ADVERTISEMENT

ಹಳ್ಳಿಗಳಲ್ಲಿ ಸೋಂಕು ಹೆಚ್ಚಳ: ‘ಮುಂಚೂಣಿ’ ಪಟ್ಟಿಯಲ್ಲಿಲ್ಲ ಸಿಬ್ಬಂದಿ!

ಗ್ರಾಮ ಪಂಚಾಯಿತಿಗೆ ಕೋವಿಡ್‌ ನಿಯಂತ್ರಣ ಹೊಣೆ

ರಾಜೇಶ್ ರೈ ಚಟ್ಲ
Published 23 ಮೇ 2021, 20:58 IST
Last Updated 23 ಮೇ 2021, 20:58 IST
ಕೆ.ಎಸ್‌. ಈಶ್ವರಪ್ಪ
ಕೆ.ಎಸ್‌. ಈಶ್ವರಪ್ಪ   

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ‘ಮುಂಚೂಣಿ’ಯಲ್ಲಿ ನಿಂತು ಕಾರ್ಯನಿರ್ವಹಿಸುವಂತೆ ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ, ಈ ಸಿಬ್ಬಂದಿಯನ್ನು ‘ಕೋವಿಡ್‌ ಮುಂಚೂಣಿ ಕಾರ್ಯಕರ್ತರು’ (ಫ್ರಂಟ್‌ಲೈನ್‌ ವರ್ಕರ್‌) ಎಂದು ರಾಜ್ಯ ಸರ್ಕಾರ ಇನ್ನೂ ಪರಿಗಣಿಸಿಲ್ಲ!

ಕೋವಿಡ್‌ ಕರ್ತವ್ಯದ ವೇಳೆ ರೋಗಿಗಳ ಸಂಪರ್ಕದಿಂದ ಸೋಂಕು ತಗುಲಿ ಗ್ರಾಮ ಪಂಚಾಯಿತಿಯಿಂದ ನಿಯೋಜಿತ ಸಿಬ್ಬಂದಿ ಮೃತಪಟ್ಟರೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಪ್ರಮಾಣೀಕರಿಸಿದರೆ ಜಿಲ್ಲಾ ಅಥವಾ ತಾಲ್ಲೂಕು ಪಂಚಾಯಿತಿಗಳಲ್ಲಿ ಲಭ್ಯವಿರುವ ಅನುದಾನದಿಂದ ₹ 30 ಲಕ್ಷ ಪರಿಹಾರ ನೀಡಲು 2020ರ ಆಗಸ್ಟ್‌ 29 ರಂದು ಆದೇಶ ಹೊರಡಿಸಲಾಗಿದೆ. ಅಲ್ಲದೆ, ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿಯನ್ನು ಕೋವಿಡ್‌ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಈ ಮಧ್ಯೆ, ಕೋವಿಡ್‌ ನಿಯಂತ್ರಣ ಕರ್ತವ್ಯದ ವೇಳೆ ಸೋಂಕು ತಗಲಿ 35 ಕ್ಕೂ ಹೆಚ್ಚು ಸಿಬ್ಬಂದಿ, ನೌಕರರು ಈವರೆಗೆ ಮೃತಪಟ್ಟಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ‘ಏಪ್ರಿಲ್‌ನಿಂದ ಇಲ್ಲಿಯವರೆಗೆ ಕೋವಿಡ್‌ ಕಾರಣದಿಂದ ಮೃತಪಟ್ಟ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ನೌಕರರ ಜಿಲ್ಲಾವಾರು ವಿವರ, ಆಸ್ಪತ್ರೆಗೆ ದಾಖಲಾದ ವಿವರಮತ್ತು ಮೃತಪಟ್ಟ ವಿವರ, ಮೃತಪಟ್ಟ ಸಿಬ್ಬಂದಿ, ನೌಕರರ ವಯೋಮಾನ, ಯಾವ ಕಾರಣದಿಂದ ಕೋವಿಡ್‌ ಸೋಂಕಿತರಾದರು ಎಂಬ ಮಾಹಿತಿಯನ್ನು ತಕ್ಷಣ ನೀಡಬೇಕು’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಇದೇ 18ರಂದು ಸೂಚಿಸಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂಚಾಯತ್‌ರಾಜ್‌) ಉಮಾ ಮಹಾದೇವನ್‌, ‘ಕೋವಿಡ್‌ ಕರ್ತವ್ಯದಲ್ಲಿ ನಿರತರಾಗಿದ್ದಾಗ ಸೋಂಕು ತಗಲಿ ಮೃತಪಟ್ಟವರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿ ಜಿಲ್ಲೆಗಳಲ್ಲಿವೆ. ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಜನವರಿಯಿಂದ ಲಸಿಕೆ ನೀಡಲು ಆದೇಶ ನೀಡಲಾಗಿದೆ’ ಎಂದರು.

ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿತರಿಗೆ ಹಳ್ಳಿಗಳಲ್ಲಿ ಮನೆ ಆರೈಕೆ (ಹೋಮ್‌ ಐಸೋಲೇಷನ್‌) ನಿರಾಕರಿಸಲಾಗಿದ್ದು, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿಯೇ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಈ ಸಂಪೂರ್ಣ ಹೊಣೆಯನ್ನು ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗೆ ವಹಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು (ಗ್ರೇಡ್‌ 1 ಮತ್ತು ಗ್ರೇಡ್‌ 2), ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಸರ್ಕಾರದಿಂದ ನೇರವಾಗಿ ವೇತನ ಪಡೆಯುತ್ತಾರೆ. ಉಳಿದಂತೆ, ಕರ ವಸೂಲಿಗಾರರು, ಕ್ಲರ್ಕ್‌, ಡಾಟಾ ಎಂಟ್ರಿ ಆಪರೇಟರ್‌, ವಾಟರ್‌ಮನ್‌, ಪಂಪ್‌ ಆಪರೇಟರ್‌, ಜವಾನ, ಸ್ವಚ್ಛತಾಗಾರರಿಗೆ ಪಂಚಾಯಿತಿಯ ಸಂಪನ್ಮೂಲದಿಂದ ವೇತನ ನೀಡಲಾಗುತ್ತಿದೆ. ‘ಎಲ್ಲರನ್ನೂ ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಆದರೆ, ಇನ್ನೂ ಕೋವಿಡ್‌ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿಲ್ಲ’ ಎನ್ನುವುದು ಈ ಸಿಬ್ಬಂದಿಯ ಅಳಲು.

ಕೋವಿಡ್‌: ಈವರೆಗೆ 39 ಸಿಬ್ಬಂದಿ ಸಾವು
ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡವರ ಪೈಕಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 15, ಕಾರ್ಯದರ್ಶಿಗಳು 5, ಡಾಟಾ ಎಂಟ್ರಿ ಆಪರೇಟರ್‌ಗಳು 4, ವಾಟರ್‌ಮನ್‌ 3, ಕರ ವಸೂಲಿಗಾರರು 6, ಸ್ವಚ್ಛತಾಗಾರರು 2, ಗ್ರಂಥಪಾಲಕರು, ಕ್ಲರ್ಕ್‌, ಜವಾನ, ಗುಮಾಸ್ತ ತಲಾ ಒಬ್ಬರು ಸೇರಿ 39 ಮಂದಿ ಸೋಂಕು ತಗಲಿ ಮೃತಪಟ್ಟಿರುವ ಮಾಹಿತಿ ಇದೆ.

ಈ ಪೈಕಿ, ದಾವಣಗೆರೆ ಜಿಲ್ಲೆಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯೊಬ್ಬರಿಗೆ ₹ 20 ಲಕ್ಷ ಪರಿಹಾರ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಒಬ್ಬ ಕರ ವಸೂಲಿಗಾರ ಮತ್ತು ಜವಾನನಿಗೆ ತಲಾ ₹ 17 ಲಕ್ಷ ಪರಿಹಾರ ನೀಡಲಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಜೈನಾಪುರ ಗ್ರಾಮ ಪಂಚಾಯಿತಿಯ ಕರ ವಸೂಲಿಗಾರ ಶಿವಾನಂದ ರಾಮಪ್ಪ ಘರಬುಡೆ ಮತ್ತು ಸವದತ್ತಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರ ಈರಪ್ಪ ಶ್ರೀಶೈಲಾ ಯಕ್ಕುಂಡಿ ಅವರ ಕುಟುಂಬಕ್ಕೆ ತಲಾ ₹ 30 ಲಕ್ಷ ಬಿಡುಗಡೆ ಮಾಡುವಂತೆ ಇದೇ 13ರಂದು ಆದೇಶ ಹೊರಡಿಸಲಾಗಿದೆ ಎಂದು ಇಲಾಖೆಯ ಮೂಲಗಳು ಹೇಳಿವೆ.

***

ನಮ್ಮ ಇಲಾಖೆಯ ಸಿಬ್ಬಂದಿಗೆ ಏನೇ ಆದರೂ ಶೇ 100ರಷ್ಟು ಜವಾಬ್ದಾರಿಯನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳಲಿದೆ. ಬೇರೆ ಇಲಾಖೆಗಳಂತೆ ನಮ್ಮ ನೌಕರರಿಗೂ ಪರಿಹಾರ ಕೊಡಲು ಬದ್ಧ.
-ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.