೀಪದಲ್ಲಿರುವ ಆನಗೋಡು ಗ್ರಾಮದಲ್ಲಿ ಸದ್ಯ ಹೆಂಚಿನ ಮನೆಗೆ ₹ 250, ಶೀಟ್‌ ಮನೆಗೆ ₹ 350, ಆರ್‌.ಸಿ.ಸಿ ಮನೆಗೆ ₹ 800 ರಿಂದ ₹1,000 ತೆರಿಗೆ ವಿಧಿಸಲಾಗುತ್ತಿದೆ. ಹೊಸ ಮಾದರಿಯಲ್ಲಿ ತೆರಿಗೆ ನಿಗದಿಯಾದರೆ ₹ 30 ಲಕ್ಷ ಮೌಲ್ಯದ ಮನೆಗೆ ಶೇ 0.05 ತೆರಿಗೆ ವಿಧಿಸಿದರೆ ವಾರ್ಷಿಕ ₹1,500 ಪಾವತಿಸಬೇಕಾಗುತ್ತದೆ ಎನ್ನುತ್ತವೆ ಸರ್ಕಾರದ ಮೂಲಗಳು.

‘2019ರಲ್ಲಿ ವಾಣಿಜ್ಯ ಉದ್ದೇಶ ಕಟ್ಟಡದ ತೆರಿಗೆ ಚದರ ಮೀಟರ್‌ಗೆ ₹ 30 ಇತ್ತು. ಈಗ ಅದು ₹ 45ರ ವರೆಗೂ ಹೆಚ್ಚಾಗಿದೆ. ಸಾಮಾನ್ಯರಿಗೆ ಬರೆ ಎಳೆದಂತಾಗಿದೆ’ ಎನ್ನುತ್ತಾರೆ ಮಂಡ್ಯ ಜಿಲ್ಲೆಯ ಇಂಡುವಾಳು ಗ್ರಾಮದ ಬಸವರಾಜು.

‘ಜನ ಕೆಲಸ ಕಳೆದುಕೊಂಡು ಜೀವನ ಸಾಗಿಸಲು ಪರದಾಡುತ್ತಿರುವ ಸಂದರ್ಭದಲ್ಲಿ ಸರ್ಕಾರ ಎರಡು ವರ್ಷದ ಆಸ್ತಿ ತೆರಿಗೆಯಲ್ಲಿ ಶೇ 50 ರಷ್ಟು ರಿಯಾಯಿತಿ ಕೊಡಬೇಕಿತ್ತು. ಆದರೆ, ಹೊಸ ತೆರಿಗೆ ಜಾರಿ ಮಾಡಿದ್ದು, ಇನ್ನಷ್ಟು ಆರ್ಥಿಕ ಸಮಸ್ಯೆ ತಲೆದೋರಿದೆ’ ಎನ್ನುವುದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮಸ್ಥ ಸಾಬಣ್ಣ ಭರಾಟೆ ಅವರ ಅಳಲು.

ವಾರ್ಷಿಕ ನೀರಿನ ಕರ ₹1,500 ಕ್ಕೆ ಏರಿಕೆ?
ಬಹುತೇಕ ಕಡೆ ಕುಡಿಯುವ ನೀರಿನ ಕರವನ್ನು ತಿಂಗಳಿಗೆ ₹ 50 ನಿಗದಿಗೊಳಿಸಲಾಗಿದೆ. ಆದರೆ, ಜಲ ಜೀವನ್‌ ಮಿಷನ್‌
ನಡಿ ಪ್ರತಿ ಮನೆಗೂ ಮೀಟರ್‌ ಇರುವ ನಳ ಜೋಡಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನೀರಿನ ಕರ ವಾರ್ಷಿಕ ₹1,500ಕ್ಕಿಂತಲೂ ಹೆಚ್ಚಾಗಬಹುದು ಎಂಬ ಆತಂಕವೂ ನಾಗರಿಕರನ್ನು ಕಾಡುತ್ತಿದೆ.

*
ಕೋವಿಡ್‌ನಿಂದಾಗಿ ಹಲವರಿಗೆ ಸಂಕಷ್ಟ ಎದುರಾಗಿದ್ದು, ಗ್ರಾಮ ಪಂಚಾಯಿತಿ ಅವರು ವಿವಿಧ ತೆರಿಗೆಗಳನ್ನು ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಿದ್ದಾರೆ.
–ಎಂ.ಸಿ.ಪರೀಕ್ಷಿತ್‌ ಗ್ರಾಮಸ್ಥ, ಜಾವಳಿ, ಮೂಡಿಗೆರೆ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.