ADVERTISEMENT

ನೀರಾವರಿ ಯೋಜನೆಗಳಿಗೆ ಅನುದಾನ: ಕೇಂದ್ರಕ್ಕೆ ₹11,123 ಕೋಟಿ ಪ್ರಸ್ತಾವ

ಸಿ.ಆರ್.ಪಾಟೀಲರಿಗೆ ಡಿಕೆಶಿ ಮನವಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 14:45 IST
Last Updated 25 ಫೆಬ್ರುವರಿ 2025, 14:45 IST
ಸಿ.ಆರ್.ಪಾಟೀಲ ಅವರಿಗೆ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದರು. ವಿ.ಸೋಮಣ್ಣ ಇದ್ದಾರೆ 
ಸಿ.ಆರ್.ಪಾಟೀಲ ಅವರಿಗೆ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದರು. ವಿ.ಸೋಮಣ್ಣ ಇದ್ದಾರೆ    

ನವದೆಹಲಿ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕರ್ನಾಟಕದ ಆರು ನೀರಾವರಿ ಯೋಜನೆಗಳಿಗೆ ₹11,123 ಕೋಟಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದೆ. 

ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಹಾಗೂ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿದ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀರಾವರಿ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದರು. 

ಮನವಿಯಲ್ಲಿ ಏನಿದೆ?

ADVERTISEMENT

ಭದ್ರಾ ಎಡದಂಡೆ ಕಾಲುವೆಯ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸುವ ಯೋಜನೆಗೆ ಕೇಂದ್ರ ಜಲ ಆಯೋಗಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯು 226 ಕಿ.ಮೀ ಉದ್ದ ಹರಿಯಲಿದ್ದು, ಉತ್ತರ ಕರ್ನಾಟಕದ 2,44,103 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲಿದೆ. ಈ ಯೋಜನೆಯಿಂದಾಗಿ ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ಸಮನಾಂತರವಾಗಿ ಹಂಚಿಕೆಯಾಗಲಿದೆ. ಜತೆಗೆ 96,400 ಹೆಕ್ಟೇರ್ ಪ್ರದೇಶದ ರೈತರಿಗೆ ನೆರವಾಗಲಿದೆ. 

ಘಟಪ್ರಭಾ ಬಲದಂಡೆ ಪ್ರಮುಖ ಕಾಲುವೆಯ 199 ಕಿ.ಮೀವರೆಗೆ ಹಾಗೂ ಚಿಕ್ಕೋಡಿ ಭಾಗದ ಕಾಲುವೆ 30 ಕಿ.ಮೀ. ನಿಂದ 88.25 ಕಿ.ಮೀ. ವರೆಗೆ ಕಾಲುವೆಗಳ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ಫೆಬ್ರುವರಿ 10ರಂದು ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದ ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಬೆಣ್ಣಿಹಳ್ಳದಿಂದ ಮಲಪ್ರಭಾದ ಸಂಗಮದವರೆಗೂ ಪ್ರವಾಹ ನಿಯಂತ್ರಣ ಹಾಗೂ ಪ್ರವಾಹ ನಿರ್ವಹಣೆಯ ಕಾಮಗಾರಿ ನಡೆಸಲು ಅನುದಾನ ನೀಡಬೇಕು.

ಸೋಂತಿ ಏತ ನೀರಾವರಿ ಯೋಜನೆಯ ಮೂಲಕ ಸೋಂತಿ ಬ್ಯಾರೇಜ್‌ನಿಂದ ನೀರನ್ನು ಎತ್ತಿ ಕಾಲುವೆಗಳ ಮೂಲಕ ಬರಪೀಡಿತ ಚಿತ್ತಾಪುರ, ಯಾದಗಿರಿ ತಾಲ್ಲೂಕಿನಲ್ಲಿ 16,000 ಹೆಕ್ಟೇರ್ ಕೃಷಿ ಭೂಮಿಗೆ 4 ಟಿಎಂಸಿ ನೀರನ್ನು ಒದಗಿಸಲಾಗುತ್ತದೆ. ರಾಜ್ಯ ಸರ್ಕಾರವು ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಲ್ಲಿಸಿತ್ತು. ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ತಾಂತ್ರಿಕ ಸಲಹಾ ಸಮಿತಿಯು ₹673.90 ಕೋಟಿ ಮೊತ್ತದ ಡಿಪಿಆರ್‌ಗೆ 2015ರಲ್ಲಿ ಅನುಮೋದನೆ ನೀಡಿತ್ತು. ಅರಣ್ಯ ಸಚಿವಾಲಯದ ಅನುಮತಿಗೆ 2017ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ಈ ಯೋಜನೆಯ ಮೊತ್ತ ₹804.66 ಕೋಟಿಗೆ ಏರಿಕೆಯಾಗಿದೆ. ಜತೆಗೆ ಅಗತ್ಯವಿರುವ ಅನುಮತಿಯನ್ನು ನೀಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ಸೂಚಿಸಬೇಕು. 

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಪ್ರಮುಖ ಭಾಗವಾಗಿರುವ 172 ಕಿ.ಮೀ ಉದ್ದದ ಇಂಡಿ ಕಾಲುವೆ ಯೋಜನೆಯು ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ 1.31 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ. ಹೀಗಾಗಿ, ಇಂಡಿ ಕಾಲುವೆಯ 64.00 ಕಿ.ಮೀ. ನಿಂದ 172 ಕಿ.ಮೀ. ವರೆಗೂ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ಈ ಯೋಜನೆಗಾಗಿ ಪೂರ್ವ ಕಾರ್ಯಸಾಧ್ಯತಾ ವರದಿ ಸಲ್ಲಿಸಲಾಗಿದೆ. 

ಮಲಪ್ರಭಾ ಕಾಲುವೆ ಯೋಜನೆಯ ಮೂರನೇ ಹಂತದಲ್ಲಿ ಕಾಲುವೆಗಳ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ. ಈ ಯೋಜನೆಯಿಂದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. 

‘ಮೇಕೆದಾಟು: ಶೀಘ್ರ ಸಭೆ’
ಮೇಕೆದಾಟು ಯೋಜನೆ ಬಗ್ಗೆ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಶೀಘ್ರದಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.